ಸಿದ್ದರಾಮಯ್ಯ ತಾವು 2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಈ ನಿರ್ಧಾರಕ್ಕೆ ಕಾರಣವನ್ನೂ ಹೇಳಿದ್ದಾರೆ. ಚುನಾವಣೆಯಿಂದ ದೂರ ಉಳಿದ ಸಿದ್ದರಾಮಯ್ಯ ರಾಜಕೀಯ ನಿವೃತ್ತಿಯಾಗುತ್ತಾರಾ?

ಬೆಂಗಳೂರು (ಜು.26) ಕರ್ನಾಟಕ ಕಾಂಗ್ರೆಸ್ ರಾಜ್ಯದಲ್ಲಿ ಪಕ್ಷ ಸಂಘಟನೆ ಬಲಗೊಳಿಸುತ್ತಿದೆ. ಒಂದೆಡೆ ಆಡಳಿತದಲ್ಲಿ ಹಲವು ಅಡೆ ತಡೆ ಎದುರಾದರು ಎಲ್ಲವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಮುನ್ನಡೆಯುತ್ತಿದೆ. ಸಿದ್ದರಾಮಯ್ಯ ಬಳಿಕ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ರಾಜ್ಯದ ಜವಾಬ್ದಾರಿ ಹೊತ್ತುಕೊಂಡಿದ್ದರೆ, ಇತ್ತ ಸಿದ್ದರಾಮಯ್ಯ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕಲುಷಿತಗೊಂಡ ರಾಜಕಾರಣದಿಂದ ಚುನಾವಣಾ ಅಖಾಡದಿಂದ ದೂರ

ಸಿದ್ದರಾಮಯ್ಯ ತಾವು ಚುನಾವಣಾ ಅಖಾಡದಿಂದ ದೂರ ಉಳಿಯಲು ಸದ್ಯದ ಕಲುಷಿತಗೊಂಡಿರುವ ರಾಜಕೀಯ ಎಂದಿದ್ದಾರೆ. ಸ್ವಚ್ಚ ಹಾಗೂ ಶುಭ್ರ ರಾಜಕೀಯ ಜೀವನದಲ್ಲಿದ್ದ ಸಿದ್ದರಾಮಯ್ಯಗೆ ಸದ್ಯದ ರಾಜಕಾರಣದಿಂದ ಬೇಸತ್ತಿ ಹೋಗಿದ್ದಾರೆ ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನ, ಆಡಳಿತ, ಚುನಾವಣೆ, ಸೋಲು ಗೆಲುವು ಸೇರಿದಂತೆ ಹಲವು ಘಟನೆಗಳನ್ನು ಮೆಲುಕು ಹಾಕಿದ್ದಾರೆ.

ಸಕ್ರೀಯ ರಾಜಕಾರಣದಲ್ಲಿರುತ್ತಾರ ಸಿದ್ದಾಮಯ್ಯ

ರಾಜಕೀಯ ಕ್ಷೇತ್ರ ಇಂದು ಕಲುಷಿತಗೊಂಡಿರುವುದರಿಂದ 2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಆದರೆ, ಸಕ್ರಿಯ ರಾಜಕಾರಣದಲ್ಲಿದ್ದು, ಜನರ ಕಷ್ಟ, ಸುಖಗಳಿಗೆ ಧ್ವನಿಯಾಗಿ ನಿಲ್ಲುತ್ತೇನೆ. ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ವರುಣ ಕ್ಷೇತ್ರದ ಜನರು ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಅಂದುಕೊಂಡಿದ್ದೇನೆ. ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ಕ್ಷೇತ್ರದ ಜನರೇ ನಮಗೆ ದುಡ್ಡುಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ, ಇಂದು ಅಂತಹ ಪರಿಸ್ಥಿತಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

2028ರ ಚುನಾವಣೆ ವೇಳೆ ಸಿದ್ದು ರಾಜಕೀಯ ಜೀವನಕ್ಕೆ 50 ವರ್ಷ

ನನಗೆ 79 ವರ್ಷ. ನಮ್ಮ ಸರ್ಕಾರದ ಅವಧಿ ಇನ್ನು ಒಂದೂವರೆ ವರ್ಷ ಇದೆ. ಆಗ ನನಗೆ 81-82 ವರ್ಷವಾಗಿರುತ್ತದೆ. ಈಗಿನಂತೆ ಆರೋಗ್ಯವೂ ಸದೃಢವಾಗಿ ಇರುವುದಿಲ್ಲ. ಹಿಂದಿನಂತೆ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. 2028ರ ವೇಳೆಗೆ ನನಗೆ 82 ವರ್ಷವಾಗಿರುತ್ತದೆ. ಆಗ ನನ್ನ ರಾಜಕೀಯ ಜೀವನಕ್ಕೆ 50 ವರ್ಷಗಳು ಪೂರ್ಣಗೊಳ್ಳುತ್ತದೆ. 1978ರಲ್ಲಿ ನಾನು ತಾಲೂಕು ಮಂಡಳಿ ಸದಸ್ಯನಾಗಿ ರಾಜಕೀಯ ಜೀವನ ಆರಂಭಿಸಿದ್ದೆ. ಸೋಲು - ಗೆಲುವು ಎಲ್ಲವನ್ನೂ ಕಂಡಿದ್ದೇನೆ. ಆದರೆ ನಂಬಿದ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದಿಲ್ಲ, ಆತ್ಮಸಾಕ್ಷಿಗೆ ದ್ರೋಹ ಬಗೆದಿಲ್ಲ ಎನ್ನುವ ಸಂತೃಪ್ತಿ ನನಗಿದೆ.

ಪ್ರಮಾಣಿಕ ರಾಜಕಾರಣಕ್ಕೆ ಉಳಿಗಾಲವಿಲ್ಲ

ಚುನಾವಣೆಯಲ್ಲಿ ಸ್ಪರ್ಧಿಸಿದರೆ ನಾವು ಜನರಿಗೆ ದುಡ್ಡುಕೊಡಬೇಕಾದ ಕಾಲ ಬಂದಿದೆ. ಇಂದು ರಾಜಕಾರಣ ಸಾಕಷ್ಟು ಕಲುಷಿತವಾಗಿದೆ. ಪ್ರಾಮಾಣಿಕ ರಾಜಕಾರಣಕ್ಕೆ ಉಳಿಗಾಲ್ಲವಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗಳಲ್ಲಿ ನಾನು ಸ್ಪರ್ಧಿಸುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ. ಐದು ದಶಕಗಳ ಕಾಲ ರಾಜ್ಯದ ಜನತೆ ನನ್ನನ್ನು ತಮ್ಮಲ್ಲೊಬ್ಬ ಎಂಬಂತೆ ಕಂಡಿದ್ದಾರೆ, ಪ್ರೀತಿಯಿಂದ ಸಲಹಿದ್ದಾರೆ. ಈ ಋಣಭಾರ ನನ್ನ ಮೇಲಿದೆ. ಹೀಗಾಗಿ ನನ್ನ ಮುಂದಿನ ಜೀವನ ಸಹ ಜನಸೇವೆಗೆ ಮುಡಿಪಾಗಿರುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.