ಉಡುಪಿಯಲ್ಲಿ ಮತ್ತೆ ಹಿಜಾಬ್ ಕಿರಿಕ್, ಪ್ರಚೋದನಕಾರಿ ಗೋಡೆ ಬರಹ ಪತ್ತೆ
* ಕಡಲತೀರದ ಬೈಲ ಕೆರೆಯಲ್ಲಿ ಹಿಜಾಬ್ ಬೆಂಬಲಿಸಿ ಗೋಡೆ ಬರಹ
* ಉಡುಪಿ ಜಿಲ್ಲೆಯ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಕಂಡುಬಂದ ಬರಹ
* ಸ್ಥಳದಲ್ಲಿ ಸೇರಿದ ನೂರಾರು ಹಿಂದೂ ಕಾರ್ಯಕರ್ತರು
* ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಹಿಂದೂ ಸಂಘಟನೆಗಳ ಒತ್ತಾಯ
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್ , ಉಡುಪಿ
ಉಡುಪಿ, (ಮಾ.17): ಹಿಜಬ್ ವಿವಾದ (Hijab Row) ಸದ್ಯಕ್ಕಂತೂ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೈಕೋರ್ಟ್ ತೀರ್ಪು ಬಂದ ನಂತರ ವಿವಾದಕ್ಕೆ ಪೂರ್ಣವಿರಾಮ ಬೀಳಬಹುದು ಎಂದು ಭಾವಿಸಿದ್ದು ಸುಳ್ಳಾಗಿದೆ. ತೀರ್ಪಿನ ಬೆನ್ನಲ್ಲೇ ಉಡುಪಿ ಜಿಲ್ಲೆಯ ಮಲ್ಪೆ ಪರಿಸರದಲ್ಲಿ ಪ್ರಚೋದನಕಾರಿ ಗೋಡೆ ಬರಹವೊಂದು ಕಾಣಿಸಿಕೊಂಡಿದೆ.
ಹಿಜಾಬ್ ನಮ್ಮ ಹಕ್ಕು ಎಂದು ಪ್ರತಿಪಾದಿಸಿ ಉಡುಪಿ(Udupi) ಜಿಲ್ಲೆಯ ಆರು ಮಂದಿ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ಹನ್ನೊಂದು ದಿನಗಳ ವಿಚಾರಣೆ ನಡೆದು, ಮತ್ತಷ್ಟು ಮಾಹಿತಿ ಸಂಗ್ರಹಿಸಿ, ಹೈಕೋರ್ಟ್ ವಿಸ್ತೃತ ತೀರ್ಪು ನೀಡಿದೆ. ಆದರೆ ಹಿಜಾಬ್ ಪರ ಹೋರಾಟಗಾರರಿಗೆ ಮಾತ್ರ ನ್ಯಾಯಾಲಯದ ತೀರ್ಪು ಸಮ್ಮತವಾಗಲಿಲ್ಲ. ತಮ್ಮ ಅಸಮಾಧಾನ ಹೊರ ಹಾಕಲು ಗುರುವಾರ ಮುಸ್ಲಿಂ ವರ್ತಕರು ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿದ್ದರು. ಉಡುಪಿ ಜಿಲ್ಲೆಯಲ್ಲೂ ಕೂಡ ಮುಸ್ಲಿಮರ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಉಡುಪಿ ಜಿಲ್ಲೆಯಲ್ಲಿ ಹಿಜಬ್ ಪರ ಹೋರಾಟ ಈಗ ಮತ್ತೊಂದು ಆಯಾಮ ಪಡೆದಿದೆ. ಈವರೆಗೆ ವಿದ್ಯಾರ್ಥಿನಿಯರ ಬಾಯಲ್ಲಿ ಮಾತ್ರ ಕೇಳಿಬರುತ್ತಿದ್ದ ಘೋಷವಾಕ್ಯ, ಗೋಡೆ ಬರಹಗಳಲ್ಲೂ ಮೂಡಿದೆ.
Karnataka bandh: ಉಡುಪಿಯಲ್ಲಿ ಅಂಗಡಿ-ಮುಂಗಟ್ಟು ಮುಚ್ಚಿದ ಮುಸ್ಲಿಂ ವ್ಯಾಪಾರಿಗಳು
ಗುರುವಾರ ಸಂಜೆಯ ವೇಳೆಗೆ ಉಡುಪಿ ಜಿಲ್ಲೆಯ ಮಲ್ಪೆ ಪರಿಸರದ ಬೈಲಕೆರೆಯಲ್ಲಿ ಹಿಜಬ್ ಬೆಂಬಲಿಸುವ ಪ್ರಚೋದನಕಾರಿ ಬರಹ ಕಾಣಿಸಿಕೊಂಡಿದೆ. ಪಾಳುಬಿದ್ದಿದ್ದ ಕಟ್ಟಡವೊಂದರ ಆವರಣಗೋಡೆ ಯಲ್ಲಿ, ಹಿಜಬ್ ಮೂವ್ ಮೆಂಟ್ ಮತ್ತು ಹಿಜಬ್ ಈಸ್ ಅವರ್ ರೈಟ್ ಎಂದು ಬರೆಯಲಾಗಿರುವ ಗೋಡೆಬರಹವ ನ್ನು ಸಾರ್ವಜನಿಕರು ಗಮನಿಸಿದ್ದಾರೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲೂ ಇದೇ ಮಾದರಿಯ ಬರಹ ಕಂಡುಬಂದಿತ್ತು.
ವಿಷಯ ತಿಳಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಲ್ಪೆ ಪರಿಸರದಲ್ಲಿ ಜಮಾಯಿಸಿದ್ದಾರೆ. 250ರಿಂದ 300 ಕಾರ್ಯಕರ್ತರು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವ ಈ ಬರಹದ ಹಿಂದಿರುವ ಆರೋಪಿಗಳನ್ನು ಪತ್ತೆ ಮಾಡುವಂತೆ ಪೊಲೀಸರಿಗೆ ಒತ್ತಡ ಹೇರಿದ್ದಾರೆ. ವೃತ್ತನಿರೀಕ್ಷಕ ಶರಣಬಸವ ಪಾಟೀಲ್ ನೇತೃತ್ವದಲ್ಲಿ ಮಲ್ಪೆ ಪೊಲೀಸರ ತಂಡ ಸ್ಥಳದಲ್ಲಿದ್ದು ಹಿಂದೂ ಕಾರ್ಯಕರ್ತರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆಕ್ರೋಶಗೊಂಡ ಕಾರ್ಯಕರ್ತರು ಶೀಘ್ರ ಆರೋಪಿಗಳ ಪತ್ತೆಗೆ ಒತ್ತಾಯಿಸಿದ್ದಾರೆ. ಕೊನೆಗೂ ಪೊಲೀಸರ ಮನವೊಲಿಕೆಗೆ ಒಪ್ಪಿ, ಸ್ಥಳದಿಂದ ತೆರಳಿದ್ದಾರೆ. ಪ್ರಚೋದನಕಾರಿ ಬರಹವನ್ನು ತಕ್ಷಣವೇ ಗೋಡೆಯಿಂದ ಅಳಿಸಿ ಹಾಕುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.
ನ್ಯಾಯಾಲಯದ ಆದೇಶವನ್ನು ಈ ರೀತಿ ಸಾರ್ವಜನಿಕವಾಗಿ ಪ್ರಶ್ನಿಸುವುದು ಎಷ್ಟು ಸರಿ? ಈ ಬಗ್ಗೆ ಸೂಕ್ತ ಪ್ರಕರಣ ದಾಖಲಿಸಿ ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕು ಎಂಬ ಆಗ್ರಹದೊಂದಿಗೆ ಸ್ಥಳದಲ್ಲಿ ಸೇರಿದ್ದ ಜನರು ವಾಪಾಸಾಗಾಗಿದ್ದಾರೆ. ಮಲ್ಪೆ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲು ಸಿದ್ಧತೆ ನಡೆಯುತ್ತಿದೆ.