Asianet Suvarna News Asianet Suvarna News

ಬಿಎಂಟಿಸಿ ಚಾಲಕನ ಮೃತದೇಹ ಡಿಪೋ ಮುಂದಿಟ್ಟು ಪ್ರತಿಭಟನೆ

  • ಬಿಎಂಟಿಸಿ ಚಾಲಕನ ಮೃತದೇಹ ಡಿಪೋ ಮುಂದಿಟ್ಟು ಪ್ರತಿಭಟನೆ
  • ನ್ಯಾಯಕ್ಕಾಗಿ ಹೋರಾಟ
  • -ಚಾಲಕ ಹೊಳೆಬಸಪ್ಪಗೆ ಅಧಿಕಾರಿಗಳ ಕಿರುಕುಳ ಆರೋಪ
  • ಕುಟುಂಬಸ್ಥರ ಪ್ರತಿಭಟನೆಗೆ ಕೆಆರ್‌ಎಸ್‌, ಆಮ್‌ಆದ್ಮಿ ಪಾರ್ಟಿ ಬೆಂಬಲ
Protest in front of BMTC drivers dead body depot at bengaluru
Author
First Published Aug 31, 2022, 4:30 AM IST

ಬೆಂಗಳೂರು (ಆ.31) : ಹಲವು ವರ್ಷಗಳ ಒಂದೇ ಒಂದು ರಸ್ತೆ ಅಪಘಾತ ಮಾಡದೇ ಅತ್ಯುತ್ತಮ ಚಾಲಕ ಎಂದು ‘ಮುಖ್ಯಮಂತ್ರಿಗಳ ಬೆಳ್ಳಿ ಪದಕ’ ಪಡೆದಿದ್ದ ಚಾಲಕ ಹೊಳೆಬಸಪ್ಪ ಅವರ ಮೃತದೇಹ ಮಂಗಳವಾರ ದಿನಪೂರ್ತಿ ಬಿಎಂಟಿಸಿ ಡಿಪೋ ಮುಂಭಾಗದ ಪುಟ್ಬಾತ್‌ ಮೇಲಿತ್ತು. ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಚಾಲಕನ ಹೊಳೆಬಸಪ್ಪ (49) ಅವರ ಸಾವಿಗೆ ಡಿಪೋ ಅಧಿಕಾರಿಗಳ ಕಿರುಕುಳ ಕಾರಣ ಎನ್ನಲಾಗಿತ್ತು. ಹೀಗಾಗಿ, ಮೃತದೇಹವನ್ನು ಮಂಗಳವಾರ ರಾಜರಾಜೇಶ್ವರಿ ನಗರ ಚನ್ನಸಂದ್ರ ಬಿಎಂಟಿಸಿ ಡಿಪೋ ಮುಂಭಾಗದಲ್ಲಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.\

ಅಧಿಕಾರಿಗಳ ಕಿರುಕುಳಕ್ಕೆ ಡಿಪೋದಲ್ಲಿಯೇ ಬಿಎಂಟಿಸಿ ಚಾಲಕ ಆತ್ಮಹತ್ಯೆ!

ಕುಟುಂಬಸ್ಥರು ಮಂಗಳವಾರ ಬೆಳಿಗ್ಗೆ ವಿಕ್ಟೋರಿಯಾ ಆಸ್ಪತ್ರೆಯಿಂದ ಮೃತದೇಹವನ್ನು ಪಡೆದು ನೇರವಾಗಿ ಚನ್ನಸಂದ್ರ ಬಿಎಂಟಿಸಿ ಡಿಪೋಗೆ ತಂದರು. ಶವದ ಪೆಟ್ಟಿಗೆ ಮುಂದೆ ಮೃತರ ಪತ್ನಿ ಆಕ್ರಂದನ ಮುಗಿಲು ಮುಟ್ಟಿತ್ತು. ಅಂಗವಿಕಲ ಮಗಳು ಹಾಗೂ ಮಗ ತಂದೆಯ ಸಾವಿಗೆ ನ್ಯಾಯ ಕೊಡಿಸುವಂತೆ ಅಂಗಲಾಚಿದರು. ಕುಟುಂಬಸ್ಥರೊಂದಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್‌) ಮತ್ತು ಆಮ್‌ಆದ್ಮಿ ಪಾರ್ಟಿ ಕಾರ್ಯಕರ್ತರು, ನೂರಾರು ಸಂಖ್ಯೆಯಲ್ಲಿ ಬಿಎಂಟಿಸಿ ನೌಕರರು ಜತೆಯಾಗಿ ಬಿಎಂಟಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಸ್ಥಳಕ್ಕೆ ಸಾರಿಗೆ ಸಚಿವರು ಬರಬೇಕು, ಕಿರುಕುಳ ನೀಡಿದ ಡಿಪೋ ವ್ಯವಸ್ಥಾಪಕರನ್ನು ಬಂಧಿಸಬೇಕು ಎಂದು ಪ್ರತಿಭಟನಾನಿರತರು ಪಟ್ಟಿಹಿಡಿದರು.

ವ್ಯವಸ್ಥಾಪಕನ ಉಳಿಸಲು ಬಿಬಿಎಂಪಿ ಪ್ರಯತ್ನ?

ಕಿರುಕುಳ ಆರೋಪವಿರುವ ಡಿಪೋ ವ್ಯವಸ್ಥಾಪಕ ಮೇಲೆ ಬಿಎಂಟಿಸಿ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಆತನನ್ನು ಬೇರೊಂದು ಡಿಪೋಗೆ ವರ್ಗಾಯಿಸಿ ಪೊಲೀಸ್‌ ಬಂದನದಿಂದ ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಚಾಲಕನೊಬ್ಬ ಡಿಪೋ ಆವರಣದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಸೌಜನಕ್ಕೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶರು, ಹಿರಿಯ ಅಧಿಕಾರಿಗಳು ಕುಟುಂಬಸ್ಥರ ಭೇಟಿ ಮಾಡಿಲ್ಲ ಎಂದು ಪ್ರತಿಭಟನಾನಿರತರು ಬಿಎಂಟಿಸಿ ವಿರುದ್ಧ ಕಿಡಿಕಾರಿದರು.

ಮೃತ ಚಾಲಕನ ಪತ್ನಿಗೆ ಅಧಿಕಾರಿಗಳ ಬೆದರಿಕೆ?

ಡಿಪೋ ವ್ಯವಸ್ಥಾಪಕರ ಕಿರುಕುಳದಿಂದಲೇ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರ್‌ ಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ಮೃತ ಹೊಳೆಬಸಪ್ಪ ಪತ್ನಿ ಸೀಮಾ ದೂರು ನೀಡಿದ್ದು, ಬಿಎಂಟಿಸಿ ಡಿಪೋ ವ್ಯವಸ್ಥಾಪಕನ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ದೂರು ವಾಪಸು ಪಡೆಯುವಂತೆ ಪತ್ನಿ ಸೀಮಾಗೆ ಬಿಎಂಟಿಸಿ ಅಧಿಕಾರಿಗಳು ಒತ್ತಡ ಹಾಕುತ್ತಿದ್ದು, ಅಧಿಕಾರಿಗಳ ವಿರುದ್ಧ ದೂರು ನೀಡಿದರೆ ಯಾವುದೇ ಪರಿಹಾರವಿಲ್ಲ ಎಂದು ಹೆದರಿಸುವ ಪ್ರಯತ್ನಗಳಾಗಿವೆ ಎಂಬ ಆರೋಪ ಕುಟುಂಬಸ್ಥರಿಂದ ಕೇಳಿಬಂದಿದೆ.

ಮಹಿಳೆಯರ ವಿರುದ್ಧ ಅಪರಾಧ: ಬೆಂಗಳೂರು ದೇಶದಲ್ಲೇ ನಂ.3!

ಅಧಿಕಾರಿಗಳ ಭೇಟಿ, ಭರವಸೆ ಬಳಿಕ ಮೃತದೇಹ ಹುಟ್ಟೂರಿಗೆ

ಸಂಜೆ ಎಂಟು ಗಂಟೆಗೆ ಬಿಎಂಟಿಸಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕುಟುಂಬಸ್ಥರ ಮನವೊಲಿದರು. ಸ್ಥಳದಲ್ಲಿ 50 ಸಾವಿರ ರು. ತುರ್ತು ಸಹಾಯಧನ ನೀಡಿದರು. ಶುಕ್ರವಾರದೊಳಗೆ ಆಂತರಿಕ ತನಿಖೆ ನಡೆಸಿ ಡಿಪೋ ವ್ಯವಸ್ಥಾಪಕನ ಅಮಾನತು ಮಾಡುವ ಮತ್ತು ಒಂದು ವಾರದೊಳಗೆ ಕುಟುಂಬಸ್ಥರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದರು. ಮೃತನ ಹುಟ್ಟೂರಾದ ಜಮಖಂಡಿಗೆ ಮೃತದೇಹವನ್ನು ಕಳುಹಿಸುವ ವ್ಯವಸ್ಥೆಯನ್ನು ಬಿಎಂಟಿಸಿಯಿಂದಲೇ ಮಾಡಲಾಯಿತು. ಇನ್ನು ಪ್ರತಿಭಟನೆ ಬೆನ್ನಲೆ ಬಿಎಂಟಿಸಿ ಅಧ್ಯಕ್ಷ ನಂದೀಶ್‌ ರೆಡ್ಡಿ ಒಂದು ಲಕ್ಷ ರು. ಪರಿಹಾರ ಘೋಷಿಸಿದ್ದಾರೆ.

Follow Us:
Download App:
  • android
  • ios