ಫಿರೋಜಾಬಾದ್‌ನಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 19 ವರ್ಷದ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಪರಾಧ ಮರೆಮಾಚಲು ಸಹಕರಿಸಿದ ಆತನ ಕುಟುಂಬಕ್ಕೂ ಶಿಕ್ಷೆ. ಕೇವಲ ೨೫ ದಿನಗಳಲ್ಲಿ ವಿಚಾರಣೆ ಪೂರ್ಣ.

ಲಕ್ನೋ (ಆ.1): ಕಳೆದ ಜೂನ್‌ನಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 19 ವರ್ಷದ ಯುವಕನಿಗೆ ಫಿರೋಜಾಬಾದ್‌ನ ಪೋಕ್ಸೊ ನ್ಯಾಯಾಲಯವು "ಕೊನೆಯ ಉಸಿರಿನವರೆಗೂ" ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧವನ್ನು ಮರೆಮಾಚಿದ್ದಕ್ಕಾಗಿ ಆತನ ಪೋಷಕರು ಮತ್ತು 22 ವರ್ಷದ ಸಹೋದರನಿಗೆ ತಲಾ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇನ್ನೊಂದು ವಿಚಾರವೆಂದರೆ, ಇಡೀ ಕೇಸ್‌ನ ವಿಚಾರಣಾ ಪ್ರಕ್ರಿಯೆ ಕೇವಲ 25 ದಿನಗಳಲ್ಲಿ ಪೂರ್ಣಗೊಂಡಿದೆ.

ಹತ್ರಾಸ್ ಮೂಲದ 4 ನೇ ತರಗತಿಯ ವಿದ್ಯಾರ್ಥಿನಿ ಬೇಸಿಗೆ ರಜೆಯಲ್ಲಿ ತನ್ನ ಅಜ್ಜಿಯ ಮನೆಗೆ ಹೋಗಿದ್ದಾಗ ಈ ಅಪರಾಧ ನಡೆದಿದೆ. ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ (ಎಡಿಜಿಸಿ) ಅವಧೇಶ್ ಭಾರದ್ವಾಜ್ ಅವರಿಂದ ಪಡೆದ ವಿವರಗಳ ಪ್ರಕಾರ, ಅಜ್ಜಿಯ ಮನೆಯ ಹೊರಗೆ ಆಟವಾಡುತ್ತಿದ್ದಾಗ ಮಗು ನಾಪತ್ತೆಯಾಗಿತ್ತು. "ಪಕ್ಕದ ಮನೆಯಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಆ ದಿನ ಮಗುವನ್ನು ಹತ್ತಿರದ ಅಂಗಡಿಯಿಂದ ಆಹಾರ ಖರೀದಿಸಲು ಕಳುಹಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿತ್ತು' ಎಂದಿದ್ದಾರೆ.

ಸಣ್ಣ ಎನ್ಕೌಂಟರ್ ನಂತರ ಪೊಲೀಸರು ಅಂತಿಮವಾಗಿ ಪ್ರಮುಖ ಆರೋಪಿಯನ್ನು ಬಂಧಿಸಿದರು. ಅವನ ಬಳಿ ಅಕ್ರಮ ಆಯುಧ ಮತ್ತು ಮಗುವಿನ ಕುತ್ತಿಗೆಯಲ್ಲಿದ್ದ ಚೈನ್‌ ಪತ್ತೆಯಾಗಿತ್ತು. ವಿಚಾರಣೆಯ ಸಮಯದಲ್ಲಿ, ಅವನು ತಪ್ಪೊಪ್ಪಿಕೊಂಡಿದ್ದಲ್ಲದೆ, ಮರುದಿನ ತನ್ನ ಮನೆಗೆ ಪೊಲೀಸ್‌ ಅಧಿಕಾರಿಗಳನ್ನು ಕರೆದೊಯ್ದಿದ್ದ. ಅಲ್ಲಿ ಬಾಲಕಿಯ ಶವವನ್ನು ಇಟ್ಟಿಗೆಗಳ ರಾಶಿಯ ಅಡಿಯಲ್ಲಿ ಮರೆಮಾಡಿದ ಚೀಲದಿಂದ ವಶಪಡಿಸಿಕೊಳ್ಳಲಾಗಿತ್ತು. ಆಕೆಯ ಮೇಲೆ ಅತ್ಯಾಚಾರ ಮಾಡಿದಲ್ಲದೆ, ಕತ್ತು ಹಿಸುಕಿ ಕೊಲ್ಲಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

"ಮಗುವಿನ ಮೃತದೇಹವನ್ನು ಮರೆಮಾಡಲು ಆ ವ್ಯಕ್ತಿಯ ಪೋಷಕರು ಮತ್ತು ಸಹೋದರ ಕೂಡ ಸಹಾಯ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ" ಎಂದು ಎಡಿಜಿಸಿ ತಿಳಿಸಿದೆ.

ಅವರಲ್ಲಿ ಮೂವರನ್ನು ಬಂಧಿಸಲಾಯಿತು ಮತ್ತು ನಾಲ್ವರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯ ಜೊತೆಗೆ ಬಿಎನ್‌ಎಸ್ ಸೆಕ್ಷನ್ 65-2 (16 ವರ್ಷದೊಳಗಿನ ಮಹಿಳೆಯ ಮೇಲೆ ಅತ್ಯಾಚಾರ) ಮತ್ತು 66 (ಸಾವಿಗೆ ಕಾರಣವಾಗುವ ಕ್ರಿಯೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.

ಅಪರಾಧದ ಘೋರ ಸ್ವರೂಪವನ್ನು ಪರಿಗಣಿಸಿ, ತನಿಖಾ ತಂಡವು ಪ್ರಕರಣವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡಿತು. ತನಿಖೆಯ ಸಮಯದಿಂದ ಶಿಕ್ಷೆ ವಿಧಿಸುವವರೆಗಿನ ಸಂಪೂರ್ಣ ಪ್ರಕರಣದ ಪ್ರಕ್ರಿಯೆಯು ಸುಮಾರು 44 ದಿನಗಳನ್ನು ತೆಗೆದುಕೊಂಡಿತು ಎಂದು ಪೊಲೀಸರು ತಿಳಿಸಿದ್ದಾರೆ. ಡಿಎನ್‌ಎ ವರದಿಯಲ್ಲಿ ಆರೋಪಿಯ ವೀರ್ಯ ಮಗುವಿನ ಬಟ್ಟೆ ಹಾಗೂ ಯೋನಿಯ ಒಳಪದರದಲ್ಲಿ ಕಂಡುಬಂದಿದೆ. ಆರೋಪಿಯ ಕೂದಲು ಬಲಿಪಶುವಿನ ಕೈಕಾಲುಗಳಲ್ಲಿಯೂ ಕಂಡುಬಂದಿದೆ ಎಂದು ತಿಳಿಸಲಾಗಿದೆ.

ತಾಂತ್ರಿಕ ವಿಶ್ಲೇಷಣೆ, ವಿಧಿವಿಜ್ಞಾನ ವರದಿಗಳು ಮತ್ತು ಭೌತಿಕ ಸಾಕ್ಷ್ಯಗಳ ದತ್ತಾಂಶವನ್ನು "ತ್ವರಿತವಾಗಿ ಪೂರ್ಣಗೊಳಿಸಲಾಯಿತು ಮತ್ತು ವೈಜ್ಞಾನಿಕವಾಗಿ ಬೆಂಬಲಿತ 135 ಪುಟಗಳ ಆರೋಪಪಟ್ಟಿಯನ್ನು ಒಂದು ವಾರದೊಳಗೆ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು" ಎಂದು ಪೊಲೀಸರು ಹೇಳಿದರು. ವಿಶೇಷ (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶೆ ಮುಮ್ತಾಜ್ ಅಲಿ ಅವರು ನಾಲ್ವರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ ಬುಧವಾರ ತೀರ್ಪು ನೀಡಿದರು. 19 ವರ್ಷದ ಯುವಕನಿಗೆ 1.4 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಆತನ ಪೋಷಕರು ಮತ್ತು 22 ವರ್ಷದ ಸಹೋದರನಿಗೆ ತಲಾ 20,000 ರೂ. ದಂಡ ವಿಧಿಸಲಾಗಿದೆ.