ಪುತ್ತೂರಿನಲ್ಲಿ 7 ವರ್ಷಗಳ ಹಿಂದೆ ನಡೆದ ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾ*ಚಾರ ಎಸಗಿದ ಆರೋಪದ ಮೇಲೆ  ಗದಗದ ವ್ಯಕ್ತಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಬಾಲಕಿಗೆ 6 ಲಕ್ಷ ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.

DID YOU
KNOW
?
7 ವರ್ಷದ ಹಿಂದಿನ ಪ್ರಕರಣ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಾಡಿಗೆ ಮನೆಯಲ್ಲಿದ್ದು, ಪಕ್ಕದ ಮನೆ ಅಪ್ರಾಪ್ತ ಬಾಲಕಿಯನ್ನು ದೈಹಿಕವಾಗಿ ಬಳಸಿ ಗರ್ಭಿಣಿಯಾಗಲು ಕಾರಣನಾಗಿದ್ದ.

ಪುತ್ತೂರು: ಕಳೆದ 7 ವರ್ಷಗಳ ಹಿಂದೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ಪೀರೇಶ್ ಪೀರಪ್ಪ ಸಂಗಪ್ಪ ಮಾಲೋತ್ತರ ಎಂಬಾತನಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪುತ್ತೂರು ತಾಲೂಕಿನ ಮೈಂದನಡ್ಕ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅಪರಾಧಿ, ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ದಿಂಡೂರ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿಯ ನಿವಾಸಿ.

Add Asianetnews Kannada as a Preferred SourcegooglePreferred

2007ರ ಆಗಸ್ಟ್‌ನಲ್ಲಿ ಆರೋಪಿಯು ಅಪ್ರಾಪ್ತ ಬಾಲಕಿಯನ್ನು ಆಕೆಯ ಮೊಬೈಲ್ ಚಾರ್ಜ್ ಮಾಡಲು ತನ್ನ ಬಾಡಿಗೆ ಮನೆಗೆ ಆಗಮಿಸುವಂತೆ ಪುಸಲಾಯಿಸಿ ಅತ್ಯಾ*ಚಾರ ಎಸಗಿರುವುದು ಮತ್ತು ಬಳಿಕದ ದಿನಗಳಲ್ಲಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದ ಎಂದು ಆರೋಪಿಸಲಾಗಿತ್ತು. ಬಾಲಕಿಯ ತಾಯಿ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ಪ್ರಕರಣದಲ್ಲಿ ಒಟ್ಟು 18 ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು. ನ್ಯಾಯಾಧೀಶೆ ಸರಿತಾ ಡಿ. ಅವರು ಅಫರಾಧಿಗೆ ಭಾ.ದಂ.ಸ. ಕಲಂ 376 ರಡಿ ಅಪರಾಧಕ್ಕೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರು. 20ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಸಾದಾ ಶಿಕ್ಷೆ ಮತ್ತು ಭಾ.ದಂ.ಸ. ಕಲಂ 506 ರಡಿ ಅಪರಾಧಕ್ಕೆ 2 ವರ್ಷಗಳ ಸಾದಾ ಶಿಕ್ಷೆ ಮತ್ತು ರು. 5ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆ ಮತ್ತು ಪೋಕೋ ಕಾಯ್ದೆಯಡಿ ಅಪರಾಧಕ್ಕೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರು. 10ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಕಾರಾಗೃಹ ಶಿಕ್ಷೆಯನ್ನು ವಿಧಿಸಿರುತ್ತಾರೆ. ದಂಡ ಪ್ರಕ್ರಿಯಾ ಸಂಹಿತೆ ಕಲಂ 357ಎ ಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬಾಲಕಿಗೆ ರು. 6 ಲಕ್ಷ ಪರಿಹಾರ ರೂಪವಾಗಿ ನೀಡಬೇಕೆಂದು ಆದೇಶಿಸಿದೆ. ಸರ್ಕಾರದ ಪರ ಪೋಕೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.