ಭಾನುವಾರ ನಡೆದ ಘರ್ಷಣೆಯಲ್ಲಿ 30ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, ಗಾಯಗೊಂಡವರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು, ಈ ಪ್ರತಿಭಟನೆಯ ವರದಿ ಮಾಡುತ್ತಿದ್ದ ಸ್ಥಳೀಯ ಮಾಧ್ಯಮದವರ ಮೇಲೂ ಪ್ರತಿಭಟನಾಕಾರರು ದಾಳಿ ಮಾಡಿದ್ದಾರೆ.

ಕೇರಳದ ವಿಝಿಂಜಂನಲ್ಲಿ ಅದಾನಿ ಬಂದರು ವಿರೋಧಿ ಪ್ರತಿಭಟನಾಕಾರರು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದು, ಈ ದಾಳಿಯಲ್ಲಿ 30ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಕೇರಳ ರಾಜಧಾನಿ ತಿರುವನಂತಪುರಂನ ವಿಝಿಂಜಂನಲ್ಲಿ ಅದಾನಿ ಬಂದರಿನ ನಿರ್ಮಾಣ ವಿರೋಧಿಸಿದ ಪ್ರತಿಭಟನಾಕಾರರು ಭಾನುವಾರ ರಾತ್ರಿ ತಿರುವನಂತಪುರಂನ ಸ್ಥಳೀಯ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದು, ಧ್ವಂಸ ಮಾಡಿದ್ದಾರೆ. ಒಂದು ದಿನದ ಹಿಂದೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಐವರನ್ನು ಬಂಧಿಸಿದ ನಂತರ ರೊಚ್ಚಿಗೆದ್ದ ಪ್ರತಿಭಟನಾಕಾರರು ಈ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ನಡೆದ ಘರ್ಷಣೆಯಲ್ಲಿ 30ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, ಗಾಯಗೊಂಡವರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು, ಈ ಪ್ರತಿಭಟನೆಯ ವರದಿ ಮಾಡುತ್ತಿದ್ದ ಸ್ಥಳೀಯ ಮಾಧ್ಯಮದವರ ಮೇಲೂ ಪ್ರತಿಭಟನಾಕಾರರು ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: Madhya Pradesh: ರಾಮನವಮಿ ವೇಳೆ ಕೋಮು ಘರ್ಷಣೆ; 8ನೇ ತರಗತಿ ಬಾಲಕನಿಗೆ 2.9 ಲಕ್ಷ ರೂ. ದಂಡ..!

ಪ್ರತಿಭಟನಾಕಾರರು ನಾಲ್ಕು ಪೊಲೀಸ್ ಜೀಪ್ ಮತ್ತು ಮಿನಿವ್ಯಾನ್‌ಗೆ ಹಾನಿ ಮಾಡಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಇನ್ನು, ಘಟನೆ ಬಳಿಕ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದು, ನಗರ ಪೊಲೀಸ್ ಕಮಿಷನರ್ ಮತ್ತು ಇತರ ಅಧಿಕಾರಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ವಿಜಿಂಜಂ ಪೊಲೀಸ್ ಠಾಣೆಗೆ ದೌಡಾಯಿಸಿದ್ದರು.

ಶನಿವಾರದಂದು ಬಂದರು ವಿರೋಧಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ನಂತರ ಭಾನುವಾರ ಮುಂಜಾನೆ, ಆರ್ಚ್‌ಬಿಷಪ್ ಡಾ. ಥಾಮಸ್ ಜೆ ನೇಟೋ ಮತ್ತು ಸಹಾಯಕ ಬಿಷಪ್ ಕ್ರಿಸ್ಟುರಾಜ್ ಸೇರಿದಂತೆ ಕನಿಷ್ಠ 50 ಲ್ಯಾಟಿನ್ ಆರ್ಚ್‌ಡಯಾಸಿಸ್ ಪಾದ್ರಿಗಳ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಹಳೇಹುಬ್ಬಳ್ಳಿ ಗಲಭೆ: ವಿಶೇಷ ನ್ಯಾಯಾಲಯಕ್ಕೆ ಚಾರ್ಚ್‌ಶೀಟ್ ಸಲ್ಲಿಕೆ

ಬಂದರು ನಿರ್ಮಾಣ ಪುನಾರಂಭಿಸುವ ಅದಾನಿ ಗ್ರೂಪ್‌ನ ಪ್ರಯತ್ನವನ್ನು ಕರಾವಳಿ ನಿವಾಸಿಗಳು ತಡೆದ ಕಾರಣ ಶನಿವಾರ ವಿಝಿಂಜಂನಲ್ಲಿ ಉದ್ವಿಗ್ನತೆ ಹೆಚ್ಚಿತ್ತು. ಯೋಜನೆಯ ಬೆಂಬಲಿಗರು ಮತ್ತು ವಿರೋಧಿಗಳು ಘರ್ಷಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿದ್ದ 27 ಲಾರಿಗಳನ್ನು ಪ್ರತಿಭಟನಾಕಾರರು ತಡೆದಿದ್ದು, ಅವರು ವಾಹನಗಳ ಮುಂದೆ ಮಲಗಿದರು. ತೀವ್ರ ವಿರೋಧ ವ್ಯಕ್ತವಾದ ಕಾರಣ ಕಟ್ಟಡ ನಿರ್ಮಾಣ ಸಾಮಗ್ರಿ ಸಮೇತ ಬಂದ ಲಾರಿಗಳು ಯೋಜನಾ ಪ್ರದೇಶಕ್ಕೆ ಪ್ರವೇಶಿಸಲಾಗದೆ ವಾಪಸಾಗಬೇಕಾಯಿತು. ಕಟ್ಟಡ ನಿರ್ಮಾಣ ಕಾಮಗಾರಿಗೆ ಪೊಲೀಸ್ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯದ ಆದೇಶದ ಹೊರತಾಗಿಯೂ ಈ ಘಟನೆ ನಡೆದಿದೆ.

ಈ ಮಧ್ಯೆ, ಮುಷ್ಕರದ ಬಗ್ಗೆ ಪಿಣರಾಯಿ ವಿಜಯನ್ ಸರ್ಕಾರದ ಧೋರಣೆಯೂ ಬದಲಾಗುತ್ತಿದೆ. 104 ದಿನಗಳ ಮುಷ್ಕರದಿಂದ ಉಂಟಾದ ನಷ್ಟವನ್ನು ಲ್ಯಾಟಿನ್ ಆರ್ಚ್‌ಡಯಾಸಿಸ್‌ನಿಂದ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ. 200 ಕೋಟಿ ನಷ್ಟವಾಗಿದೆ ಎಂದು ಅದಾನಿ ಬಂದರು ನಿರ್ಮಾಣ ಕಂಪನಿ ಹೇಳಿಕೊಂಡಿದೆ.

ಇದನ್ನು ಓದಿ: ಗುಳಿಗ ದೈವದ ಮೊರೆ: ಗಲಭೆಗೆ ಯತ್ನಿಸಿದ ಕಿಡಿಗೇಡಿಗಳು ಅಂದರ್!

ಸಾರ್ವಜನಿಕ ಆಸ್ತಿ ನಾಶಪಡಿಸಿದರೆ, ಪ್ರತಿಭಟನಾಕಾರರಿಂದ ನಷ್ಟವನ್ನು ವಸೂಲಿ ಮಾಡಬೇಕು ಎಂದು ಹೈಕೋರ್ಟ್ ನೀಡಿದ ತೀರ್ಪಿನ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಇನ್ನು, ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ನವೆಂಬರ್ 28 ರಿಂದ ಡಿಸೆಂಬರ್ 4 ರವರೆಗೆ ಸ್ಥಳೀಯ ಮದ್ಯದಂಗಡಿಗಳನ್ನು ಬಂದ್‌ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜೆರೊಮಿಕ್ ಜಾರ್ಜ್ ಮಾಹಿತಿ ನೀಡಿದರು.

ಈ ಮಧ್ಯೆ, ವಿಜಿಂಜಂ ಮುಷ್ಕರದ ವೇಳೆ ನಡೆದ ಹಿಂಸಾಚಾರಕ್ಕೆ ಆರ್ಚ್‌ಬಿಷಪ್ ಸೇರಿದಂತೆ ಲ್ಯಾಟಿನ್ ಆರ್ಚ್‌ಡಯಾಸಿಸ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದು ಸ್ವೀಕಾರಾರ್ಹವಲ್ಲ ಎಂದು ಪ್ರತಿಪಕ್ಷದ ನಾಯಕ ವಿ.ಡಿ.ಸತೀಶನ್ ಹೇಳಿದ್ದಾರೆ. ಇದೊಂದು ಕಂಡು ಕೇಳರಿಯದ ಘಟನೆ ಎಂದ ಅವರು, ಅದಾನಿಗಾಗಿ ಏನು ಬೇಕಾದರೂ ಮಾಡುವ ಸ್ಥಿತಿಗೆ ಪಿಣರಾಯಿ ಸರ್ಕಾರ ತಲುಪಿದೆ ಎಂಬುದು ಪೊಲೀಸರ ಕ್ರಮದಿಂದ ಸ್ಪಷ್ಟವಾಗಿದೆ ಎಂದೂ ಸತೀಶನ್ ಆರೋಪಿಸಿದ್ದಾರೆ. 

ಇದನ್ನೂ ಓದಿ: ಮುತ್ತಿನ ನಗರಿಯಲ್ಲಿ ಮತೀಯ ಗಲಭೆಗೆ ಕುಮ್ಮಕ್ಕು: ಹೈದರಾಬಾದ್‌ನಲ್ಲಿ ಮೂವರು ಅಂದರ್