ಗುಳಿಗ ದೈವದ ಮೊರೆ: ಗಲಭೆಗೆ ಯತ್ನಿಸಿದ ಕಿಡಿಗೇಡಿಗಳು ಅಂದರ್!
ಇತ್ತೀಚೆಗೆ ನಡೆದ ಶಾರದೋತ್ಸವ ಬ್ಯಾನರ್ ಮತ್ತು ಕಟೌಟ್ ಗಳನ್ನು ಹರಿದು ಹಾಕಿ ಮಂಗಳೂರಿನಲ್ಲಿ ಕೋಮು ಗಲಭೆಗೆ ಯತ್ನಿಸಿದ್ದ ಮೂವರು ಆರೋಪಿಗಳು ಕೊನೆಗೂ ಅರೆಸ್ಟ್ ಆಗಿದ್ದಾರೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಅ.12) : ಇತ್ತೀಚೆಗೆ ನಡೆದ ಶಾರದೋತ್ಸವ ಬ್ಯಾನರ್ ಮತ್ತು ಕಟೌಟ್ ಗಳನ್ನು ಹರಿದು ಹಾಕಿ ಮಂಗಳೂರಿನಲ್ಲಿ ಕೋಮು ಗಲಭೆಗೆ ಯತ್ನಿಸಿದ್ದ ಮೂವರು ಆರೋಪಿಗಳು ಕೊನೆಗೂ ಅರೆಸ್ಟ್ ಆಗಿದ್ದಾರೆ. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಪೊಲೀಸರು ಮೌನವಾಗಿದ್ದರೂ ತುಳುನಾಡಿ(Tulunadu)ನ ಕಾರ್ನಿಕ ದೈವ ಶ್ರೀಮಂತ ಗುಳಿಗನ ಕ್ಷೇತ್ರಕ್ಕೆ ಮೊರೆಯಿಟ್ಟ ಬೆನ್ನಲ್ಲೇ ಪೊಲೀಸರು ಕೊನೆಗೂ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
Chikkamagaluru: ಚಾರ್ಮಾಡಿ ಘಾಟ್ ರಹಸ್ಯ: ಘಾಟ್ ಕಾಯುವ ತಾಯಿ ಗುಳಿಗಮ್ಮ!
ಆರೋಪಿಗಳಾದ ಸುಮಿತ್ ಹೆಗ್ಡೆ(Sumith Hegde), ಯತೀಶ್ ಪೂಜಾರಿ(Yateesh Poojari), ಪ್ರವೀಣ್ ಪೂಜಾರಿ(Praveen Poojari) ಬಂಧಿಸಿ ಕೃತ್ಯಕ್ಕೆ ಬಳಸಿದ ಕಾರು ಕೂಡ ವಶಕ್ಕೆ ಪಡೆಯಲಾಗಿದೆ.
ದಸರಾ(Dasara) ಹಿನ್ನೆಲೆಯಲ್ಲಿ ಶಾರದೋತ್ಸವ(Sharadotsava) ಸಮಿತಿ ಮತ್ತು ವಾಮಂಜೂರು ಫ್ರೆಂಡ್ಸ್(Vamanjooru Friends) ನೇತೃತ್ವದಲ್ಲಿ ವಾಮಂಜೂರು ಭಾಗದಲ್ಲಿ ಬ್ಯಾನರ್ ಮತ್ತು ಕಟೌಟ್ ಗಳನ್ನು ಅಳವಡಿಸಲಾಗಿತ್ತು. ಆದರೆ ಈ ಬ್ಯಾನರ್ ಗಳನ್ನು ಅಕ್ಟೋಬರ್ 8 ರ ಮಧ್ಯರಾತ್ರಿ ವಾಮಂಜೂರು ಬಳಿ ಕಿಡಿಗೇಡಿಗಳು ಹರಿದು ಹಾಕಿದ್ದರು. ಬ್ಯಾನರ್ ಹರಿದು ಈ ಕೃತ್ಯವನ್ನು ಅನ್ಯ ಧರ್ಮೀಯರ ತಲೆಗೆ ಕಟ್ಟಿ ಗಲಭೆ ಸೃಷ್ಟಿಸಲು ಯತ್ನಿಸಲಾಗಿತ್ತು ಎನ್ನಲಾಗಿದ್ದು, ಈ ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಅಕ್ಟೋಬರ್ 9 ರ ಬೆಳಗ್ಗೆಯೇ ವಾಮಂಜೂರು ಫ್ರೆಂಡ್ಸ್ ತಂಡ ಪೊಲೀಸ್ ದೂರು ನೀಡಿತ್ತು. ಆದರೆ ಸಿಸಿಟಿವಿ ಸಾಕ್ಷ್ಯವಿದ್ದರೂ ಪ್ರಕರಣ ದಾಖಲಿಸದೆ ಪೊಲೀಸರು ಮೌನವಾಗಿದ್ದರು. ಈ ಬಗ್ಗೆ ಮಂಗಳೂರು ಕಮಿಷನರ್ ಗೂ ಶಾರದೋತ್ಸವ ಸಮಿತಿ ದೂರು ನೀಡಿತ್ತು. ಕೋಮು ಸೂಕ್ಷ್ಮ ಪ್ರದೇಶದಲ್ಲಿ ಕೃತ್ಯ ನಡೆದಿರೋ ಕಾರಣ ಕಾನೂನು ಸುವ್ಯವಸ್ಥೆ ಹದಗೆಡೋ ಸಾಧ್ಯತೆಯಿದ್ದರೂ ಪೊಲೀಸರು ಆರೋಪಿಗಳನ್ನ ಬಂಧಿಸಿರಲಿಲ್ಲ. ಕೊನೆಗೆ ಬೇಸತ್ತು ಅಕ್ಟೋಬರ್ 11ರ ಬೆಳಗ್ಗೆ 11 ಗಂಟೆಗೆ ವಾಮಂಜೂರು ಫ್ರೆಂಡ್ಸ್ ತಂಡದ ಸದಸ್ಯರು ದೈವದ ಮೊರೆ ಹೋಗಿದ್ದರು.
ರಾಜಕೀಯ ಒತ್ತಡಕ್ಕೆ ಬಿದ್ದ ಪೊಲೀಸರು ಕೂಡ ಕ್ರಮ ಕೈಗೊಳ್ಳದ ಹಿನ್ನೆಲೆ ಪಚ್ವನಾಡಿ ಶ್ರೀಮಂತ ಗುಳಿಗ ದೇವಸ್ಥಾನದ ಮೊರೆ ಹೋಗಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿ ಅಂತ ಪ್ರಾರ್ಥನೆ ಸಲ್ಲಿಸಿ ಬಂದಿದ್ದರು. ಸಂಜೆ ಹೊತ್ತಿಗೆ ಮಂಗಳೂರು ಗ್ರಾಮಾಂತರ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಪ್ರತಿಭಟನೆಗೂ ಮುನ್ನವೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ದೈವದ ಎದುರಿನ ಪ್ರಾರ್ಥನೆಯ ಫಲ!
ತುಳುನಾಡಿನ ದೈವಗಳ ಕಾರ್ನಿಕ ಶಕ್ತಿಯ ಅನಾವರಣದ ಕಥೆಗಳು ಒಂದೆರಡಲ್ಲ. ಪೊಲೀಸ್ ಠಾಣೆ, ಕೋರ್ಟ್ ಗಳಲ್ಲಿ ಇತ್ಯರ್ಥವಾಗದ ಬಹುತೇಕ ಪ್ರಕರಣಗಳು ದೈವಗಳ ಮುಂದೆ ಕೈಯೊಡ್ಡಿ ಬೇಡಿಕೊಂಡ ಬೆನ್ನಲ್ಲೇ ಬಗೆಹರಿದ ಸಾವಿರಾರು ಉದಾಹರಣೆಗಳು ಈ ಭಾಗದಲ್ಲಿ ಜನಜನಿತ. ಹಾಗೆ ನೋಡಿದರೆ ವಾಮಂಜೂರಿನ ಈ ಘಟನೆ ಅದಕ್ಕೊಂದು ಸಣ್ಣ ಉದಾಹರಣೆ ಅಷ್ಟೇ. ಕೋಮುಸೂಕ್ಷ್ಮ ಮಂಗಳೂರಿನಲ್ಲಿ ಬ್ಯಾನರ್ ಹರಿಯುವ, ಗಲಭೆ ಹುಟ್ಟು ಹಾಕಲೆಂದೇ ಕಿಡಿಗೇಡಿ ಕೃತ್ಯ ಎಸಗುವ ಕ್ರಿಮಿಗಳ ಉಪಟಳಕ್ಕೆ ತಡೆ ಬಿದ್ದಿಲ್ಲ. ಆದರೆ ಇಂಥ ಘಟನೆಗಳಾಗದಂತೆ ಪೊಲೀಸರು ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಇಡೀ ಜಿಲ್ಲೆಯಲ್ಲಿ ಸಂಘರ್ಷದ ಕಿಡಿ ಹೊತ್ತಿಕೊಳ್ಳಬಹುದು. ಅದೇ ರೀತಿ ವಾಮಂಜೂರಿನ ಶಾರದೋತ್ಸವ ಬ್ಯಾನರ್ ಹರಿದ ಘಟನೆಯೂ ಜಿಲ್ಲೆಯ ಮಟ್ಟಿಗೆ ಅತೀ ಸೂಕ್ಷ್ಮ ವಿಚಾರ.
ಯಾರೋ ಕೃತ್ಯ ಎಸಗಿ ಇನ್ಯಾರದ್ದೋ ತಲೆಗೆ ಕಟ್ಟಿ ಕೋಮು ಗಲಭೆ ಸೃಷ್ಟಿಸುವ ಹುನ್ನಾರ ಇದರಲ್ಲಿತ್ತು ಎನ್ನಲಾಗಿದೆ. ಆದರೆ ಈ ವಿಚಾರದಲ್ಲಿ ತಕ್ಷಣ ಎಚ್ಚೆತ್ತುಕೊಳ್ಳಬೇಕಿದ್ದ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಮಾತ್ರ ರಾಜಕೀಯ ಒತ್ತಡಕ್ಕೆ ಬಿದ್ದು ಆರೋಪಿಗಳನ್ನ ಬಂಧಿಸುವ ಕೆಲಸಕ್ಕೆ ಕೈ ಹಾಕಿಲ್ಲ ಎನ್ನುವುದು ಸ್ಥಳೀಯರ ಆರೋಪ. ಹೀಗಾಗಿ ದೂರು ಕೊಟ್ಟು ದಿನ ಕಳೆದರೂ, ಸಿಸಿಟಿವಿ ಸಾಕ್ಷ್ಯವಿದ್ದರೂ ಪೊಲೀಸರು ಮಾತ್ರ ಸೈಲೆಂಟ್ ಆಗಿದ್ದರು.
Kantara ಸಿನಿಮಾದಲ್ಲಿ ಪಂಜುರ್ಲಿ ಹಾಗೂ ಗುಳಿಗನನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ?
ಹೀಗಾಗಿ ಕೊನೆಗೆ ವಾಮಂಜೂರು ಯುವಕರ ತಂಡ ಶ್ರೀಮಂತ ರಾಜ ಗುಳಿಗನ ಮೊರೆ ಹೋಗಿದೆ. ಆರೋಪಿಗಳಿಗೆ ಶಿಕ್ಷೆಯಾಗಲಿ ಅಂತ ದೈವದ ನಡೆಯಲ್ಲಿ ನಿಂತು ಪ್ರಾರ್ಥಿಸಿದೆ. ಕೊನೆಗೂ ಆ ಪ್ರಾರ್ಥನೆ ಫಲ ಕೊಟ್ಟಿದ್ದು, ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಕಾಂತಾರ ಸಿನಿಮಾ ಸದ್ದು ಮಾಡ್ತಿರೋ ಹೊತ್ತಲ್ಲೇ ತುಳುನಾಡು ಮತ್ತೊಮ್ಮೆ ದೈವದ ಕಾರ್ನಿಕಕ್ಕೆ ಸಾಕ್ಷಿಯಾಗಿದೆ.
ಪೊಲೀಸರಿಂದ ನ್ಯಾಯ ಸಿಗದಾಗ ದೈವದ ಮೊರೆ:
ಬ್ಯಾನರ್ ಹರಿದ ಘಟನೆ ನಡೆದು ಎರಡು ಮೂರು ದಿನ ಕಳೆದರೂ ಪೊಲೀಸರು ಪ್ರಕರಣ ದಾಖಲಿಸಲಿಲ್ಲ. ಸ್ಥಳೀಯ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಸುಮ್ಮನಿದ್ದರು. ನಾವು ಎಷ್ಟೇ ಒತ್ತಡ ಹಾಕಿದರೂ ಕ್ರಮ ಆಗಿರಲಿಲ್ಲ. ಹಾಗಾಗಿ ನಮ್ಮ ಯುವಕರ ತಂಡ ಪಚ್ಚನಾಡಿಯ ಶ್ರೀಮಂತ ರಾಜಗುಳಿಗನ ಸನ್ನಿಧಾನಕ್ಕೆ ಹೋಗಿ ಪ್ರಾರ್ಥನೆ ಮಾಡಿದೆವು. ಸಂಜೆಯ ಒಳಗೆ ಆರೋಪಿಗಳ ಬಂಧನವಾಗಿದೆ.
ಚಂದ್ರಶೇಖರ್, ಶಾರದೋತ್ಸವ ಸಮಿತಿ ಸ್ಥಾಪಕಾಧ್ಯಕ್ಷ