Crime News: ಜಾರ್ಖಂಡ್‌ನ ಜಮ್ತಾರಾದಲ್ಲಿ ವ್ಯಕ್ತಿಯೊಬ್ಬ ಮದುವೆಯ ನಂತರ ಜೀನ್ಸ್ ಧರಿಸುವುದನ್ನು ನಿರಾಕರಿಸಿದ ಕಾರಣಕ್ಕೆ ಆತನ ಪತ್ನಿಯೇ ಚಾಕುವಿನಿಂದ ಇರಿದು ಕೊಂದಿದ್ದಾಳೆ

ಜಾರ್ಖಂಡ್ (ಜು. 17): ಜಾರ್ಖಂಡ್‌ನ ಜಮ್ತಾರಾದಲ್ಲಿ ಮದುವೆಯ ನಂತರ ಜೀನ್ಸ್ (Jeans) ಧರಿಸುವುದನ್ನು ವಿರೋಧಿಸಿದ್ದಕ್ಕಾಗಿ ಮಹಿಳೆಯೊಬ್ಬಳು ತನ್ನ ಪತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ. ಜಮ್ತಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಜೋರ್ಭಿತ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಮಹಿಳೆಯನ್ನು ಪುಷ್ಪಾ ಹೆಂಬ್ರೋಮ್ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿಪುಷ್ಪಾ ಜೀನ್ಸ್ ಧರಿಸಿ ಗೋಪಾಲಪುರ ಗ್ರಾಮದಲ್ಲಿ ಜಾತ್ರೆಯನ್ನು ನೋಡಲು ಹೋಗಿದ್ದರು.

ಮಹಿಳೆ ಮನೆಗೆ ಹಿಂದಿರುಗಿದಾಗ, ದಂಪತಿಗಳ ಮಧ್ಯೆ ಉಡುಪಿನ ಬಗ್ಗೆ ವಾದ ವಿವಾದ ನಡೆದಿದೆ. ಮದುವೆಯ ನಂತರ ಜೀನ್ಸ್ ಧರಿಸಿದ್ದೇಕೆ ಎಂದು‌ ಪತಿ ಪ್ರಶ್ನಿಸಿದ್ದಾನೆ. ಗಂಡನ ಈ ಮಾತು ವಾಗ್ವಾದಕ್ಕೆ ಕಾರಣವಾಗಿದ್ದು ಕೋಪದ ಭರದಲ್ಲಿ ಪುಷ್ಪಾ ತನ್ನ ಗಂಡನ ಮೇಲೆ ಚಾಕುವಿನಿಂದ ಹಲ್ಲೆ (Attack) ಮಾಡಿದ್ದಾಳೆ. ಈ ವೇಳೆ ಗಂಡನಿಗೆ ತೀವ್ರ ಗಾಯಗಳಾಗಿವೆ. ಕುಟುಂಬ ಸದಸ್ಯರು ತಕ್ಷಣ ಅವರನ್ನು ಧನ್‌ಬಾದ್ ಪಿಎಂಸಿಎಚ್‌ಗೆ ಕರೆದೊಯ್ದರು ಆದರೆ ಅವರು ಸಾವನ್ನಪ್ಪಿದ್ದಾರೆ. 

ಇದನ್ನೂ ಓದಿ: 7 ಮಹಿಳೆಯರೊಂದಿಗೆ ಮದುವೆಯಾಗಿ ದ್ರೋಹ ಬಗೆದ ಖಿಲಾಡಿ: ಏಳರಲ್ಲಿ ಮೂವರು ಒಂದೇ ಓಣಿಯವರು

ಮೃತರ ತಂದೆ ಕರ್ಣೇಶ್ವರ ತುಡು ಮಾತನಾಡಿ, ಜೀನ್ಸ್ ಪ್ಯಾಂಟ್ ಹಾಕುವ ವಿಚಾರದಲ್ಲಿ ಮಗ ಮತ್ತು ಸೊಸೆ ನಡುವೆ ಜಗಳವಾಗಿತ್ತು. "ಜಗಳದ ವೇಳೆ ಪತ್ನಿಯೇ ಪತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ" ಎಂದು ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಹತ್ಯೆಗೆ ಬಳಸಿದ ಚಾಕುವನ್ನು ವಶಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ.

"ಘಟನೆಯ ಬಗ್ಗೆ ನಮಗೆ ಮಾಹಿತಿ ಬಂದಿದೆ. ಸಂತ್ರಸ್ತೆ ಧನಬಾದ್‌ನಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದರಿಂದ, ಧನ್‌ಬಾದ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ" ಎಂದು ಜಮ್ತಾರಾ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅಬ್ದುಲ್ ರೆಹಮಾನ್ ಹೇಳಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.