7 ಮಹಿಳೆಯರೊಂದಿಗೆ ಮದುವೆಯಾಗಿ ದ್ರೋಹ ಬಗೆದ ಖಿಲಾಡಿ: ಏಳರಲ್ಲಿ ಮೂವರು ಒಂದೇ ಓಣಿಯವರು
Andhra Man Conned Seven Wives: ಏಳು ಹೆಂಡತಿಯರಲ್ಲಿ ಮೂವರು ಒಂದೇ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಆದರೆ ತಮ್ಮ ಪತಿಯೂ ಅದೇ ಎಂದು ಅವರಿಗೆ ತಿಳಿದಿರಲಿಲ್ಲ.
ಆಂಧ್ರಪ್ರದೇಶ (ಜು. 17): ಆಂಧ್ರಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬೋಗಸ್ ವ್ಯಕ್ತಿಯೊಬ್ಬ ಬೋಗಸ್ ವಿಚ್ಛೇದನ ಪ್ರಮಾಣಪತ್ರದ ಆಧಾರದ ಮೇಲೆ ಒಬ್ಬರಲ್ಲ, ಇಬ್ಬರಲ್ಲ ಏಳು ಮಂದಿಯನ್ನು ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಶ್ರೀಮಂತ ಹಾಗೂ ವಿಚ್ಛೇದಿತ ಮಹಿಳೆಯರನ್ನು ಟಾರ್ಗೆಟ್ ಮಾಡಿ ಈತ ಲಕ್ಷಗಟ್ಟಲೆ ವಂಚಿಸಿದ್ದಾನೆ. ಆಶ್ಚರ್ಯವೆಂದರೆ ಈತನ ಏಳು ಮಂದಿ ಪತ್ನಿಯರಲ್ಲಿ ಮೂವರು ಒಂದೇ ಕಾಲೋನಿಯಲ್ಲಿ ವಾಸವಾಗಿದ್ದರು. ಆದರೆ ತಮ್ಮ ಮೂವರ ಪತಿಯೂ ಒಬ್ಬನ್ನೇ ಎಂದು ಅವರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ.
ವಂಚನೆಗೊಳಗಾದ ಇತರ ಮಹಿಳೆಯರು ಹೈದರಾಬಾದ್ ನಿವಾಸಿಗಳು ಎಂದು ತಿಳಿದುಬಂದಿದೆ. ಮಹಿಳೆಯರೆಲ್ಲರೂ ಉನ್ನತ ಶಿಕ್ಷಣ ಪಡೆದಿದ್ದು ಉತ್ತಮ ಉದ್ಯೋಗದಲ್ಲಿದ್ದಾರೆ. ಹೈದಾರಾಬಾದಿನ ಸೋಮಾಜಿಗುಡ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಇಬ್ಬರು ಮಹಿಳೆಯರು ತಮಗಾದ ವಂಚನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ ಏಳು ಮಂದಿ ಪತ್ನಿಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿ ವ್ಯಕ್ತಿ ಮತ್ತೊಬ್ಬ ಮಹಿಳೆಯೊಂದಿಗೆ ಜೀವನ ನಡೆಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
ವಿಚ್ಛೇದಿತ ಮಹಿಳೆಯರೇ ಟಾರ್ಗೇಟ್: ಆರೋಪಿಯನ್ನು ಅಡಪ ಶಿವಶಂಕರ್ ಬಾಬು ಎಂದು ಗುರುತಿಸಲಾಗಿದ್ದು, ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಬೆಟಪುಡಿ ಗ್ರಾಮದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಎಂಜಿನಿಯರಿಂಗ್ ಪದವೀಧರನಾಗಿದ್ದು ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ಎರಡನೇ ಮದುವೆಗೆ ನೋಂದಣಿ ಮಾಡಿಕೊಂಡಿರುವ ಮಹಿಳೆಯರನ್ನು ಮೋಸ ಮಾಡುತ್ತಿದ್ದ. ತನಗೆ ವಿಚ್ಛೇದನವಾಗಿದೆ ಮತ್ತು ಮಗಳಿದ್ದಾಳೆ ಎಂದು ಮಹಿಳೆಯರಿಗೆ ಹೇಳುತ್ತಿದ್ದ. ಅಲ್ಲದೇ ವಿಚ್ಛೇದನ ಪ್ರಮಾಣಪತ್ರವನ್ನೂ ತೋರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಈ ರಾಜ್ಯದಲ್ಲಿ ಎರಡನೇ ಮದುವೆಯಾಗಲು ಸರ್ಕಾರದ ಪರ್ಮಿಷನ್ ಅಗತ್ಯ, ಮಕ್ಕಳಿಗೂ ಸಂಕಷ್ಟ!
ಶಿವಶಂಕರ್ ತಾನು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 2 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದೇನೆ ಎಂದು ಬಿಂಬಿಸುತ್ತಿದ್ದ. ಹೀಗಾಗಿ ವಿಚ್ಛೇದಿತ ಮಹಿಳೆಯರ ಕುಟುಂಬಗಳು ತಮ್ಮ ಹೆಣ್ಣು ಮಕ್ಕಳನ್ನು ವರದಕ್ಷಿಣೆ ಕೊಟ್ಟು ಶಿವಶಂಕರ್‌ಗೆ ಮದುವೆ ಮಾಡಿಕೊಡುತ್ತಿದ್ದರು.
ಮದುವೆಯಾದ ನಂತರ ಶಿವಶಂಕರ್ ಪತ್ನಿಗೆ ಕೆಲಸ ಬಿಡುವಂತೆ ಹೇಳುತ್ತಿದ್ದ. ಶಿವಶಂಕರ್ ಕಂಪನಿಯವರು ಪ್ರಾಜೆಕ್ಟ್ ಗಾಗಿ ಅಮೆರಿಕಕ್ಕೆ ಕಳುಹಿಸುವುದಾಗಿ ಹೇಳಿ ಪತ್ನಿಯ ಕುಟುಂಬದಿಂದ ಲಕ್ಷಗಟ್ಟಲೆ ಹಣ ಪಡೆಯುತ್ತಿದ್ದ. ಆದರೆ ನಂತರ ಯುಎಸ್ ಪ್ರವಾಸವನ್ನು ರದ್ದುಗೊಳಿಸಲಾಯಿತು ಎಂದು ನಂಬಿಸುತ್ತಿದ್ದ.
ಮನೆಯವರು ಹಣ ಹಿಂತಿರುಗಿಸುವಂತೆ ಕೇಳಿದರೆ ಏನೆನೋ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಈ ಸಂಬಂಧ ಸಂತ್ರಸ್ತ ಮಹಿಳೆಯೊಬ್ಬರು ರಾಮಚಂದ್ರಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಒಂದೇ ಕಾಲೋನಿಯ ಮೂವರು ಮಹಿಳೆಯರೊಂದಿಗೆ ವಿವಾಹ: ಇನ್ನು ಇಬ್ಬರೂ ಮಹಿಳೆಯರು ಪರಸ್ಪರರ ನಂಬರ್ ವಿನಿಮಯ ಮಾಡಿಕೊಂಡ ಬಳಿಕ ಸಂಪರ್ಕಕ್ಕೆ ಬಂದಿದ್ದು ಶಿವಶಂಕರ್ ಮಾಡುತ್ತಿದ್ದ ಮೋಸ ಬೆಳಕಿಗೆ ಬಂದಿದೆ. ಇಬ್ಬರೂ ಒಂದೇ ರೀತಿಯಲ್ಲಿ ಮೋಸ ಹೋಗಿದ್ದಾರೆ. ಶಿವಶಂಕರ್ ಎರಡನೇ ಹೆಂಡತಿ ತನ್ನ ಕಿರಿಯ ಸಹೋದರರನ್ನು ಅವನ ಮೇಲೆ ಕಣ್ಣಿಡುವಂತೆ ಕೇಳಿಕೊಂಡಿದ್ದರು. ಈ ವೇಳೆ ಶಿವಶಂಕರ್ ಒಂದೇ ಕಾಲೋನಿಯಲ್ಲಿ ಮೂವರು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದು ಬಯಲಾಗಿದೆ.
ಇದನ್ನೂ ಓದಿ: ಇಲ್ಲಿ, ತಂದೆಯನ್ನೇ ಮಗಳು ಮದುವೆಯಾಗೋ ಸಂಪ್ರದಾಯವಿದೆ
ಇಬ್ಬರು ಪತ್ನಿಯರಿಗೆ ತನ್ನ ಬಗ್ಗೆ ನಿಜವಾದ ಮಾಹಿತಿ ತಿಳಿದಿದೆ ಎಂದು ತಿಳಿದ ತಕ್ಷಣ ಶಿವಶಂಕರ್ ಪರಾರಿಯಾಗಿದ್ದಾನೆ. ನಂತರ ಇಬ್ಬರು ಮಹಿಳೆಯರು ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸಿದ್ದಾರೆ. ಆಗ ಅವರಿಗೆ ಶಿವಶಂಕರ್ ಒಟ್ಟು ಏಳು ಜನರನ್ನು ಮದುವೆಯಾದ ಬಗ್ಗೆ ಅರಿವಾಗಿದೆ.