Bengaluru: 1.5 ಲಕ್ಷಕ್ಕೆ ನಕಲಿ ಪಾಸ್‌ಪೋರ್ಟ್ ದಂಧೆ ಬಯಲು: 9 ಮಂದಿ ಬಂಧನ
ಕಾನೂನು ಬಾಹಿರವಾಗಿ ವಿದೇಶಿ ಪ್ರಜೆಗಳು ಮತ್ತು ಅಪರಾಧ ಹಿನ್ನೆಲೆಯ ವ್ಯಕ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್ ತಯಾರಿಸಿ ಕೊಡುತ್ತಿದ್ದ ದೊಡ್ಡ ಜಾಲವೊಂದನ್ನು ಭೇದಿಸಿದ ಬಸವನಗುಡಿ ಠಾಣೆ ಪೊಲೀಸರು, ಐವರು ವಿದೇಶಿ ಪ್ರಜೆಗಳು ಸೇರಿದಂತೆ 9 ಮಂದಿಯನ್ನು ಬಂಧಿಸಿದ್ದಾರೆ.
ಬೆಂಗಳೂರು (ನ.10): ಕಾನೂನು ಬಾಹಿರವಾಗಿ ವಿದೇಶಿ ಪ್ರಜೆಗಳು ಮತ್ತು ಅಪರಾಧ ಹಿನ್ನೆಲೆಯ ವ್ಯಕ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್ ತಯಾರಿಸಿ ಕೊಡುತ್ತಿದ್ದ ದೊಡ್ಡ ಜಾಲವೊಂದನ್ನು ಭೇದಿಸಿದ ಬಸವನಗುಡಿ ಠಾಣೆ ಪೊಲೀಸರು, ಐವರು ವಿದೇಶಿ ಪ್ರಜೆಗಳು ಸೇರಿದಂತೆ 9 ಮಂದಿಯನ್ನು ಬಂಧಿಸಿದ್ದಾರೆ. ಶ್ರೀಲಂಕಾ ಪ್ರಜೆಗಳಾದ ಸೆಲ್ವಿ, ರವಿಕುಮಾರ್, ಶೀಜು, ಮಣಿವೇಲು, ವಿಶಾಲ್ ನಾರಾಯಣ್, ಲಿಂಗರಾಜಪುರದ ಪಾಸ್‌ಪೋರ್ಟ್ ಏಜೆಂಟ್ ಅಮೀನ್ ಸೇಠ್, ಸೈಬರ್ ಸೆಂಟರ್ ಮಾಲಿಕ ರಾಕೇಶ್, ಮಂಗಳೂರಿನ ಸವಾಲ್ ಹಾಗೂ ಹೈದರ್ ಬಂಧಿತರಾಗಿದ್ದು, ತಪ್ಪಿಸಿಕೊಂಡಿರುವ 10ಕ್ಕೂ ಹೆಚ್ಚಿನ ಮಂದಿಗೆ ಹುಡುಕಾಟ ನಡೆದಿದೆ.
1.5 ಲಕ್ಷಕ್ಕೆ ಪಾಸ್‌ಪೋರ್ಟ್ ರೆಡಿ: ಲಿಂಗರಾಜಪುರದ ಅಮೀನ್ ಸೇಠ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ನಕಲಿ ಪಾಸ್‌ಪೋರ್ಟ್ ದಂಧೆಗೆ ಆತ ಕುಖ್ಯಾತನಾಗಿದ್ದಾನೆ. ಈತನ ವಿರುದ್ಧ ಜಯನಗರ, ಡಿ.ಜೆ.ಹಳ್ಳಿ, ಪುಲಿಕೇಶಿ ನಗರ, ಅನ್ನಪೂರ್ಣೇಶ್ವರಿ ನಗರ, ಭಾರತಿ ನಗರ, ಸಿಟಿ ಮಾರ್ಕೆಟ್ ಹಾಗೂ ಮಾದನಾಯಕನಹಳ್ಳಿ ಠಾಣೆಗಳಲ್ಲಿ 6 ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಜೈಲು ಸೇರಿದರೂ ಜಾಮೀನು ಪಡೆದು ಹೊರಬಂದು ಮತ್ತೆ ತನ್ನ ಚಾಳಿಯನ್ನು ಅಮೀನ್ ಮುಂದುವರೆಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಣದಾಸೆ ತೋರಿಸಿ ತನ್ನ ದಂಧೆಗೆ ಜೆರಾಕ್ಸ್ ಹಾಗೂ ಸೈಬರ್ ಸೆಂಟರ್ ಅಂಗಡಿ ಮಾಲಿಕ ರಾಕೇಶ್‌ನನ್ನು ಅಮೀನ್ ಬಳಸಿಕೊಂಡಿದ್ದ.
ತಡವಾಗಿ ಬೇಡಿಕೆ ಸಲ್ಲಿಸಿದ ಶಾಲೆಗಳಿಗೆ ಮಾತ್ರ ಪಠ್ಯ ಪೂರೈಕೆಯಾಗಿಲ್ಲ: ಕೆಟಿಬಿಎಸ್
ರೌಡಿಗಳು ಸೇರಿದಂತೆ ಕ್ರಿಮಿನಲ್ ಹಿನ್ನೆಲೆಯುವರು ಹಾಗೂ ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ವಿದೇಶಿಗರಿಗೆ ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟನ್ನು ಅಮೀನ್ ವಿತರಿಸುತ್ತಿದ್ದ. ಇದಕ್ಕಾಗಿ 1ರಿಂದ 1.5 ಲಕ್ಷ ಪಡೆಯುತ್ತಿದ್ದ. ತನ್ನನ್ನು ಪಾಸ್‌ಪೋರ್ಟ್‌ಗೆ ಸಂಪರ್ಕಿಸಿದರೆ ಆ ವ್ಯಕ್ತಿಯ ಪೂರ್ವಾಪರ ಮಾಹಿತಿ ಪಡೆಯುತ್ತಿದ್ದ ಅಮೀನ್, ತರುವಾಯ ಬೇರೊಬ್ಬನ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಸಿದ್ಧಪಡಿಸುತ್ತಿದ್ದ. ಇದಕ್ಕಾಗಿ ಅಗತ್ಯವಾದ ಆಧಾರ್ ಕಾರ್ಡ್, ಮತದಾರರ ಗುರುತಿನ ಪತ್ರ ಸೇರಿ ಎಲ್ಲ ದಾಖಲೆಗಳನ್ನು ಖೊಟ್ಟಿದಾಖಲಾಗಿದ್ದವು. ಇದುವರೆಗೆ 50 ಮಂದಿಗೆ ಪಾಸ್‌ಪೋರ್ಟ್ ಮಾಡಿಸಿಕೊಟ್ಟಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಬಸವನಗುಡಿ ಠಾಣಾ ವ್ಯಾಪ್ತಿಯಲ್ಲಿ ಐವರು ಶ್ರೀಲಂಕಾ ಪ್ರಜೆಗಳು ಸೇರಿದಂತೆ 20 ಮಂದಿಗೆ ನಕಲಿ ಪಾಸ್‌ಪೋರ್ಟ್ ಫಲಾನುಭವಿಗಳು ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ರೌಡಿ ವಿದೇಶಕ್ಕೆ ಪರಾರಿ ನೀಡಿದ ಸುಳಿವು: 2 ವರ್ಷದ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ರೌಡಿ ಸಾದಿಕ್ ಪಾಷ, ಆತನ ಸೋದರ ಹಾಗೂ ಸಹಚರ ಸೇರಿ ಮೂವರು ಪರಾರಿಯಾಗಿದ್ದರು. ಈ ಮೂವರ ಮೇಲೆ 36 ಮನೆಗಳ್ಳನ ಪ್ರಕರಣಗಳು ದಾಖಲಾಗಿದ್ದವು. ಇತ್ತೀಚೆಗೆ ಸಾದಿಕ್ ಬೆನ್ನಹತ್ತಿದ್ದಾಗ ಹಾಸನ ಪೊಲೀಸರಿಗೆ ಮಹಮ್ಮದ್ ಕರೀಂ ಹೆಸರಿನಲ್ಲಿ ಆತನ ಪಾಸ್‌ಪೋರ್ಟ್ ಪತ್ತೆಯಾಗಿದೆ. ಈ ಬಗ್ಗೆ ಜಾಲಾಡಿದಾಗ ಪಾಷನಿಗೆ ಅಮೀನ್ ಜತೆ ನಂಟು ಬಯಲಾಗಿದೆ. ಅ.16ರಂದು ನಗರಕ್ಕೆ ಆಗಮಿಸಿದ ಹಾಸನ ಪೊಲೀಸರು, ಅಮೀನ್ ಕುರಿತು ಬಸವನಗುಡಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣವೇ ಕಾರ್ಯಾಚರಣೆಗಿಳಿದ ಪೊಲೀಸರು, ನಕಲಿ ಪಾಸ್‌ಪೋರ್ಟ್ ಜಾಲವನ್ನು ಹೆಡೆ ಮುರಿಕಟ್ಟಿದ್ದಾರೆ.
ಭಾರತೀಯರ ಹೆಸರಿನಲ್ಲಿ ವಿದೇಶಕ್ಕೆ ಹೋಗಲು ಯತ್ನ: ರಾಜಕೀಯ ಹಾಗೂ ಆರ್ಥಿಕ ಸಂಕಷ್ಟದ ಹಿನ್ನಲೆಯಲ್ಲಿ ತಮ್ಮ ದೇಶ ತೊರೆದು ಭಾರತಕ್ಕೆ ಬಂದು 6 ತಿಂಗಳಿಂದ ನಗರದಲ್ಲಿ ಶ್ರೀಲಂಕಾ ಪ್ರಜೆಗಳು ನೆಲೆಸಿದ್ದರು. ರಾಜಕೀಯ ಅಸ್ಥಿರತೆ ಕಾರಣಕ್ಕೆ ಶ್ರೀಲಂಕಾ ಪ್ರಜೆಗಳಿಗೆ ಕೆಲ ದೇಶಗಳು ವೀಸಾ ನೀಡಲು ನಿರಾಕರಿಸಿವೆ. ಹೀಗಾಗಿ ಭಾರತೀಯ ಹೆಸರಿನಲ್ಲಿ ಪಾಸ್‌ಪೋರ್ಟ್ ಪಡೆದು ಗಲ್‌್ಫ ಸೇರಿದಂತೆ ಇತರೆ ವಿದೇಶದಲ್ಲಿ ನೆಲೆಸಲು ಶ್ರೀಲಂಕಾ ಪ್ರಜೆಗಳು ಮುಂದಾಗಿದ್ದರು. ಇದಕ್ಕಾಗಿ ತಮ್ಮ ಪರಿಚಿತರ ಮೂಲಕ ಪಾಸ್‌ಪೋರ್ಟ್ ಏಜೆಂಟ್ ಅಮೀನ್ ಸೇಠ್‌ನನ್ನು ಅವರು ಸಂಪರ್ಕಿಸಿದ್ದರು.
ಇಬ್ಬರು ಪೊಲೀಸರ ತಲೆದಂಡ: ಪಾಸ್‌ಪೋರ್ಟ್ ಪರಿಶೀಲನೆಯಲ್ಲಿ ಕರ್ತವ್ಯ ಲೋಪವೆಸಗಿದ ಆರೋಪದ ಮೇರೆಗೆ ಬಸವನಗುಡಿ ಠಾಣೆ ಕಾನ್‌ಸ್ಟೇಬಲ್‌ಗಳಾದ ಜೆ.ಮಧುಸೂದನ್ ಹಾಗೂ ವಸಂತ್ ಅವರನ್ನು ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಅಮಾನತುಗೊಳಿಸಿದ್ದಾರೆ. ಪಾಸ್‌ಪೋರ್ಟ್ ಕಚೇರಿಯಿಂದ ಅರ್ಜಿದಾರರ ಪೂರ್ವಪರ ಪರಿಶೀಲನೆಗೆ ಪೊಲೀಸ್ ಠಾಣೆಗೆ ಅರ್ಜಿಗಳು ರವಾನೆಯಾಗುತ್ತವೆ. ಆಗ ಅರ್ಜಿದಾರರ ಪೂರ್ವಾಪರ ಪರಿಶೀಲನೆ ವೇಳೆ ಪೊಲೀಸರು ಕರ್ತವ್ಯಲೋಪ ಮಾಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಬಗ್ಗೆ ಬಿಜೆಪಿ ರಾಜಕೀಯ: ಡಿ.ಕೆ.ಶಿವಕುಮಾರ್
ಕೊರೋನಾ ಕಾಲದಲ್ಲಿ ಆನ್‌ಲೈನ್ ಮೂಲಕ ಪಾಸ್‌ಪೋರ್ಟ್ ಅರ್ಜಿಗಳ ಪರಿಶೀಲನೆ ನಡೆಸಲಾಗುತ್ತಿತ್ತು. ಆ ಸಮಯದ ಲಾಭ ಪಡೆದು ನಕಲಿ ಪಾಸ್‌ಪೋರ್ಟ್‌ಗಳನ್ನು ಆರೋಪಿಗಳು ಸೃಷ್ಟಿಸಿದ್ದಾರೆ.
-ಸಿ.ಎಚ್.ಪ್ರತಾಪ್ ರೆಡ್ಡಿ, ನಗರ ಪೊಲೀಸ್ ಆಯುಕ್ತ