Asianet Suvarna News Asianet Suvarna News

ಸತೀಶ್‌ ಜಾರಕಿಹೊಳಿ ಬಗ್ಗೆ ಬಿಜೆಪಿ ರಾಜಕೀಯ: ಡಿ.ಕೆ.ಶಿವಕುಮಾರ್‌

ಸತೀಶ್‌ ಜಾರಕಿಹೊಳಿ ಅವರು ಹಿಂದೂ ಪದದ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಪಕ್ಷದ ಅಧ್ಯಕ್ಷನಾಗಿ ನಾನು ಈಗಾಗಲೇ ಖಂಡಿಸಿದ್ದೇನೆ. ಸಮರ್ಥಿಸಿಕೊಳ್ಳುವ ಪ್ರಶ್ನೆ ಇಲ್ಲ. ನಮ್ಮ ಪಕ್ಷದ ಇತರೆ ನಾಯಕರೂ ಇದನ್ನು ಸ್ಪಷ್ಟಪಡಿಸಿದ್ದಾರೆ. 

KPCC President DK Shivakumar Slams On BJP Over Satish Jarkiholi Statement gvd
Author
First Published Nov 10, 2022, 11:13 AM IST

ಬೆಂಗಳೂರು (ನ.10): ಸತೀಶ್‌ ಜಾರಕಿಹೊಳಿ ಅವರು ಹಿಂದೂ ಪದದ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಪಕ್ಷದ ಅಧ್ಯಕ್ಷನಾಗಿ ನಾನು ಈಗಾಗಲೇ ಖಂಡಿಸಿದ್ದೇನೆ. ಸಮರ್ಥಿಸಿಕೊಳ್ಳುವ ಪ್ರಶ್ನೆ ಇಲ್ಲ. ನಮ್ಮ ಪಕ್ಷದ ಇತರೆ ನಾಯಕರೂ ಇದನ್ನು ಸ್ಪಷ್ಟಪಡಿಸಿದ್ದಾರೆ. ಆದರೂ, ಬಿಜೆಪಿಯವರು ಪ್ರತಿಭಟನೆ ಮಾಡುವುದಾದರೆ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸತೀಶ್‌ ಜಾರಕಿಹೊಳಿ ತಾವು ಹೇಳಿರುವ ಅಂಶ ಯಾವುದೋ ಪುಸ್ತಕದಲ್ಲಿದೆ ಎಂದು ಹೇಳಿದ್ದಾರೆ. 

ಅದ್ಯಾವ ಪುಸ್ತಕದಲ್ಲಿದೆಯೋ ನಂಗಂಗೂ ಗೊತ್ತಿಲ್ಲ. ಆದರೆ, ಪಕ್ಷದ ಅಧ್ಯಕ್ಷನಾಗಿ ನಾನು ಇದನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದರು. ಈ ಬಗ್ಗೆ ನಾನು, ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ ಅವರು ಈಗಾಗಲೇ ಖಂಡಿಸಿದ್ದೇವೆ. ನನ್ನ ಧರ್ಮ ಸಂಸ್ಕೃತಿ ಸೇರಿದಂತೆ ಯಾವುದಕ್ಕೂ ಧಕ್ಕೆ ಆಗಬಾರದು ಎಂದರು. ಅವರ ಹೇಳಿಕೆ ತಪ್ಪು ಎಂದು ಹೇಳಿಯಾಗಿದೆ. ಆದರೂ, ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನಾವು ನಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದೇವೆ ಎಂದರು.

ಹಿಂದು ಹೇಳಿಕೆ: ಸತೀಶ್‌ ಜಾರಕಿಹೊಳಿ ವಿರುದ್ಧ ಕೋರ್ಟ್‌ಗೆ ದೂರು

150 ಟಿಕೆಟ್‌: ಡಿಸೆಂಬರ್‌ನಲ್ಲಿ 150 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಪ್ರಕಟಿಸುವ ಕುರಿತ ಪ್ರಶ್ನೆಗೆ, ಈ ಸಂಬಂಧ ಈಗಾಗಲೇ ನಮ್ಮ ಪಕ್ಷದ ವರಿಷ್ಠರು ಹೇಳಿದ್ದಾರೆ. ನಾನು ಕೂಡ ಹೇಳಿದ್ದೇನೆ. ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರ ಅಭಿಪ್ರಾಯವೂ ಅದೇ ಆಗಿದೆ. ಇದಕ್ಕಾಗಿಯೇ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬರುವ ಅರ್ಜಿ ಪರಿಶೀಲಿಸಿ ಎಲ್ಲರನ್ನೂ ಒಮ್ಮತಕ್ಕೆ ತೆಗೆದುಕೊಂಡು ಗೆಲ್ಲುವ 150 ಕ್ಷೇತ್ರಗಳಿಗೆ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಕ್‌ ಘೋಷಿಸಲಾಗುವುದು ಎಂದರು.

ಮಕ್ಕಳಿಗೆ ಬುಲಾವ್‌ಗೆ ಟೀಕೆ: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಪಿಯು ಕಾಲೇಜು ಮಕ್ಕಳನ್ನು ಕರೆತರುವಂತೆ ಸರ್ಕಾರ ಸುತ್ತೋಲೆ ಹೊರಡಿಸಿರುವುದು ನಾಚಿಕೆಗೇಡಿನ ಸಂಗತಿ. ಬಿಜೆಪಿಯವರಿಗೆ ಇಂತಹ ದುರ್ಗತಿ ಬಂದಿದೆಯೇ? ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್‌ ಕಿಡಿ ಕಾರಿದರು. ಜನ ಸಂಕಲ್ಪ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡುವಾಗ ಕುರ್ಚಿಗಳು ಖಾಲಿ, ಖಾಲಿ ಇದ್ದವು. ಹೀಗಾಗಿ ಕುರ್ಚಿ ತುಂಬಿಸಲು ಈ ರೀತಿ ಮಾಡುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ 17-18 ವರ್ಷದ ಮಕ್ಕಳನ್ನು ಕರೆತಂದು ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ. ಇದಕ್ಕೆ ಪ್ರಧಾನಮಂತ್ರಿಗಳು ಉತ್ತರ ನೀಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಪ್ರಧಾನಮಂತ್ರಿ ಸ್ಥಾನಕ್ಕೆ ದೊಡ್ಡ ಅಪಮಾನ. ಸರ್ಕಾರ ಕೂಡಲೇ ಈ ಆದೇಶ ಹಿಂಪಡೆಯಬೇಕು. ಈ ಸುತ್ತೊಲೆ ಹೊರಡಿಸಿರುವ ಇಲಾಖೆಯ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮುನಿರತ್ನ ಆಹ್ವಾನದ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ವ್ಯಂಗ್ಯ: ನೀವು ಕಾಂಗ್ರೆಸ್‌ನಲ್ಲಿದ್ದರೆ ಮುಖ್ಯಮಂತ್ರಿ ಆಗುವುದಿಲ್ಲ. ಬಿಜೆಪಿಗೆ ಬನ್ನಿ ಎಂದು ತಮಗೆ ಸಚಿವ ಮುನಿರತ್ನ ಆಹ್ವಾನ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ, ಬಹಳ ಸಂತೋಷ, ಅಲ್ಲಿಗೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಇಲ್ಲ ಎಂದಾಯಿತಲ್ಲ ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್‌ ಛೇಡಿಸಿದರು.

ನಮ್ಮದು ಜನಸ್ಪಂದನೆಯ ಸರ್ಕಾರ: ಸಿಎಂ ಬೊಮ್ಮಾಯಿ

ಬಾದಾಮಿ ಕ್ಷೇತ್ರಕ್ಕೆ ಖಾಸಗಿ ಭೇಟಿಗೆ ಹೋಗಿದ್ದೆ: ಬಾಗಲಕೋಟೆ ಜಿಲ್ಲೆಗೆ ಹೋಗಿದ್ದು ನಿಜ. ಯಾವ ಕ್ಷೇತ್ರಕ್ಕೆ ಹೋಗಿದ್ದೆ ಎಂಬುದು ಬೇಡ. ನಾನು ನನ್ನ ಖಾಸಗಿ ಕೆಲಸದ ಮೇಲೆ ಹೋಗಿದ್ದೆ ಅಷ್ಟೆಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. ಸಿದ್ದರಾಮಯ್ಯ ಗೆದ್ದಿರುವ ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಖಾಸಗಿ ಬದುಕು, ವ್ಯವಹಾರ ಬೇರೆ ಇದೆ. ನಾನು ಎಲ್ಲಿಯೂ ಓಡಾಡಬಾರದೇ? ಎಂದು ಪ್ರಶ್ನಿಸಿದರು.

Follow Us:
Download App:
  • android
  • ios