Newlywed Couple Accident: ರೀಲ್ಸ್‌  ಮಾಡುವ ಹುಚ್ಚು ದೊಡ್ಡ ರಸ್ತೆ ಅಪಘಾತಕ್ಕೆ ಕಾರಣವಾಗಿದೆ. ಫೆಬ್ರವರಿ 17 ರಂದು ವಿವಾಹವಾಗಲಿರುವ ಜೋಡಿ ಬೈಕ್ ಸವಾರಿ ಮಾಡುವಾಗ ಅಪಘಾತಕ್ಕೀಡಾಗಿದ್ದಾರೆ. ಘಟನೆಯಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದಿನ ಸಿಹಿ ಅನುಭವ, ನಿನ್ನೆಯ ಸುಂದರ ನೆನಪನ್ನು ಎಲ್ಲರೂ ಜೋಪಾನ ಮಾಡಲು ಬಯಸುತ್ತಾರೆ. ಇದರ ಭಾಗವಾಗಿಯೇ ವಿವಾಹಪೂರ್ವ ವಿಡಿಯೋ ಮತ್ತು ಫೋಟೋಶೂಟ್‌ ಸಹ ಸಾಮಾನ್ಯವಾಗಿದೆ. ಇಂದಿನ ಮದುವೆ ವ್ಯವಸ್ಥೆಯಲ್ಲಿ ವಿವಾಹಪೂರ್ವ ಫೋಟೋ ತೆಗೆಯುವ ಪ್ರವೃತ್ತಿ ಹೆಚ್ಚಾಗಿದೆ. ಮದುವೆಗೆ ಮೊದಲು ವಧು-ವರರು ತಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ಒಟ್ಟಿಗೆ ಚಿತ್ರೀಕರಿಸುತ್ತಾರೆ. ಇತ್ತೀಚೆಗೆ ಚಲಿಸುವ ಬೈಕ್‌ನಲ್ಲಿ ರೀಲ್ಸ್‌ ಮಾಡಲು ಪ್ರಯತ್ನಿಸಿದ ಜೋಡಿ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ. ಆದರೂ ಯುವತಿಯ ಸ್ಥಿತಿ ಗಂಭೀರವಾಗಿದೆ.

ಬಿಹಾರದ ಬಂಕಾ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ರೀಲ್ಸ್‌ ಮಾಡುವ ಹುಚ್ಚು ದೊಡ್ಡ ರಸ್ತೆ ಅಪಘಾತಕ್ಕೆ ಕಾರಣವಾಗಿದೆ. ಫೆಬ್ರವರಿ 17 ರಂದು ವಿವಾಹವಾಗಲಿರುವ ಜೋಡಿ ಬೈಕ್ ಸವಾರಿ ಮಾಡುವಾಗ ಅಪಘಾತಕ್ಕೀಡಾಗಿದ್ದಾರೆ. ಘಟನೆಯಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇವಸ್ಥಾನದಿಂದ ವಾಪಸ್‌ ಬರುತ್ತಿದ್ದಾಗ

ಬಂಕಾ ಜಿಲ್ಲೆಯ ಘೋರ್ಘಾಟ್ ಕಲ್ಯಾಣಪುರದ ಯುವಕ ನಿತೀಶ್ ಕುಮಾರ್, ಚಾಂದಿನಿ ಕುಮಾರಿ ಎಂಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದವು. ಕುಟುಂಬದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು. ಏತನ್ಮಧ್ಯೆ, ಮಂಗಳವಾರ (ಜನವರಿ 13, 2026) ನಿತೀಶ್ ಚಾಂದಿನಿಯೊಂದಿಗೆ ತನ್ನ ಬೈಕ್‌ನಲ್ಲಿ ಪ್ರಾರ್ಥನೆ ಸಲ್ಲಿಸಲು ತೆಲ್ದಿಹ್‌ನಲ್ಲಿರುವ ದುರ್ಗಾ ದೇವಸ್ಥಾನಕ್ಕೆ ಹೋದರು. ಪ್ರಾರ್ಥನೆಯ ನಂತರ ಇಬ್ಬರೂ ಹಿಂತಿರುಗುತ್ತಿದ್ದರು.

ಬೈಕ್ ಅಮರಪುರದಿಂದ ಅತಿ ವೇಗದಲ್ಲಿ ಬರುತ್ತಿತ್ತು. ಬೈಕ್ ಸವಾರಿ ಮಾಡುತ್ತಿದ್ದ ಯುವಕ ತುಂಬಾ ವೇಗವಾಗಿ ಹೋಗುತ್ತಿದ್ದ. ಹಿಂದೆ ಕುಳಿತಿದ್ದ ಯುವತಿ ತನ್ನ ಮೊಬೈಲ್ ಫೋನ್‌ನಲ್ಲಿ ವಿಡಿಯೋ ಚಿತ್ರೀಕರಿಸುತ್ತಿದ್ದಳು. ಇದ್ದಕ್ಕಿದ್ದಂತೆ ಬೈಕ್ ಬ್ಯಾಲೆನ್ಸ್ ಕಳೆದುಕೊಂಡಿತು. ಅತಿ ವೇಗದಿಂದಾಗಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬೈಕ್ ಬಲವಾಗಿ ಡಿಕ್ಕಿ ಹೊಡೆದು ಇಬ್ಬರೂ ಬಿದ್ದಿದ್ದಾರೆ.

ಅಮರಾಪುರ ಪೊಲೀಸ್ ಠಾಣೆ ಪ್ರದೇಶದ ಭರ್ಕೊ ಹೈಸ್ಕೂಲ್ ಬಳಿ ಅಪಘಾತ ಸಂಭವಿಸಿದೆ. ಡಿಕ್ಕಿಯ ಶಬ್ದ ಕೇಳಿ ಹತ್ತಿರದ ನಿವಾಸಿಗಳು ಸ್ಥಳಕ್ಕೆ ಧಾವಿಸಿ ನೋಡಿದಾಗ ಯುವಕ ಮತ್ತು ಯುವತಿ ಗಾಯಗೊಂಡಿರುವುದು ಕಂಡುಬಂದಿದೆ. ಇಬ್ಬರೂ ಗಂಭೀರ ಸ್ಥಿತಿಯಲ್ಲಿದ್ದಾರೆ. ಸ್ಥಳೀಯರು ತಕ್ಷಣ 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು. ಕೆಲವರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದರು.

ಯುವತಿಯ ಸ್ಥಿತಿ ಗಂಭೀರ, ಯುವಕನ ಕಾಲಿಗೆ ತೀವ್ರ ಪೆಟ್ಟು

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಆಂಬ್ಯುಲೆನ್ಸ್ ಸಹಾಯದಿಂದ ಗಾಯಗೊಂಡ ಇಬ್ಬರನ್ನೂ ಹತ್ತಿರದ ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಿದರು. ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ಅವರ ಸ್ಥಿತಿ ಗಂಭೀರವಾಗಿದ್ದ ಕಾರಣ ಉತ್ತಮ ಚಿಕಿತ್ಸೆಗಾಗಿ ಭಾಗಲ್ಪುರಕ್ಕೆ ಶಿಫ್ಟ್‌ ಮಾಡಲಾಯ್ತು. ಅಪಘಾತದಲ್ಲಿ ನಿತೀಶ್ ಕುಮಾರ್ ಅವರ ಕಾಲಿಗೆ ತೀವ್ರ ಪೆಟ್ಟಾಗಿದೆ ಮತ್ತು ಚಾಂದಿನಿ ಕುಮಾರಿ ಅವರ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಯುವತಿಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರ ತಂಡವು ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಈ ದುರಂತ ಅಪಘಾತದ ಬಗ್ಗೆ ಎರಡೂ ಕುಟುಂಬಗಳು ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿವೆ. ಆಗಾಗ್ಗೆ ಇಂತಹ ಘಟನೆಗಳು ನಡೆಯುತ್ತಲೇ ಇದ್ದು, ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸಬೇಡಿ ಮತ್ತು ರೀಲ್ಸ್‌ ಮಾಡುವ ಮೂಲಕ ತಮ್ಮ ಸ್ವಂತ ಜೀವ ಅಥವಾ ಇತರರ ಜೀವಕ್ಕೆ ಅಪಾಯವನ್ನುಂಟುಮಾಡಬೇಡಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.