ರಾಷ್ಟ್ರೀಯ ಪ್ಯಾರಾ ಆರ್ಚರಿ ಕೋಚ್‌ ಕುಲ್ದೀಪ್‌ ವೆದ್ವಾನ್‌ ಅವರಿಗೆ ಪೋಕ್ಸೋ ಪ್ರಕರಣದಲ್ಲಿ 5 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ. 2023ರಲ್ಲಿ ಸೋನಿಪತ್‌ನ ಸಾಯ್‌ ಕೇಂದ್ರದಲ್ಲಿ ಕಿರಿಯ ಅಥ್ಲೀಟ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾಗಿದ್ದು, ಹರ್ಯಾಣದ ನ್ಯಾಯಾಲಯ ಈ ತೀರ್ಪು ನೀಡಿದೆ. ಇವರು ಶೀತಲ್‌ ದೇವಿ ಮತ್ತು ಪಾಯಲ್‌ ನಾಗ್‌ ಅವರಂತಹ ಖ್ಯಾತ ಪ್ಯಾರಾ ಆರ್ಚರಿ ಪಟುಗಳಿಗೆ ತರಬೇತಿ ನೀಡಿದ್ದರು.

ಚಂಡೀಗಢ: ಪ್ಯಾರಾ ಆರ್ಚರಿ ಪಟುಗಳ ಸಾಧನೆ ಮೂಲಕ ಖ್ಯಾತಿ ಗಳಿಸಿದ್ದ ರಾಷ್ಟ್ರೀಯ ಆರ್ಚರಿ ಕೋಚ್‌ ಕುಲ್ದೀಪ್‌ ವೆದ್ವಾನ್‌ ಪೋಕ್ಸೋ ಕೇಸ್‌ನಲ್ಲಿ 5 ವರ್ಷ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾರೆ. 42 ವರ್ಷದ ಕುಲ್ದೀಪ್‌ಗೆ ಹರ್ಯಾಣದ ತ್ವರಿತ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದ್ದು, ₹2 ಲಕ್ಷ ದಂಡ ಕೂಡಾ ವಿಧಿಸಿದೆ.

Add Asianetnews Kannada as a Preferred SourcegooglePreferred

ಕುಲ್ದೀಪ್‌ ವೆದ್ವಾನ್‌ ಪೋಕ್ಸೋ ಕೇಸ್‌

2023ರಲ್ಲಿ ಸೋನಿಪತ್‌ನ ಸಾಯ್‌ ಕೇಂದ್ರದಲ್ಲಿ ಕಿರಿಯ ಅಥ್ಲೀಟ್‌ ಇದ್ದ ಕೋಣೆಗೆ ತೆರಳಿದ್ದ ಕುಲ್ದೀಪ್‌, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದರು. ಸಹಕರಿಸಿದರೆ ‘ದೊಡ್ಡ ಅಥ್ಲೀಟ್‌’ ಮಾಡುವುದಾಗಿ ಹೇಳಿದ್ದರು. ಇದರ ವಿರುದ್ಧ ಕ್ರೀಡಾಪಟುವಿನ ಕುಟುಂಬ ದೂರು ನೀಡಿತ್ತು. ಬಳಿಕ ಬಂಧನಕ್ಕೊಳಗಾಗಿದ್ದ ಕುಲ್ದೀಪ್‌, 2024ರ ಟೋಕಿಯೋ ಪ್ಯಾರಾಲಿಂಪಿಕ್ಸ್‌ಗೂ ಮುನ್ನ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಗೊಂಡಿದ್ದರು. ಇತ್ತೀಚೆಗೆ ನ್ಯಾಯಾಲಯ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಬುಧವಾರ ಶಿಕ್ಷೆ ಪ್ರಕಟಿಸಿದೆ.

ಪ್ರಮುಖ ಕೋಚ್‌:

ಕುಲ್ದೀಪ್‌ ಭಾರತದ ಪ್ಯಾರಾ ಅಥ್ಲೀಟ್‌ಗಳ ಸಾಧನೆ ಮೂಲಕ ಭಾರೀ ಖ್ಯಾತಿ ಗಳಿಸಿದ್ದರು. ಎರಡೂ ಕೈಗಳಿಲ್ಲದ ಶೀತಲ್‌ ದೇವಿ, ಕುಲ್ದೀಪ್‌ ಕೋಚ್ ಅವಧಿಯಲ್ಲೇ ಏಷ್ಯನ್ ಪ್ಯಾರಾ ಗೇಮ್ಸ್‌ ಚಿನ್ನ ಗೆದ್ದು, ವಿಶ್ವ ಚಾಂಪಿಯನ್‌ ಕೂಡಾ ಆಗಿದ್ದರು. ಇತ್ತೀಚೆಗೆ ಎರಡು ಕೈ, ಕಾಲುಗಳಿಲ್ಲದ ಪಾಯಲ್‌ ನಾಗ್‌ ವಿಶ್ವ ಆರ್ಚರಿಯಲ್ಲಿ ಶೀತಲ್‌ರನ್ನು ಸೋಲಿಸಿ ಗೆದ್ದಿದ್ದರು. ಪಾಯಲ್‌ಗೂ ಕುಲ್ದೀಪ್‌ ಕೋಚ್‌ ಆಗಿದ್ದರು.