ಎರಡು ತೋಳುಗಳಿಲ್ಲದ ಭಾರತದ ಸ್ಪೂರ್ತಿಯ ಆರ್ಚರಿ ಪಟು ಶೀತಲ್ ದೇವಿಗೆ ಈ ಹಿಂದೆ ಆನಂದ್ ಮಹೀಂದ್ರ ತಾವು ಕೊಟ್ಟ ಮಾತನ್ನು ಮತ್ತೆ ನೆನಪಿಸಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ನವದೆಹಲಿ: ಭಾರತ ಕಂಡ ಸ್ಪೂರ್ತಿಯ ಚಿಲುಮೆಗಳಲ್ಲಿ ಒಬ್ಬರೆನಿಸಿಕೊಂಡಿರುವ ಎರಡೂ ತೋಳುಗಳಿಲ್ಲದ ಆರ್ಚರಿ ಪಟು ಶೀತಲ್ ದೇವಿ, ಸದ್ಯ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ವೈಯುಕ್ತಿಕ ವಿಭಾಗದಲ್ಲಿ ಅರ್ಹತಾ ಸುತ್ತಿನಲ್ಲಿ ವಿಶ್ವದಾಖಲೆ ನಿರ್ಮಿಸಿದರೂ, ಪದಕ ಗೆಲ್ಲಲು ಶೀತಲ್ ದೇವಿ ವಿಫಲವಾಗಿದ್ದರು. ಆದರೆ ಮಿಶ್ರ ತಂಡ ವಿಭಾಗದ ಕಾಂಪೌಂಡ್ ಸ್ಪರ್ಧೆಯಲ್ಲಿ ಶೀತಲ್ ದೇವಿ ಹಾಗೂ ರಾಕೇಶ್ ಕುಮಾರ್ ಅವರು ಕಂಚಿನ ಪದಕ ಜಯಿಸುವ ಮೂಲಕ ಮೊದಲ ಪ್ಯಾರಾಲಿಂಪಿಕ್ಸ್‌ ಪದಕ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಶೀತಲ್ ದೇವಿಯ ಪ್ರದರ್ಶನವನ್ನು ಸದಾ ಗಮನಿಸುತ್ತಲೇ ಬಂದಿರುವ ಖ್ಯಾತ ಉದ್ಯಮಿ ಆನಂದ್ ಮಹೀಂದ್ರ, ಇದೀಗ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ತೋರಿದ ದಿಟ್ಟ ಹೋರಾಟವನ್ನು ಮತ್ತೊಮ್ಮೆ ಮನದುಂಬಿ ಶ್ಲಾಘಿಸಿದ್ದಾರೆ. ಇದರ ಜತೆಗೆ, ತಾವು ಈ ಹಿಂದೆ ನೀಡಿದ್ದ ಪ್ರಾಮೀಸ್‌ ಪೂರ್ತಿಗೊಳಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಶೀತಲ್ ದೇವಿ ಹದ್ದಿನ ಕಣ್ಣಿನ ಗುರಿಯೊಂದಿಗೆ ಬಾಣ ಬಿಡುವ ವಿಡಿಯೋವನ್ನು ಹಂಚಿಕೊಂಡಿರುವ ಆನಂದ್ ಮಹೀಂದ್ರ, ತಾವು ಕೊಟ್ಟ ಮಾತನ್ನು ಮತ್ತೊಮ್ಮೆ ಸ್ಮರಿಸಿಕೊಂಡಿದ್ದಾರೆ.

Scroll to load tweet…

" ಅಸಾಧಾರಣ ಧೈರ್ಯ, ಬದ್ಧತೆ ಮತ್ತು ಕೊನೆಯವರೆಗೂ ಬಿಟ್ಟು ಕೊಡದ ಮನೋಭಾವವು, ಎಲ್ಲಾ ಪದಕಗಳನ್ನು ಮೀರಿದ್ದಾಗಿದೆ. ಶೀತಲ್ ದೇವಿಯವರೇ, ನೀವು ಇಡೀ ದೇಶ ಮಾತ್ರವಲ್ಲದೇ ಜಗತ್ತಿನ ಪಾಲಿಗೆ ಸ್ಪೂರ್ತಿಯ ದಾರಿದೀಪವಾಗಿದ್ದೀರ. ಸರಿಸುಮಾರು ಒಂದು ವರ್ಷದ ಹಿಂದೆ, ನಿಮ್ಮ ದಿಟ್ಟ ಸ್ಪೂರ್ತಿಗೆ ನಾನು ಸೆಲ್ಯೂಟ್ ಮಾಡಿದ್ದೆ. ಆಗಲೇ, ನಾನು ನಿಮ್ಮಲ್ಲಿ, ನಮ್ಮಲ್ಲಿರುವ ಯಾವುದೇ ಕಾರನ್ನು ಬೇಕಿದ್ದರೂ ಆಯ್ಕೆ ಮಾಡಿಕೊಳ್ಳಿ, ಆ ಕಾರನ್ನು ನಿಮಗೆ ಅನುಕೂಲವಾಗುವ ರೀತಿಯಲ್ಲಿ ಕಸ್ಟಮೈಸ್ ಮಾಡಿಕೊಡುತ್ತೇವೆ ಎಂದು ಮನವಿ ಮಾಡಿಕೊಂಡಿದ್ದೆ. ಆಗ ನೀವು ನನಗೆ 18 ವರ್ಷವಾದ ಮೇಲೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಿರಿ. ಅಂದರೆ ಮುಂದಿನ ವರ್ಷಕ್ಕೆ. ನಾನೀಗ ಕೊಟ್ಟ ಮಾತನ್ನು ಈಡೇರಿಸಲು ಎದುರು ನೋಡುತ್ತಿದ್ದೇನೆ" ಎಂದು ಆನಂದ್ ಮಹೀಂದ್ರಾ ಎಕ್ಸ್(ಟ್ವಿಟರ್) ಖಾತೆಯ ಮೂಲಕ ಬರೆದುಕೊಂಡಿದ್ದಾರೆ.