ನಂಜನಗೂಡಿನಲ್ಲಿ ದರೋಡೆ ನಾಟಕವಾಡಿ ಗಂಡನ ಕೊಲೆಗೆ ಯತ್ನಿಸಿದ್ದ ಪ್ರಕರಣ ಹೊಸ ತಿರುವು ಪಡೆದಿದೆ. ಅಂದು ತೀವ್ರವಾಗಿ ಗಾಯಗೊಂಡಿದ್ದ ಪತಿ ರಾಜೇಂದ್ರ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸಂಗೀತಾ ಸೇರಿದಂತೆ ನಾಲ್ವರನ್ನ ಬಂಧಿಸಲಾಗಿದೆ.
ನಂಜನಗೂಡು (ನ. 15): ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ಸಿನಿಮಾ ರೀತಿಯ ದರೋಡೆ ಮಾದರಿ ಸಂಚು ರೂಪಿಸಿ ಗಂಡನ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ರಾಜೇಂದ್ರ, ಗಂಭೀರ ಗಾಯಗೊಂಡಿದ್ದ ಪತಿ. ಸಂಗೀತಾ ಹತ್ಯೆ ಸಂಚು ರೂಪಿಸಿದ್ದ ಪತ್ನಿ.
ತಮ್ಮನೊಂದಿಗೆ ಸೇರಿ ಹತ್ಯೆಗೈಯಲು ಯತ್ನ:
ಅಕ್ಟೋಬರ್ 25 ರಂದು ನಂಜನಗೂಡು ಪಟ್ಟಣದಲ್ಲಿ ನಡೆದ ಈ ಭಯಾನಕ ಘಟನೆಯಲ್ಲಿ, ಪತ್ನಿ ಸಂಗೀತಾ ತನ್ನ ಗಂಡ ರಾಜೇಂದ್ರನ ಹತ್ಯೆ ಮಾಡಲು ದರೋಡೆ ಮಾದರಿಯಲ್ಲಿ ಕೊಲ್ಲುವ ಸಂಚು ರೂಪಿಸಿದ್ದಳು. ಈ ಕೆಲಸಕ್ಕೆ ಆಕೆಯ ತಮ್ಮನೊಂದಿಗೆ ಕೈಜೋಡಿಸಿ, ಡ್ರಾಗರ್ ಬಳಸಿ ರಾಜೇಂದ್ರ ಅವರ ಮೇಲೆ ದಾಳಿ ಮಾಡಿ ಕೊಲೆಗೆ ಯತ್ನಿಸಿದ್ದರು. ಆದರೆ ಈ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ರಾಜೇಂದ್ರ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಚಿಕಿತ್ಸೆ ಫಲಿಸದೇ ಇಂದು ರಾಜೇಂದ್ರ ಸಾವು
ಇಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಪೊಲೀಸ್ ತಮ್ಮ ವಿಸ್ತೃತ ತನಿಖೆಯಲ್ಲಿ ಸಂಗೀತಾ ಮತ್ತು ಆಕೆಯ ತಮ್ಮ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.


