Mysuru Murder Case: ನಿವೃತ್ತಿ ಅಧಿಕಾರಿಯ ಹಿಟ್ ಅಂಡ್ ರನ್ ಕೊಲೆ ಪ್ರಕರಣ ಭೇದಿಸಿದ ಪೊಲೀಸರು
ಕೇಂದ್ರ ಗುಪ್ತಚರ ಇಲಾಖೆ ನಿವೃತ್ತಿ ಅಧಿಕಾರಿಯ ಹಿಟ್ ಅಂಡ್ ರನ್ ಕೊಲೆ ಪ್ರಕರಣವನ್ನು ಮೈಸೂರು ಪೊಲೀಸರು ಬೇಧಿಸಿದ್ದಾರೆ. ಮನೆ ಕಟ್ಟುವ ವಿಚಾರದ ಗಲಾಟೆಯೇ ಕೊಲೆಗೆ ಕಾರಣವಾಗಿದೆ. ಸಿಸಿ ಕ್ಯಾಮರಾ ತುಣುಕು ಹಿಡಿದು ತನಿಖೆ ನಡೆಸಿದ ಪೊಲೀಸರು ಮಕ್ಕದ ಮನೆಯಾತನ ಮಗ ಹಾಗೂ ಆತನ ಸ್ನೇಹಿತನನ್ನ ಬಂಧಿಸಿದ್ದಾರೆ.
ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಮೈಸೂರು (ನ.8): ಕೇಂದ್ರ ಗುಪ್ತಚರ ಇಲಾಖೆ ನಿವೃತ್ತಿ ಅಧಿಕಾರಿಯ ಹಿಟ್ ಅಂಡ್ ರನ್ ಕೊಲೆ ಪ್ರಕರಣವನ್ನು ಮೈಸೂರು ಪೊಲೀಸರು ಬೇಧಿಸಿದ್ದಾರೆ. ಮನೆ ಕಟ್ಟುವ ವಿಚಾರದ ಗಲಾಟೆಯೇ ಕೊಲೆಗೆ ಕಾರಣವಾಗಿದೆ. ಸಿಸಿ ಕ್ಯಾಮರಾ ತುಣುಕು ಹಿಡಿದು ತನಿಖೆ ನಡೆಸಿದ ಪೊಲೀಸರು ಮಕ್ಕದ ಮನೆಯಾತನ ಮಗ ಹಾಗೂ ಆತನ ಸ್ನೇಹಿತನನ್ನ ಬಂಧಿಸಿದ್ದಾರೆ. ಆ ಮೂಲಕ ಐಬಿ ಅಧಿಕಾರಿ ಕೊಲೆ ವಿಚಾರದಲ್ಲಿ ಎದ್ದಿದ್ದ ಹಲವು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಅವರು ಕೇಂದ್ರ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ. ವೃತ್ತಿ ಜೀವನದ ಮುಗಿಸಿ 23 ವರ್ಷ ಕಳೆದಿದ್ದವರು ಮೈಸೂರಿನಲ್ಲಿ ನಿವೃತ್ತಿ ಜೀವನ ಎಂಜಾಯ್ ಮಾಡುತ್ತಿದ್ದರು. ಅವರೇ ಮೈಸೂರಿನ ಟಿ.ಕೆ.ಲೇಔಟ್ ನಿವಾಸಿ 83 ವರ್ಷದ ಆರ್.ಎಸ್.ಕುಲಕರ್ಣಿ. ಬೆಳಿಗ್ಗೆ ವಾಕಿಂಗ್, ಸಂಜೆ ವಾಕಿಂಗ್ ಹಾಗೂ ಮನೆಯಲ್ಲಿ ಹೆಂಡತಿ ಜೊತೆ ಕಾಲ ಕಳೆಯುವುದು ಈಗೆ ಜಾಲಿಯಾಗಿ ಜೀವನ ನಡೆಯುತ್ತಿತ್ತು. ಕುಲಕರ್ಣಿ ಮಗ ಹಾಗೂ ಮಗಳು ದೂರದ ಅಮೇರಿಕಾದಲ್ಲಿ ವಾಸವಿದ್ದು, ಮನೆಯಲ್ಲಿ ಇಬ್ಬರೇ ಇರುತ್ತಿದ್ದರು. ನವೆಂಬರ್ 4ರಂದು ಸಂಜೆ ವಾಕಿಂಗ್‌ಗೆ ಹೋಗಿದ್ದ ಕುಲಕರ್ಣಿ ಅವರಿಗೆ ಕಾರು ಗುದ್ದಿ ತೀರ್ವ ಪೆಟ್ಟಾಗಿತ್ತು.
ಅಂದು ನಡೆದ ಘಟನೆ ಮೈ ಜುಮ್ಮೆನ್ನಿಸುವಂತಿತ್ತು. ವಾಕಿಂಗ್ ಮಾಡುತ್ತಿದ್ದ ಕುಲಕರ್ಣಿ ಕಾರು ಡಿಕ್ಕಿಯಿಂದ ಸಾವನ್ನಪ್ಪಿದ್ದರು. ಕುಲಕರ್ಣಿ ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕುಲಕರ್ಣಿ ಶುಕ್ರವಾರ ಮಾನಸ ಗಂಗೋತ್ರಿ ಆವರಣದ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಮಾಡುವಾಗ ಕಾರೊಂದು ಡಿಕ್ಕಿ ಹೊಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಕುಲಕರ್ಣಿ ಸಾವನ್ನಪ್ಪಿದ್ದರು.
ಮೊದ ಮೊದಲು ಇದೊಂದು ಅಪಘಾತ ಅಂತಲೇ ಎಲ್ಲರೂ ಭಾವಿಸಿದ್ದರು. ಆದ್ರೆ ಘಟನೆಯ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರೇ ಬೆಚ್ಚಿ ಬಿದ್ದಿದ್ದರು. ಕಾರಣ ಈ ಅಪಘಾತವನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿತ್ತು. ವಿಡಿಯೋದಲ್ಲಿ ಕುಲಕರ್ಣಿ ಅವರು ಪಕ್ಕಕ್ಕೆ ಹೋದರು ಹುಡುಕಿಕೊಂಡು ಹೋಗಿ ಡಿಕ್ಕಿ ಹೊಡೆಯಲಾಗಿದೆ. ಜೊತೆಗೆ ಕಾರಿನ ನಂಬರ್ ಪ್ಲೇಟ್ ಸಹಾ ತೆಗೆಯಲಾಗಿದೆ. ಇದೆಲ್ಲವನ್ನು ನೋಡಿದರೆ ಯಾರೋ ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ಕೃತ್ಯವೆಸಗಿರುವುದು ಸ್ಪಷ್ಟವಾಗಿದೆ. ಈ ಸಂಬಂಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಎಫ್ ಐ ಆರ್‌ನಲ್ಲಿ ಕುಲಕರ್ಣಿಯವರಿಗೂ ಪಕ್ಕದ ಮನೆಯವರಿಗೂ ಮನೆ ಕಟ್ಟುವ ವಿಚಾರವಾಗಿ ಮನಸ್ತಾಪವಿತ್ತು ಅನ್ನೋ ವಿಚಾರವನ್ನು ಕುಲಕರ್ಣಿ ಮನೆಯವರು ತಿಳಿಸಿದ್ದರು. ಪಕ್ಕದ ಮನೆಯವರಾದ ಮಾದಪ್ಪ ಹಾಗೂ ಆತನ ಮಕ್ಕಳು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಅಂತಲೂ ಉಲ್ಲೇಖಿಸಲಾಗಿತ್ತು.
ಕುಲಕರ್ಣಿ ಕೊಲೆ ಹಿಂದೆ ಟೆರರಿಸಂ ನಂಟಿತ್ತ?
ಕುಲಕರ್ಣಿ ಕೊಲೆಯನ್ನು ಪಕ್ಕದ ಮನೆಯವರಾದ ಮಾದಪ್ಪ ಕುಟುಂಬ ಮಾಡಿದೆ ಅಂತ ಅವರ ಅಳಿಯ ಪೊಲೀಸರಿಗೆ ದೂರು ಕೊಟ್ಟಿದ್ದರು. ಆದಾಗ್ಯೂ ಕುಲಕರ್ಣಿ ಕೊಲೆಯ ಬಗ್ಗೆ ಬೇರೆ ಬೇರೆ ಕಾರಣಗಳು ಸುತ್ತಿಕೊಂಡಿದ್ದವು. ಕೇಂದ್ರ ಗುಪ್ತಚರ ದಳದಲ್ಲಿ ಕೆಲಸ ಮಾಡಿದ್ದ ಕುಲಕರ್ಣಿ ಅವರು ಬರೆದಿದ್ದ ಆ ಎರಡು ಪುಸ್ತಕಗಳ ವಿಚಾರ ಸೇರಿ ಹಲವು ಆಯಾಮಗಳಲ್ಲಿ ತನಿಖೆ ಮಾಡಲಾಗಿತ್ತು. ಕುಲಕರ್ಣಿ ನಿವೃತ್ತರಾದ ನಂತರ ಕೆಲವು ಪುಸ್ತಕ ಬರೆದಿದ್ದರು. Sim of Nation conscience ಮತ್ತು Facets Of Terrorism ಪುಸ್ತಕಗಳು ಟೆರರಿಸಂ ಬಗ್ಗೆ ಬರೆದ ಪುಸ್ತಕಗಳಾಗಿದ್ದವು. ಈಗಾಗಿ ಈ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಿದ್ದರು.
ಪ್ರಕರಣ ಪತ್ತೆಗೆ ನಿಯೋಜನೆಗೊಂದ 50 ಪೊಲೀಸರು, ನೆರವಾದ 100ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳು:
ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಂಡ ಮೈಸೂರು ಪೊಲೀಸರು ನರಸಿಂಹರಾಜ ವಿಭಾಗದ ಎಸಿಪಿ ಶಿವಶಂಕರ್ ನೇತೃತ್ವದಲ್ಲಿ ನಾಲ್ಕು ತಂಡ ರಚನೆ ಮಾಡಿಕೊಂಡಿದ್ದರು. ಗಂಗೋತ್ರಿ ಕ್ಯಾಂಪಸ್ ನ ಸಿಸಿ ಕ್ಯಾಮರಾಗಳ ಮೂಲಕ ಕಾರಿನ ಚಲನವಲನ ಗುರುತಿಸಿ ಮ್ಯಾಪಿಂಗ್ ಮಾಡಿಕೊಂಡರು. ನಂಬರ್ ಪ್ಲೇಟ್ ಇಲ್ಲದಿದ್ದರೂ ಅದರ ಮೂವ್ಮೆಂಟ್ ನೋಡಿಕೊಂಡು ನಗರದ ಗ್ಯಾರೇಜ್ ಗಳನ್ನು ತಲಾಷ್ ಮಾಡಿದರು. ಹಂತಿಮವಾಗಿ ಕುಲಕರ್ಣಿ ಕೊಲೆ ಮಾಡಿದ್ದ ಪಕ್ಕದ ಮನೆಯ ಮಾದಪ್ಪ ಅವರ ಕಿರಿಯ ಮಗ ಮನು ಹಾಗೂ ಆತನ ಸ್ನೇಹಿತ ವರುಣ್ ಗೌಡ ಎಂಬುದನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಸೆಟ್‌ಬ್ಯಾಕ್ ಬಿಡದೆ ಮನೆ ನಿರ್ಮಾಣ ಮಾಡುತ್ತಿದ್ದ ಮಾದಪ್ಪ ವಿರುದ್ಧ ಕುಲಕರ್ಣಿ ಪೊಲೀಸ್ ದೂರು ಹಾಗೂ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ನಿಂದ ಮನೆ ನಿರ್ಮಾಣಕ್ಕೆ ತಡೆಯಾಜ್ಞೆ ಬಂದಿತ್ತು. ಇದರಿಂದ ಕುಪಿತನಾಗಿದ್ದ ಮನು ಕುಲಕರ್ಣಿ ಚಲನವಲನ ಗಮನಿಸಿ ಒಬ್ಬರೇ ರಸ್ತೆಯಲ್ಲಿ ಬರುವಾಗ ಕಾರು ಗುದ್ದಿಸಿ ಕೊಲೆ ಮಾಡಿದ್ದ. ಆತನ ಸ್ನೇಹಿತ ವರುಣ್‌ಗೌಡ ಬೈಕ್‌ನಲ್ಲಿ ಹಿಂಬಾಲಿಸಿ ಸಹಾಯ ಮಾಡಿದ್ದ. ಅಸಲಿಗೆ ಮನು ಎಂಬಿಎ ಪದವಿ ಮಗಿಸಿದ್ದರೆ ವರುಣ್ ಎಂಸಿಎ ಮಾಡಿದ್ದಾರೆ. ಇಬ್ಬರೂ ಸೇರಿ ಕಂಸ್ಟ್ರಕ್ಷನ್ ವ್ಯವಹಾರ ಮಾಡಿಕೊಂಡಿದ್ದು, ಅಲ್ಲಿಂದ ಸ್ನೇಹಿತರಾಗಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಬೈಕ್ ವಶಕ್ಕೆ ಪಡೆದಿದ್ದಾರೆ.
ಕಾರು ಗುದ್ದಿ ಇಂಟಲಿಜನ್ಸ್ ಬ್ಯೂರೋ ನಿವೃತ್ತ ಅಧಿಕಾರಿ ಸಾವು: ಹತ್ಯೆ ಶಂಕೆ
ಸೇಲ್‌ಗೆ ಬಂದಿದ್ದ ಕಾರಿನಲ್ಲಿ ಮಾಡಿದ್ರು ಕೊಲೆ ಅಸಲಿಗೆ ಹೋಂಡಾ ಕಂಪನಿಗೆ ಸೇರಿದ ಕಾರು ರಘು ಎಂಬ ಯುವಕನಿಗೆ ಸೇರಿದ್ದು. ಆ ಕಾರನ್ನು ಮಾರಿಸಿ ಕೊಡುವಂತೆ ರಘು ಮನು ಬಳಿ ಕೊಟ್ಟಿದ್ದ. ಆದರೆ ಆಸಾಮಿ ಮನು ಅದೇ ಕಾರು ಬಳಕೆ ಮಾಡಿಕೊಂಡು ಕೊಲೆ ಮಾಡಿದ್ದ.
ವಾಕಿಂಗ್ ಮಾಡ್ತಿದ್ದ ಗುಪ್ತಚರ ನಿವೃತ್ತ ಅಧಿಕಾರಿಗೆ ಕಾರು ಡಿಕ್ಕಿ; ಸಿಸಿಟಿವಿ ನೋಡಿ ಬೆಚ್ಚಿ ಬಿದ್ದ
ಮತ್ತಷ್ಟು ತನಿಖೆ ಮುಂದುವರೆದಿದ್ದು, ತನಿಖೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ತಂಡಕ್ಕೆ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ 50 ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ. ಏನೇ ಆದರೂ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿರುವುದು ಅಕ್ಷಮ್ಯವಾಗಿದೆ.