ವಾಕಿಂಗ್ ಮಾಡ್ತಿದ್ದ ಗುಪ್ತಚರ ನಿವೃತ್ತ ಅಧಿಕಾರಿಗೆ ಕಾರು ಡಿಕ್ಕಿ; ಸಿಸಿಟಿವಿ ನೋಡಿ ಬೆಚ್ಚಿ ಬಿದ್ದ ಪೊಲೀಸರು!
ರಸ್ತೆಯಲ್ಲಿ ವಾಕಿಂಗ್ ಹೊರಟಿದ್ದ ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿಯೊಬ್ಬರಿಗೆ ಆಗಂತುಕರು ಉದ್ದೇಶಪೂರ್ವಕವಾಗಿ ಕಾರು ಡಿಕ್ಕಿ ಹೊಡೆ ಹತ್ಯೆ ಮಾಡಿರುವ ಘಟನೆ ಸಾಂಸ್ಕೃತಿನಗರಿ ಮೈಸೂರಿನಲ್ಲಿ ನಡೆದಿದೆ. ಮೊದಲು ಇದೊಂದು ಅಪಘಾತವೆಂದೇ ಭಾವಿಸಲಾಗಿತ್ತು. ಆದರೆ ಸಿಸಿಟಿವಿ ನೋಡಿ ಬೆಚ್ಚಿಬಿದ್ದಿದ್ದಾರೆ.
ಮಧು.ಎಂ.ಚಿನಕುರಳಿ ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.
ಮೈಸೂರು (ನ.6) : ಅವರು ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ. ತಾವಾಯ್ತು ತಮ್ಮ ಪಾಡಾಯ್ತು ಅಂತಾ ಇದ್ದವರು. ವಾಕಿಂಗ್ ಹೋದಾಗ ಕಾರು ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಮೊದಲಿಗೆ ಇದೊಂದು ಅಪಘಾತ ಅಂತಲೇ ಎಲ್ಲರೂ ಭಾವಿಸಿದ್ರು. ಆದ್ರೆ ಸಿಸಿ ಕ್ಯಾಮೆರಾ ಬಿಚ್ಚಿಟ್ಟ ಸ್ಟೋರಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ವಿಡಿಯೋ ನೋಡಿದರೆ ಮೈ ಜುಮ್ಮೆನ್ನುತ್ತೆ. ಈ ಘಟನೆ ನಡೆದಿರೋದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ಹೌದು ವಾಕಿಂಗ್ ಗೆ ಹೋಗಿದ್ದ ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ, ವೃದ್ಧ ವ್ಯಕ್ತಿಗೆ ಎದುರುಗಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ.
ಇದು ಕೊಲೆನಾ? ಅಹಜ ಸಾವಾ? ಅನುಮಾನಕ್ಕೆ ಎಡೆ ಮಾಡಿಕೊಟ್ಟ ಸಿಸಿಟಿವಿ ದೃಶ್ಯಗಳು!
ಆರ್ ಎಸ್ ಕುಲಕರ್ಣಿ ಮೃತಪಟ್ಟ ವೃದ್ಧ. ಡಿಕ್ಕಿಯಾದ ರಭಸಕ್ಕೆ ಪಕ್ಕಕ್ಕೆ ಬಿದ್ದ ಕುಲಕರ್ಣಿಯವರಿಗೆ ಗಂಭೀರ ಪೆಟ್ಟಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಇಳಿವಯಸ್ಸಿನ ಆರ್.ಎಸ್.ಕುಲಕರ್ಣಿ(86) ಅವರು ಮೈಸೂರಿನ ಟಿ.ಕೆ. ಬಡಾವಣೆ ನಿವಾಸಿ. ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಪಿಂಚಣಿದಾರರ ಸ್ವರ್ಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದರು. ಕುಲಕರ್ಣಿ ಶುಕ್ರವಾರ ಮಾನಸ ಗಂಗೋತ್ರಿ ಆವರಣದ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಹೊರಟಿದ್ದರು. ಈ ವೇಳೆ ಎದುರುಗಡೆಯಿಂದ ಬಂದ ಕಾರು ಕುಲಕರ್ಣಿಯವರಿಗೆ ಡಿಕ್ಕಿ ಹೊಡೆದಿದೆ. ಸಿಸಿಟಿವಿ ಗಮನಿಸಿದಾಗ ಅದೊಂದು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿದ್ದಾರೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕೊಲೆ ಮಾಡುವ ಉದ್ದೇಶದಿಂದ ಡಿಕ್ಕಿ ಹೊಡೆದ್ರಾ? ಯಾರದ್ದು ಆ ಕಾರು? ಕಾರಿನೊಳಗೆ ಇದ್ದವರು ಯಾರು? ಯಾಕಾಗಿ ವೃದ್ಧನಿಗೆ ಡಿಕ್ಕಿ ಹೊಡೆಸಿದ್ದು? ಸಿಸಿಟಿವಿ ನೋಡಿದ ಬಳಿಕ ಹೀಗೆ ಅನುಮಾನ ಹುಟ್ಟಿದೆ.
ಸಿಸಿ ಟಿವಿ ದೃಶ್ಯ ನೋಡಿ ಬೆಚ್ಚಿ ಬಿದ್ದ ಪೊಲೀಸರು:
ಮೊದ ಮೊದಲು ಇದೊಂದು ಅಪಘಾತ ಅಂತಲೇ ಎಲ್ಲರೂ ಭಾವಿಸಿದ್ದರು. ಆದ್ರೆ ಘಟನೆಯ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಕಾರಣ ಈ ಅಪಘಾತವನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂಬುದು ಸಿಸಿಟಿವಿ ದೃಶ್ಯಾವಳಿ ನೋಡಿದರೆ ತಿಳಿಯುತ್ತದೆ.
ವಿಡಿಯೋದಲ್ಲಿ ಕುಲಕರ್ಣಿ ಅವರು ಪಕ್ಕಕ್ಕೆ ಹೋದರೂ, ಅವರು ಹೋದ ಕಡೆಯೇ ಕಾರು ತಿರುಗಿಸಿ ಹೋಗಿ ಡಿಕ್ಕಿ ಹೊಡೆಯಲಾಗಿದೆ. ಜೊತೆಗೆ ಕಾರಿನ ನಂಬರ್ ಪ್ಲೇಟ್ ಸಹಾ ತೆಗೆಯಲಾಗಿದೆ. ಇದೆಲ್ಲವನ್ನು ನೋಡಿದರೆ ಯಾರೋ ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ಕೃತ್ಯವೆಸಗಿರುವುದು ಸ್ಪಷ್ಟವಾಗಿದೆ. ಈ ಸಂಬಂಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಪಾನ್ ಶಾಪ್ ಮುಂದಿದ್ದ ಬಲ್ಬ್ ನಾಪತ್ತೆ : ಸಿಸಿಟಿವಿ ಪರಿಶೀಲಿಸಿದ ಮಾಲೀಕನಿಗೆ ಶಾಕ್
ಎಫ್‌ಐಆರ್ ನಲ್ಲಿ ಕುಲಕರ್ಣಿಯವರಿಗೂ ಪಕ್ಕದ ಮನೆಯವರಿಗೂ ಮನೆ ಕಟ್ಟುವ ವಿಚಾರವಾಗಿ ಮನಸ್ತಾಪವಿತ್ತು ಅನ್ನೋ ವಿಚಾರವನ್ನು ಕುಲಕರ್ಣಿ ಮನೆಯವರು ತಿಳಿಸಿದ್ದಾರೆ. ಪಕ್ಕದ ಮನೆಯವರು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಅಂತಲೂ ಉಲ್ಲೇಖಿಸಲಾಗಿದೆ. ಸದ್ಯ ಪೊಲೀಸರು ಎಲ್ಲಾ ಆಯಾಮಗಳಲಗಲೂ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ನಂತರವಷ್ಟೇ ಕುಲಕರ್ಣಿ ಅವರ ಅನುಮಾನಸ್ಪದ ಸಾವಿನ ಬಗ್ಗೆ ಸ್ಪಷ್ಟತೆ ಸಿಗಲಿದೆ.