ಮೈಸೂರಿನಲ್ಲಿ ಹಣಕಾಸಿನ ನಷ್ಟದಿಂದಾಗಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವಿಗೀಡಾಗಿದ್ದಾರೆ. ಮನೆಯ ಯಜಮಾನ ಸೇರಿ ಆತನ ತಾಯಿ, ಹೆಂಡತಿ ಮತ್ತು ಮಗನ ಸಾವಿನ ಇಂಚಿಂಚು ಮಾಹಿತಿ ಪೊಲೀಸರು ಬಿಚ್ಚಿಟ್ಟಿದ್ದಾರೆ.

ಮೈಸೂರು (ಫೆ.17): ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವಿಗೀಡಾಗಿರುವ ದುರ್ಘಟನೆ ಸಂಭವಿಸಿದೆ. ಹಣಕಾಸಿನ ನಷ್ಟದ ವಿಚಾರಕ್ಕೆ ಮನೆಯ ಯಜಮಾನನೇ ತನ್ನ ಕುಟುಂಬದ ಸದಸ್ಯರಾದ ತಾಯಿ, ಹೆಂಡತಿ ಹಾಗೂ ಮಗನನ್ನು ತಾನೇ ಕೊಲೆ ಮಾಡಿದ್ದಾನೆ. ನಂತರ ಆತನ ಸಹೋದರನಿಗೆ ಕರೆ ಮಾಡಿ ತಾನು ಸಾವಿಗೆ ಶರಣಾಗುವುದಾಗಿ ಕರೆ ಮಾಡಿ ತಿಳಿಸಿ ನೇಣು ಬಿಗಿದುಕೊಂಡಿದ್ದಾನೆ.

ಹೌದು, ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಸಾವು. ಮೈಸೂರು ವಿಶ್ವೇಶ್ವರಯ್ಯ ನಗರದ ಅಪಾರ್ಟ್‌ಮೆಂಟ‌ನಲ್ಲಿ ಘಟನೆ ನಡೆದಿದೆ. ಮೃತರನ್ನು ಮನೆ ಮಾಲೀಕ ಚೇತನ (45), ಆತನ ಹೆಂಡತಿ ರೂಪಾಲಿ (43) ಆತನ ತಾಯಿ ಪ್ರಿಯಂವಧ (62) ಹಾಗೂ ಆತನ ಮಗ ಕುಶಾಲ್ (15) ಎಂದು ಗುರುತಿಸಲಾಗಿದೆ. ಚೇತನ್ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರೆ, ಉಳಿದ ಮೂವರ ಶವಗಳು ಹಾಸಿಗೆ ಮೇಲೆ ಪತ್ತೆಯಾಗಿವೆ. ಸ್ವತಃ ಚೇತನ್ ತನ್ನ ತಾಯಿ, ಹೆಂಡತಿ ಹಾಗೂ ಮಗನಿಗೆ ವಿಷ ನೀಡಿ ಮನೆಯವರನ್ನು ಸಾಯಿಸಿ ತಾನು ನೇಣು ಬಿಗಿದುಕೊಂಡಿದ್ದಾನೆ.

ಈ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕಮಿಷನರ್ ಸೀಮಾ ಲಾಟ್ಕರ್ ಡಿಸಿಪಿ ಜಾನ್ಹವಿ, ವಿದ್ಯಾರಣ್ಯಪುರಂ ಇನ್ಸಪೆಕ್ಟರ್ ಮೋಹಿತ್ ಸೇರಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆರಂಭದಲ್ಲಿ ಸಾವಿಗೆ ನಿಖರ ಕಾರಣ ತಿಳಿದು ಬಂದಿರಲಿಲ್ಲ. ಈ ಘಟನೆ ಕುರಿತಂತೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಇದನ್ನೂ ಓದಿ: ರಾಜ್ಯದ ಜನತೆಗೆ 5 ಲಕ್ಷ ಗೆಲ್ಲುವ ಬಂಪರ್ ಆಫರ್ ಕೊಟ್ಟ ಸರ್ಕಾರ!

ಈ ಬಗ್ಗೆ ಮಾತನಾಡಿದ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು, ಇಲ್ಲಿ ನಾಲ್ಕು ಜನರ ಸಾವಾಗಿದೆ. ಇವರು ಎರಡು ಅಪಾರ್ಟ್‌ಮೆಂಟ್‌ನಲ್ಲಿದ್ದರು. ಮೃತ ಚೇತನ್ ಸೌದಿ ಅರೇಬಿಯಾಗೆ ಕಾರ್ಮಿಕರನ್ನು ಕಳುಹಿಸುವ ಕೆಲಸ ಮಾಡುತ್ತಿದ್ದರು. ಕಳೆದ 2019ರಲ್ಲಿ ಅಪಾರ್ಟ್ ಮೆಂಟ್ ಖರೀದಿಸಿದ್ದರು. ಮಗ 10ನೇ ತರಗತಿ ಓದುತ್ತಿದ್ದ. ಚೇತನ್ ಅಣ್ಣ ವಿದೇಶದಲ್ಲಿದ್ದಾರೆ. ವಿದೇಶದಲ್ಲಿರುವ ಚೇತನ್ ಅಣ್ಣನೇ ಮೃತ ಚೇತನ್ ಹೆಂಡತಿಯ ಅಪ್ಪ ಅಮ್ಮನಿಗೆ ಬೆಳ್ಳಗಿನ ಜಾವ ಕರೆ ಮಾಡಿ ಅಪಾರ್ಟ್‌ಮೆಂಟ್ ಬಳಿಗೆ ಹೋಗಲು ಹೇಳಿದ್ದಾರೆ. ಅವರು ಬಂದು ನೋಡಿದ್ದಾಗ ವಿಚಾರ ಗೊತ್ತಾಗಿದೆ. ನಿನ್ನೆ ಸಂಜೆ ಚೇತನ್ ಕುಟುಂಬ ದೇವಸ್ಥಾನಕ್ಕೆ ಹೋಗಿ ಮನೆಗೆ ಮರಳಿದ್ದನ್ನು ಕೆಲವರು ನೋಡಿದ್ದಾರೆ.

ಸಾವಿಗೂ ಮುನ್ನ ಚೇತನ್ ಡೆತ್ ಬರೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಮ್ಮ ಸಾವಿಗೆ ನಾವೇ ಕಾರಣ‌. ಹಣಕಾಸಿನ ಸಮಸ್ಯೆಯಿಂದಾಗಿ ನಾವು ಸಾಯುತ್ತಿದ್ದೇವೆ‌. ನಮ್ಮ ಸಾವಿಗೆ ಬೇರೆ ಯಾರು ಕಾರಣರಲ್ಲ. ನನ್ನ ಸ್ನೇಹಿತರಿಗೆ ಸಂಬಂಧರಿಗೆ ಯಾರು ತೊಂದರೆ ಕೊಡಬೇಡಿ. ನಮ್ಮನ್ನ ಕ್ಷಮಿಸಿಬಿಡಿ, I AM SORRY ಎಂದು ಚೇತನ್ ಬರೆದಿದ್ದಾರೆ. ಪೊಲೀಸರ ಪರಿಶೀಲನೆ ನಂತರ ನಾಲ್ಕು ಮೃತದೇಹಗಳನ್ನು ಕೆ.ಆರ್.ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ: ಸಾವಿನಲ್ಲೂ ಒಂದಾದ ವೃದ್ಧ ದಂಪತಿ; ಪತಿಯ ಸಾವಿನ ಆಘಾತದಿಂದ ಪತ್ನಿಗೂ ಹೃದಯಾಘಾತ!

ಚೇತನ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅಮೇರಿಕಾದಲ್ಲಿ ವಾಸವಾಗಿರುವ ಸಹೋದರ ಭರತ್‌ಗೆ ಕರೆ ಮಾಡಿದ್ದಾನೆ. ಬೆಳಗಿನ ಜಾವ 4 ಗಂಟೆಗೆ ಕರೆ ಮಾಡಿ, ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿ ಫೋನ್ ಕಟ್ ಮಾಡಿದ್ದಾನೆ. ಆಗ ಚೇತನ್ ಪತ್ನಿಯ ತಂದೆ ತಾಯಿಗೆ ಕರೆ ಮಾಡಿದ ಭರತ್ ತುರ್ತಾಗಿ ಅಪಾರ್ಟ್‌ಮೆಂಟ್ ತೆರಳುವಂತೆ ಹೇಳಿದ್ದಾರೆ. ಚೇತನ್ ಅವರ ಅತ್ತೆ ಮನೆಗೆ ಬರುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಮನೆಗೆ ಬಂದು ನೋಡಿದಾಗ ಸ್ವತಃ ಚೇತನ್ ತಾಯಿ, ಪತ್ನಿ, ಮಗನನ್ನು ಕೊಲೆ ಮಾಡಿದ್ದಾನೆಂಬುದು ತಿಳಿದುಬಂದಿದೆ. ಮೂವರಿಗೂ ವಿಷ ಉಣಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನತರ ತಾನು ಸಾವಿಗೆ ಶರಣಾಗಿದ್ದಾನೆ.