ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ, ಜಿಎಸ್‌ಐ ಸಮೀಕ್ಷೆಯ ನಂತರ ಚಿನ್ನದ ನಿಕ್ಷೇಪ ಸಿಗುತ್ತದೆ ಎಂಬ ಆಸೆಯಿಂದ ಕಿಡಿಗೇಡಿಗಳು ಸುಮಾರು ಒಂದು ಎಕರೆ ಸರ್ಕಾರಿ ಗುಡ್ಡವನ್ನು ಅಗೆದಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಥಳೀಯರು ಪೊಲೀಸ್ ತನಿಖೆಗೆ ಒತ್ತಾಯಿಸಿದ್ದಾರೆ.
ಹನೂರು (ಡಿ.22): ಚಿನ್ನದ ನಿಕ್ಷೇಪ ಸಿಗುತ್ತದೆ ಎಂಬ ಆಸೆಗೆ ಕೆಲ ಕಿಡಿಗೇಡಿಗಳು ಅಂದಾಜು 1 ಎಕರೆ ಸರ್ಕಾರಿ ಗುಡ್ಡವನ್ನೇ ಅಗೆದಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ದೊಡ್ಡಾಲತ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ತಾಲೂಕಿನ ದೊಡ್ಡಾಲತ್ತೂರು, ಅಜ್ಜೀಪುರ ಸುತ್ತಮುತ್ತಲು ಜಿಎಸ್ಐ ಅಧಿಕಾರಿಗಳು ಚಿನ್ನದ ನಿಕ್ಷೇಪ ಇರುವ ಕುರಿತು ಅಧ್ಯಯನಕ್ಕೆ ಮುಂದಾಗುತ್ತಿದ್ದಂತೆ ಗುಡ್ಡ ಅಗೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಅಧಿಕಾರಿಗಳು ರಾಜ್ಯದ ನಾನಾ ಭಾಗಗಳಲ್ಲಿ ಖನಿಜ ನಿಕ್ಷೇಪಗಳ ಲಭ್ಯತೆ ಬಗ್ಗೆ ಸಮೀಕ್ಷೆ ನಡೆಸಿದ್ದರು. ಅದರಂತೆ ಹನೂರಿನ ದೊಡ್ಡಾಲತ್ತೂರು, ಅಜ್ಜೀಪುರ ಸುತ್ತಮುತ್ತಲು ಸಹ ನಿಕ್ಷೇಪಗಳ ಕುರಿತು ಅಧ್ಯಯನ ಕೈಗೊಂಡಿದ್ದರು.
ಇದರ ಮಾಹಿತಿ ಅರಿತ ಕಿಡಿಗೇಡಿಗಳು ಗುಡ್ಡವನ್ನು ಅಗೆದಿದ್ದಾರೆ. ಈ ಕೃತ್ಯ ಎಸೆಗಿದವರು ಯಾರೆಂದು ಪೊಲೀಸರು ತನಿಖೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


