ಮಹಿಳೆಯರ ಮುಂದೆ ಮೂತ್ರ ವಿಸರ್ಜಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಶಿಕ್ಷಕನೊಬ್ಬ ವ್ಯಕ್ತಿಗೆ ಚಾಕು ಇರಿದಿದ್ದಾನೆ. ಮತ್ತೊಂದೆಡೆ, ಮುಂಡಗೋಡ ಅರಣ್ಯದಲ್ಲಿ ರುಂಡವಿಲ್ಲದ ಮಹಿಳೆಯ ಶವ ಪತ್ತೆಯಾಗಿದ್ದು, ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೈಸೂರು: ಮಹಿಳೆಯರ ಮುಂದೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಶಿಕ್ಷಕನಿಗೆ ತಿಳಿ ಹೇಳಿದ ವ್ಯಕ್ತಿಯನ್ನೇ ಚಾಕುವಿನಿಂದ ನಾಲ್ಕೈದು ಕಡೆ ಚುಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆರೋಪಿ ಶಿಕ್ಷಕ ಚಿಕ್ಕನಾಯಕನಹಳ್ಳಿ ಸಿ.ಎನ್.ಮಂಜುನಾಥ್‌ನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಚಾಕುವಿನಿಂದ ಇರಿತಕ್ಕೆ ಒಳಗಾಗಿರುವ ವ್ಯಕ್ತಿ ಸಿ.ಎಂ.ಗೋಪಾಲ್ ಅವರ ಸ್ಥಿತಿ ಗಂಭೀರವಾಗಿದೆ. ಐದಾರು ಮಂದಿ ಮಹಿಳೆಯರು ಮನೆ ಮುಂದೆ ಮಾತನಾಡುತ್ತಿರುವ ವೇಳೆ ಶಿಕ್ಷಕ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಅಗ ಗ್ರಾಮದ ಗೋಪಾಲ್ ಇದನ್ನು ಪ್ರಶ್ನಿಸಿ, ಬುದ್ಧಿ ಹೇಳಿದ್ದಾರೆ. ಆಗ ಶಿಕ್ಷಕ ಮಹಿಳೆಯರ ಮುಂದೆಯೇ ಅವಾಚ್ಯವಾಗಿ ನಿಂದಿಸಿದಾಗ ಗೋಪಾಲ್ ಪುತ್ರ ಅಭಿಷೇಕ್, ನನ್ನ ತಂದೆಗೆ ಏಕೆ ಬೈಯುತ್ತಿದ್ದಿಯ ಎಂದು ಕೇಳಿದ್ದಾರೆ. ಆಗ ಶಿಕ್ಷಕನ ಪತ್ನಿ ಪವಿತ್ರಾ ಮನೆಯಿಂದ ಚಾಕುವನ್ನು ಪತಿಗೆ ತಂದು ಕೊಟ್ಟಿದ್ಧಾರೆ. ತಕ್ಷಣವೇ ಚಾಕುವಿನಿಂದ ಗೋಪಾಲ್ ಎದೆ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ನಾಲ್ಕೈದು ಕಡೆ ಚುಚ್ಚಿದ್ದಾರೆ, ಬಿಡಿಸಲು ಬಂದ ಅಭಿಷೇಕ್‌ಗೂ ಸಹ ಚಾಕುವಿನಿಂದ ಗಾಯಗೊಳಿಸಿದ್ದಾನೆ.

ರುಂಡವಿಲ್ಲದ ಮಹಿಳೆಯ ಬೆತ್ತಲೆ ಮೃತ ದೇಹ ಪತ್ತೆ

ಮುಂಡಗೋಡ ತಾಲೂಕಿನ ಮಳಗಿ ಗ್ರಾಪಂ ವ್ಯಾಪ್ತಿಯ ಕೊಳಗಿ ಅರಣ್ಯ ಪ್ರದೇಶದಲ್ಲಿ ರುಂಡವಿಲ್ಲದ ಮಹಿಳೆಯ ಬೆತ್ತಲೆ ಮೃತ ದೇಹ ಪತ್ತೆಯಾದ ಸ್ಥಳಕ್ಕೆ ಶನಿವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎನ್. ದೀಪನ್ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.

ಮಹಿಳೆಯನ್ನು ಎರಡು ಮೂರು ದಿನಗಳ ಹಿಂದೆಯೇ ಹತ್ಯೆ ಮಾಡಿ ಅರಣ್ಯದಲ್ಲಿ ಎಸೆದಿರಬಹುದು ಎಂದು ಶಂಕಿಸಲಾಗಿದೆ. ಮಹಿಳೆಯ ಗುರುತು ಪತ್ತೆಯಾಗಬಾರದೆಂಬ ಉದ್ದೇಶದಿಂದ ಹಂತಕರು ಮಹಿಳೆಯರು ರುಂಡ ಹೊತ್ತೊಯ್ದಿದ್ದಾರೆ ಎನ್ನಲಾಗುತ್ತಿದೆ. ಮಹಿಳೆಯ ರುಂಡದ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಪೊಲೀಸರು ತನಿಖೆ ಚುರುಕುಗೊಂಡಿದ್ದು, ಇದುವರೆಗೂ ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಶ್ವಾನದಳ ಕೂಡ ಸ್ಥಳ ಪರಿಶೀಲಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಪತ್ತೆಯಾದ ಮಹಿಳೆಯರ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ಈಗ ಪೊಲೀಸರು ತೊಡಗಿದ್ದಾರೆ.

ಪೊಲೀಸ ಪ್ರಕಟಣೆ: ಮುಂಡಗೋಡ ತಾಲೂಕಿನ ಮಳಗಿ ಬಳಿಯ ಕೊಳಗಿ ಗ್ರಾಮಕ್ಕೆ ಹೋಗುವ ದಾರಿಯ ಪಕ್ಕದ ಅರಣ್ಯ ಪ್ರದೇಶದಲ್ಲಿ ೪೦ರಿಂದ ೫೦ ವರ್ಷದ ಅಪರಿಚಿತ ಹೆಂಗಸಿನ ತಲೆ ಭಾಗವಿಲ್ಲದ (ರುಂಡವಿಲ್ಲದ) ಶವ ಸಿಕ್ಕಿದ್ದು, ಕೊರಳಲ್ಲಿ ಲಿಂಗದಕಾಯಿ (ಶಿವದಾರದ ಜತೆಗೆ) ಇದ್ದು ಅಂದಾಜು ೫ ಅಡಿ ಎತ್ತರ, ಗೋದಿ ಬಣ್ಣ ಹೊಂದಿದ್ದು, ಯಾವುದೇ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಮಹಿಳೆ ಮಿಸ್ಸಿಂಗ್ ಪ್ರಕರಣಗಳು ಈ ಕಳೇಬರಹಕ್ಕೆ ಹೋಲಿಕೆ ಆಗುತ್ತಿದ್ದಲ್ಲಿ ತಿಳಿಸಲು ಪೊಲೀಸ್‌ ಪ್ರಕಟಣೆ ಹೊರಡಿಸಿದೆ.

ರೈಲು ಹಳಿಗೆ ಬಿದ್ದು ಆತ್ಮ*ತ್ಯೆ

ಹುಬ್ಬಳ್ಳಿಯ ದೇಸಾಯಿ ಬ್ರಿಡ್ಜ್ ಹತ್ತಿರದ ರೈಲ್ವೆ ಹಳಿಯಲ್ಲಿ ಗೂಡ್ಸ್ ರೈಲಿಗೆ ಬಿದ್ದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ. ಇಲ್ಲಿನ ಗಣೇಶಪೇಟೆ ಕುಲಕರ್ಣಿ ಹಕ್ಕಲ ನಿವಾಸಿ ಮುನ್ನಾ(60) ಆತ್ಮಹತ್ಯೆ ಮಾಡಿಕೊಂಡವರು. ಶನಿವಾರ ಸಂಜೆ 4.30 ರಿಂದ 5 ಗಂಟೆಯ ಸುಮಾರಿಗೆ ಗೂಡ್ಸ್ ರೈಲಿಗೆ ಬಿದ್ದು ಮೃತಪಟ್ಟಿದ್ದು, ಮಾನಸಿಕವಾಗಿ ನೊಂದಿದ್ದನು ಎನ್ನಲಾಗಿದೆ. ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.