ನಕ್ಸಲ್‌ ಮುಕ್ತ ಭಾರತದ ಕಡೆಗಿನ ಬಹುದೊಡ್ಡ ಹೆಜ್ಜೆ ಎಂಬಂತೆ, ಕುಖ್ಯಾತ ನಕ್ಸಲ್‌ ಕಮಾಂಡರ್‌ ಮದ್ವಿ ಹಿದ್ಮಾ ನನ್ನು ಭದ್ರತಾಪಡೆಗಳು ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಹೊಡೆದುರುಳಿಸಿವೆ. ಈ ಮೂಲಕ, ಛತ್ತೀಸ್‌ಗಢದ ನಕ್ಸಲ್‌ ವಾದಕ್ಕೆ ಕೊನೆ ಮೊಳೆ ಹೊಡೆದಂತಾಗಿದೆ ಎಂದ ಭದ್ರತಾ ಪಡೆಗಳು

ವಿಜಯವಾಡ/ರಾಯ್ಪುರ : ನಕ್ಸಲ್‌ ಮುಕ್ತ ಭಾರತದ ಕಡೆಗಿನ ಬಹುದೊಡ್ಡ ಹೆಜ್ಜೆ ಎಂಬಂತೆ, ಕುಖ್ಯಾತ ನಕ್ಸಲ್‌ ಕಮಾಂಡರ್‌ ಮದ್ವಿ ಹಿದ್ಮಾ ನನ್ನು ಭದ್ರತಾಪಡೆಗಳು ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಹೊಡೆದುರುಳಿಸಿವೆ. ಈ ಮೂಲಕ, ಛತ್ತೀಸ್‌ಗಢದ ನಕ್ಸಲ್‌ ವಾದಕ್ಕೆ ಕೊನೆ ಮೊಳೆ ಹೊಡೆದಂತಾಗಿದೆ ಎಂದು ಭದ್ರತಾ ಪಡೆಗಳು ಹೇಳಿವೆ.

ಆಂಧ್ರ-ಛತ್ತೀಸ್‌ಗಢ ಗಡಿಯ ಬಸ್ತರ್‌ ಪ್ರದೇಶದಲ್ಲಿ 2 ದಶಕದಿಂದ 26 ಹತ್ಯಾಕಾಂಡದಲ್ಲಿ ಭಾಗಿಯಾಗಿ 155 ಯೋಧರ ಮಾರಣಹೋಮ ನಡೆಸಿದ್ದ 44 ವರ್ಷದ ಈತನನ್ನು ಮುಗಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನ.30ರ ಡೆಡ್‌ಲೈನ್‌ ನೀಡಿದ್ದರು. ಅದರ ಒಳಗೇ ಆತನ ಎನ್‌ಕೌಂಟರ್‌ ನಡೆದಿದೆ ಎಂಬುದು ಗಮನಾರ್ಹ.

‘ಮಂಗಳವಾರ ಬೆಳಗ್ಗೆ 6:30ರಿಂದ 4 ತಾಸು ಕಾಲ ಮಾರೆಡುಮಿಲೀ ಮಂಡಲ ಪ್ರದೇಶದಲ್ಲಿ ಹಲವು ವಿಂಗ್‌ಗಳ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ನಿರಂತರ ಗುಂಡಿನ ಚಕಮಕಿ ನಡೆಯಿತು. ಆ ವೇಳೆ ಎನ್‌ಕೌಟರ್‌ನಲ್ಲಿ ಹಿದ್ಮಾ, ಆತನ ಪತ್ನಿ ಮಡಕಂ ರಾಜೆ ಸೇರಿದಂತೆ 6 ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಮೃತರಲ್ಲಿ ಇಬ್ಬರು ಮಹಿಳೆಯರು ಮತ್ತು ನಾಲ್ವರು ಪುರುಷರು’ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ ಬರ್ದಾರ್‌ ಹೇಳಿದ್ದಾರೆ.

ಎನ್‌ಕೌಂಟರ್‌ ವೇಳೆ ಹಲವು ಮಾವೋವಾದಿಗಳು ಪರಾರಿಯಾಗಿದ್ದು, ಅವರಿಗಾಗಿ ಶೋಧ ಮುಂದುವರೆದಿದೆ. ಅತ್ತ ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.

ಎನ್‌ಕೌಟರ್‌ ನಡೆದ ಸ್ಥಳದಿಂದ 2 ಎಕೆ45 ರೈಫಲ್‌, 1 ಪಿಸ್ತೂಲು, ರಿವಾಲ್ವರ್‌, ಸಿಂಗಲ್‌ ಬೋರ್‌(ಪ್ರತಿ ಬಾರಿ ಬಳಸುವಾಗ ರೀಲೋಡ್‌ ಮಾಡಬೇಕಾದ) ಆಯುಧ, ಡೀಟೋನೇಟರ್‌, ಫ್ಯೂಸ್‌ ವೈರ್‌, 7 ಕಿಟ್‌ ಬ್ಯಾಗ್‌ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಛತ್ತೀಸ್‌ಗಢದಲ್ಲಿ ನಕ್ಸಲರ ಇರುವಿಕೆ ಕಷ್ಟವಾಗುತ್ತಿರುವ ಕಾರಣ, ಅವರೆಲ್ಲ ಆಂಧ್ರಪ್ರದೇಶಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ಆಂಧ್ರದ ಗುಪ್ತಚರ ವಿಭಾಗದ ಎಡಿಜಿಪಿ ಮಹೇಶ್‌ಚಂದ್ರ ಲಡ್ಡಾ ಹೇಳಿದ್ದಾರೆ.

ಸಂಗಡಿಗನಿಂದಲೇ ಸುಳಿವು:

ಹಿದ್ಮಾನ ಬಗ್ಗೆ, ಅಕ್ಟೋಬರ್‌ನಲ್ಲಿ ಶರಣಾಗಿದ್ದ ಆತನ ಸಹಚರನೇ ಭದ್ರತಾ ಪಡೆಗೆ ಮಾಹಿತಿ ನೀಡಿದ್ದ ಎಂದು ತಿಳಿದುಬಂದಿದೆ. ‘ವರ್ಷಾರಂಭದಲ್ಲಿ ನಡೆದ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡು ಹಿಡ್ಮಾ, ಸುಮಾರು 250 ವಿಶ್ವಾಸಾರ್ಹ ಕೇಡರ್‌ಗಳೊಂದಿಗೆ ತೆಲಂಗಾಣಕ್ಕೆ ಹೋಗಿದ್ದಾನೆ’ ಎಂದು ಪಿಎಲ್‌ಗಿಎ ಸಂಘಟನೆಯ ಸದಸ್ಯನಾಗಿದ್ದ ಓಯಂ ಲಖ್ಮು ತಿಳಿಸಿದ್ದ ಎನ್ನಲಾಗಿದೆ.

ಎನ್‌ಕೌಟರ್‌ ನಡೆದದ್ದು ಹೇಗೆ?:

ತಲೆಯ ಮೇಲೆ 50 ಲಕ್ಷದಿಂದ 1 ಕೋಟಿ ರು. ವರೆಗೆ ಬಹುಮಾನ ಹೊಂದಿದ್ದ ಹಿದ್ಮಾ ಮೇಲೆ ಗುಪ್ತಚರ ಇಲಾಖೆಯು 34 ತಾಸುಗಳಿಂದ ಕಣ್ಣಿಟ್ಟಿತ್ತು. ಆತನ ಚಲನವಲನವನ್ನು ನಿರಂತರವಾಗಿ ಗಮನಿಸಿದ ಬಳಿಕ, ಸ್ಥಳೀಯರಿಂದಲೂ ಪಡೆದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆಗಾಗಿ ಭದ್ರತಾಪಡೆಯ ಸಣ್ಣ ತಂಡವನ್ನು ಆತನಿದ್ದಲ್ಲಿಗೆ ಕಳಿಸಲಾಗಿತ್ತು. ಹಿದ್ಮಾ ಒಂದೊಮ್ಮೆ ತಪ್ಪಿಸಿಕೊಳ್ಳಲು ಯತ್ನಿಸಿದರೆ ಅದನ್ನು ವಿಫಲಗೊಳಿಸಲು ಹಲವು ಹಂತದಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಿರಂತರ 4 ತಾಸಿನ ಹುಡುಕಾಟ, ಕಣ್ಗಾವಲು, ದಾಳಿ-ಪ್ರತಿದಾಳಿಯ ಬಳಿಕ ಹಿದ್ಮಾನನ್ನು ಪರಲೋಕಕ್ಕೆ ಅಟ್ಟಲಾಯಿತು. ಅಲ್ಲಿಯವರೆಗೆ ಭದ್ರತಾಪಡೆಗಳ ಕಣ್ತಪ್ಪಿಸಿ ಓಡಾಡುತ್ತಿದ್ದ ಈತ, ವಿವಿಐಪಿಗಳ ಥರ ಭಾರೀ ಭದ್ರತೆ ಹೊಂದಿದ್ದ ಎಂದು ತಿಳಿದುಬಂದಿದೆ.