ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನ ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕೊನೆಗೂ ಮಂಗಳೂರು ಪೊಲೀಸರು ಎಸ್‌ಡಿಪಿಐ ಮುಖಂಡನ ಪುತ್ರನ ಸಹಿತ ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ವರದಿ- ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್ 
ಮಂಗಳೂರು (ಆ.23): ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನ ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕೊನೆಗೂ ಮಂಗಳೂರು ಪೊಲೀಸರು ಎಸ್‌ಡಿಪಿಐ ಮುಖಂಡನ ಪುತ್ರನ ಸಹಿತ ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾಲೇಜು ಓದುತ್ತಿದ್ದ ಮುಸ್ಲಿಂ ವಿದ್ಯಾರ್ಥಿಯನ್ನ ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) (Social Democratic Party of India-SDPI) ಮುಖಂಡ ಅನ್ವರ್ ಸಾದತ್ ಅವರ ಪುತ್ರ ಅಬ್ದುಲ್ಲಾ ಹನ್ನಾನ್ (19) ಸೇರಿ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ರಾಹಿಂ ತಾಬೀಶ್ (19), ಮಹಮ್ಮದ್ ಶಾಕೀಫ್(19), ಮಹಮ್ಮದ್ ಶಾಯಿಕ್(19), ಯು‌.ಪಿ‌.ತನ್ವೀರ್(19), ಅಬ್ದುಲ್ ರಶೀದ್(20) ಮತ್ತು ಮನ್ಸೂರ್(19) ಉಳಿದ ಬಂಧಿತರು ಆಗಿದ್ದಾರೆ. 

ಅಮೇರಿಕಾದಲ್ಲಿ ಮೃತಪಟ್ಟ ದಾವಣಗೆರೆ ಕುಟುಂಬದ ಮೃತದೇಹಗಳನ್ನೂ ಕನ್ನಡ ನಾಡಿಗೆ ತರಲಾಗಲಿಲ್ಲ: ಅಂತಿಮ ದರ್ಶನವೂ ಸಿಗಲಿಲ್ಲ

ಎಸ್‌ಡಿಪಿಐ ಮುಖಂಡನ ಮಗನ ಮೇಲೆ ಗೂಂಡಾಗಿರಿ ಆರೋಪ: ಎಸ್‌ಡಿಪಿಐ ಮುಖಂಡ ಅನ್ವರ್ ಸಾದತ್ ಪುತ್ರ ಹನಾನ್ ವಿರುದ್ದ ಗೂಂಡಾಗಿರಿ ಆರೋಪ ವ್ಯಕ್ತವಾಗಿತ್ತು. ಮಂಗಳೂರು ಹೊರವಲಯದ ಅಡ್ಯಾರ್ ಬಳಿಯ ಫ್ಲಾಟ್ ನಲ್ಲಿ ಘಟನೆ ನಡೆದಿದ್ದು, ನಗರದ ಅಲೋಶಿಯಸ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಗೆ ಹಲ್ಲೆ ನಡೆಸಲಾಗಿತ್ತು. ಮಂಗಳೂರಿನ ಬಲ್ಮಠ ಬಳಿಯ ಮತ್ತೊಂದು ಖಾಸಗಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಗಳಿಂದ ಹಲ್ಲೆ ನಡೆದಿದ್ದು, ಹುಡುಗಿ ವಿಚಾರಕ್ಕೆ ಮುಸ್ಲಿಂ ವಿದ್ಯಾರ್ಥಿಯನ್ನ ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ ಬಗ್ಗೆ ದೂರು ನೀಡಲಾಗಿತ್ತು. 

ಬೆಲ್ಟ್‌, ಕೋಲು, ಚಾಕುವಿನಿಂದ ಮಾರಣಾಂತಿಕ ಹಲ್ಲೆ: ಖಾಸಗಿ ಫ್ಲಾಟ್‌ನಲ್ಲಿ ಕೂಡಿ ಹಾಕಿ ಮನ ಬಂದಂತೆ ಥಳಿಸಿದ ಯುವಕರು, ಗಾಂಜಾ ನಶೆಯಲ್ಲಿ ವಿದ್ಯಾರ್ಥಿ ಮೇಲೆ ರಕ್ತ ಹೆಪ್ಪುಗಟ್ಟುವಂತೆ ಹೊಡೆದಿದ್ದಾರೆ. ಪ್ಯಾಂಟ್‌ಗೆ ಹಾಕಿಕೊಳ್ಳುವ ಬೆಲ್ಟ್ ಹಾಗೂ ಕೋಲಿನಿಂದ ಹಾಗೂ ಚಾಕು‌ ಬೀಸಿ ಮನ ಬಂದಂತೆ ದಾಳಿ ಮಾಡಿದ್ದಾರೆ. ಹಲ್ಲೆಗೊಳಗಾದ ವಿದದ್ಯಾರ್ಥಿಯನ್ನು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳದ ಇಬ್ರಾಹಿಂ ಫಾಹಿಂ(18) ಆಗಿದ್ದಾನೆ. ಎಸ್‌ಡಿಪಿಐ ಮುಖಂಡ ಅನ್ವರ್ ಸಾದತ್ ಪುತ್ರ ಹನಾನ್ ಈ ಹಲ್ಲೆ ಘಟನೆಯ ನೇತೃತ್ವ ವಹಿಸಿದ್ದ ಎಂದು ದೂರು ನೀಡಲಾಗಿತ್ತು. 

ಮಂಗಳೂರು: ಮುಸ್ಲಿಂ ವಿದ್ಯಾರ್ಥಿ ಮೇಲೆ ನೈತಿಕ ಪೊಲೀಸ್ ಗಿರಿ: ಎಸ್ಡಿಪಿಐ ಮುಖಂಡನ ಪುತ್ರ ಭಾಗಿ?

ಕೇರಳದಿಂದ ಓದಲು ಬಂದ ವಿದ್ಯಾರ್ಥಿ ಮೇಲೆ ಹಲ್ಲೆ: ಕೇರಳ ಮೂಲದ ಇಬ್ರಾಹಿಂ ಪಾಹಿಂನನ್ನು ಅಗಸ್ಟ್ 23ರ ಮಧ್ಯಾಹ್ನ ಕಿಡ್ನಾಪ್ ಮಾಡಿಕೊಂಡು ಹೋಗಿ ಗಂಭೀರ ಹಲ್ಲೆ ಮಾಡಲಾಗಿತ್ತು. ಇದರಿಂದ ತೀವ್ರ ಗಾಯಗೊಂಡ ಪಾಹಿಂ ಪೊಲೀಸರಿಗೆ ದೂರು ನೀಡಿದ ನಂತರ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಇನ್ನು ಮಂಗಳೂರು ಬಂದರು ಠಾಣೆ ಪೊಲೀಸರು ಹನ್ನಾನ್ ಸೇರಿ ಏಳು ಜನರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಹುಡುಗಿ ವಿಚಾರಕ್ಕೆ ಹಲ್ಲೆ ಮಾಡಲಾಗಿದೆ ಎಂಬ ಹೇಳಿಕೆ ಬಂದಿದ್ದು, ಇನ್ನೂ ವಿಚಾರಣೆ ಮಾಡಲಾಗುತ್ತಿದೆ.