Asianet Suvarna News Asianet Suvarna News

ಮಂಗಳೂರು: ಮುಸ್ಲಿಂ ವಿದ್ಯಾರ್ಥಿ ಮೇಲೆ ನೈತಿಕ ಪೊಲೀಸ್ ಗಿರಿ: ಎಸ್ಡಿಪಿಐ ಮುಖಂಡನ ಪುತ್ರ ಭಾಗಿ?

ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನ ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಎಸ್ಡಿಪಿಐ ಮುಖಂಡನ ಪುತ್ರನೇ ಈ ನೈತಿಕ ಪೊಲೀಸ್ ಗಿರಿಯಲ್ಲಿ ಭಾಗಿಯಾದ ಆರೋಪ ಕೇಳಿ ಬಂದಿದೆ.

Moral police attack on Muslim student SDPI leaders son involved gvd
Author
First Published Aug 26, 2023, 10:09 AM IST

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಆ.26): ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನ ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಎಸ್ಡಿಪಿಐ ಮುಖಂಡನ ಪುತ್ರನೇ ಈ ನೈತಿಕ ಪೊಲೀಸ್ ಗಿರಿಯಲ್ಲಿ ಭಾಗಿಯಾದ ಆರೋಪ ಕೇಳಿ ಬಂದಿದೆ. ಮುಸ್ಲಿಂ ವಿದ್ಯಾರ್ಥಿಯನ್ನ ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಎಸ್ಡಿಪಿಐ ಮುಖಂಡ ಅನ್ವರ್ ಸಾದತ್ ಪುತ್ರ  ಹನಾನ್ ವಿರುದ್ದ ಗೂಂಡಾಗಿರಿ ಆರೋಪ ವ್ಯಕ್ತವಾಗಿದೆ. ಖಾಸಗಿ ಕಾಲೇಜು ವಿದ್ಯಾರ್ಥಿಯ ಮೇಲೆ ಸ್ವಧರ್ಮೀಯ ಯುವಕರಿಂದಲೇ ನೈತಿಕ ಪೊಲೀಸ್ ಗಿರಿ ನಡೆದಿದೆ. 

ಮಂಗಳೂರು ಹೊರವಲಯದ ಅಡ್ಯಾರ್ ಬಳಿಯ ಫ್ಲಾಟ್ ನಲ್ಲಿ ಘಟನೆ ನಡೆದಿದ್ದು, ನಗರದ ಅಲೋಶಿಯಸ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಗೆ ಹಲ್ಲೆ ನಡೆಸಲಾಗಿದೆ. ಮಂಗಳೂರಿನ ಬಲ್ಮಠ ಬಳಿಯ ಮತ್ತೊಂದು ಖಾಸಗಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಗಳಿಂದ ಹಲ್ಲೆ ನಡೆದಿದ್ದು, ಹುಡುಗಿ ವಿಚಾರಕ್ಕೆ ಮುಸ್ಲಿಂ ವಿದ್ಯಾರ್ಥಿಯನ್ನ ಕಿಡ್ನಾಪ್ ಮಾಡಿ ನೈತಿಕ ಪೊಲೀಸ್ ಗಿರಿ ನಡೆಸಿದ ಬಗ್ಗೆ ದೂರು ನೀಡಲಾಗಿದೆ.  ಖಾಸಗಿ ಫ್ಲಾಟ್ ನಲ್ಲಿ ಕೂಡಿ ಹಾಕಿ ಮನ ಬಂದಂತೆ ಥಳಿಸಿದ ಯುವಕರು, ಗಾಂಜಾ ನಶೆಯಲ್ಲಿ ವಿದ್ಯಾರ್ಥಿ ಮೇಲೆ ರಕ್ತ ಹೆಪ್ಪುಗಟ್ಟುವಂತೆ ದಾಳಿ ನಡೆಸಿದ್ದಾರೆ. 

ರಾಜ್ಯ ಸರ್ಕಾರ ತಕ್ಷಣವೇ ಬರಗಾಲ ಘೋಷಿಸಿ: ಬಿಎಸ್‌ವೈ, ಬೊಮ್ಮಾಯಿ ಆಗ್ರಹ

ಬೆಲ್ಟ್ ಹಾಗೂ ಕೋಲಿನಿಂದ ಚಾಕು‌ ಬೀಸಿ ಮನ ಬಂದಂತೆ ದಾಳಿ ಮಾಡಲಾಗಿದ್ದು, ಬಲ್ಮಠದ ಖಾಸಗಿ ಕಾಲೇಜಿನ 7 ಮುಸ್ಲಿಂ ವಿದ್ಯಾರ್ಥಿಗಳಿಂದ ಹಲ್ಲೆ ನಡೆದಿದೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳದ ಇಬ್ರಾಹಿಂ ಫಾಹಿಂ(18)ಗೆ ಥಳಿಸಿದ್ದು, ಎಸ್ಡಿಪಿಐ ಮುಖಂಡ ಅನ್ವರ್ ಸಾದತ್ ಪುತ್ರ ಹನಾನ್ ನೇತೃತ್ವ ವಹಿಸಿದ್ದ ಎಂದು ದೂರಲಾಗಿದೆ. ಅಗಸ್ಟ್ 23ರ ಮಧ್ಯಾಹ್ನ ಕಿಡ್ನಾಪ್ ಮಾಡಿಕೊಂಡು ತೆರಳಿ ಗಂಭೀರ ಹಲ್ಲೆ ಮಾಡಲಾಗಿದ್ದು, ಸದ್ಯ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಫಾಹಿಂಗೆ ಚಿಕಿತ್ಸೆ ನೀಡಲಾಗ್ತಿದೆ. ಹನಾನ್ ಮತ್ತು ತಬೀಶ್ ಹಾಗೂ ತಂಡದಿಂದ ಯುವಕನ ಮೇಲೆ ದಾಳಿ ನಡೆದಿದ್ದು, ಸದ್ಯ ಬಂದರು ಠಾಣೆ ಪೊಲೀಸರಿಂದ ಓರ್ವನ ಬಂಧನವಾಗಿದೆ‌. ಹನಾನ್ ಹಾಗೂ ಉಳಿದ ಆರು ಜನರ ವಿರುದ್ದ ಬಂದರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 

ದಾಖಲಾದ ಎಫ್ಐಆರ್ ನಲ್ಲೇನಿದೆ?: ದೂರುದಾರ ಪಾಹಿಂ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಓದುತ್ತಿದ್ದು, ಅಗಸ್ಟ್ 23 ರಂದು 12.30 ಗಂಟೆಗೆ ಕಾಲೇಜು ಮುಗಿಸಿ ಸ್ನೇಹಿತನಾದ ಶಾಮೀರ್‌ ಕುಂಜತ್ತೂರು ಎಂಬವನ ಜೊತೆ ಆಲೋಶಿಯಸ್ ಕಾಲೇಜಿನ ಎದುರಿಗೆ ಇರುವ ಬಾವುಟಗುಡ್ಡೆ ಬಸ್‌ ಸ್ಟ್ಯಾಂಡ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದ. ಈ ವೇಳೆ ಸ್ನೇಹಿತ ಶಾಮಿರ್ ಗೆ ಪರಿಚಯದ 4-5 ಜನರು ಬಿಳಿ ಸ್ಕ್ರಿಪ್ಟ್ ಕಾರಿನಲಿ ಬಂದು ಏರು ಧ್ವನಿಯಲ್ಲಿ ಮಾತಾಡಿ ಕರೆದುಕೊಂಡು ಹೋಗಿದ್ದಾರೆ. ನಂತರ ಶಾಮೀರ್ ನನ್ನು 1 ಗಂಟೆಯ ನಂತರ ಅದೇ ಕಾರಿನಲ್ಲಿ ಕರೆದುಕೊಂಡು ಬಂದು ಅಲೋಶಿಯಸ್ ಕಾಲೇಜು ಎದುರಿಗಿರುವ ಗೂಡಂಗಡಿಯಲ್ಲಿ ಜ್ಯೂಸ್ ಕೊಡಿಸಿರುತ್ತಾರೆ. 

ನಂತರ ಫಾಹಿಂ ಶಾಮೀರ್ ನ ಹತ್ತಿರ ಹೋಗಿ ವಿಚಾರಿಸಿ ಸ್ನೇಹಿತನಾದ ಬಿಲಾಲ್‌ ಎಂಬವನಿಗೆ ಕಾರಿನಲ್ಲಿ ಬಂದವರ ಬಗ್ಗೆ ಹೇಳಿದ್ದು, ನಂತರ ಕಾರಿನಲ್ಲಿ ಇದ್ದವರು ಪಾಹಿಂಗೆ 'ನೀನು ಫೋನ್ ಮಾಡಿ ವಿಷಯ ತಿಳಿಸಿದಿಯಾ? ನಿನಗೆ ಏಕೆ ಅಧಿಕ ಪ್ರಸಂಗ ನೀನು ದೊಡ್ಡ ಜನವ' ಎಂದು ಹೇಳುತ್ತಾ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಕಣ್ಣೂರಿನಲ್ಲಿರುವ ಯಾವುದೋ ಅಪಾರ್ಟ್ಮೆಂಟ್ ಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ಮುಖಕೆ ಕೈಯಿಂದ ಗುದ್ದಿ, ಕೈಯಿಗೆ ಮೈಯಿಗೆ ಕೋಲಿನಿಂದ ಮತ್ತು ಬೆಲ್ಟ್ ನಿಂದ ಹಲ್ಲೆ ಮಾಡಿ, ಚಾಕುವಿನಿಂದ ಎರಡು ಕೈಗೆ ತಾಗಿಸಿ ಗಾಯ ಮಾಡಿ ಚಾಕುವನ್ನು ಬಿಸಿ ಮಾಡಿ ಬಲ ಮುಂಗೈಗೆ ಸುಟ್ಟಿದ್ದು ನಂತರ ಅದೇ ಕಾರಿನಲ್ಲಿ ಕೂರಿಸಿಕೊಂಡು ದೇರಳಕಟ್ಟೆಗೆ ಕರೆದುಕೊಂಡು ಹೋಗಿ ನೀನು ಏನಾದರು ಈ ವಿಷಯವನ್ನು ಪೊಲೀಸರಿಗೆ ದೂರು ಕೊಟ್ಟರೆ ನಾವು ಜೈಲಿನಿಂದ ಹೊರಗೆ ಬಂದ ನಂತರ ನಿನಗೆ ಮತ್ತೆ ಹೊಡೆಯುತ್ತೇವೆ ಎಂದು ಬೆದರಿಕೆ ಹಾಕಿ ದೇರಳಕಟ್ಟೆ ಯೆನಪೋಯ ಆಸ್ಪತ್ರೆ ಬಳಿ ಬಿಟ್ಟು ಹೋಗಿದ್ದಾರೆ. 

ಎಸ್ಡಿಪಿಐ ಮುಖಂಡನ ಪುತ್ರ ಭಾಗಿ?: ಈ ಮಧ್ಯೆ ನೈತಿಕ ಪೊಲೀಸ್ ಗಿರಿಯಲ್ಲಿ ಎಸ್ಡಿಪಿಐ ಮುಖಂಡ ಅನ್ವರ್ ಸಾದತ್ ಪುತ್ರ ಹನಾನ್ ಹೆಸರು ಕೇಳಿ ಬಂದಿದ್ದು, ಆತನ ವಿರುದ್ದವೇ ಪೊಲೀಸರು ಮೊದಲ ಆರೋಪಿ ಎಂದು ಪ್ರಕರಣ ದಾಖಲು ಮಾಡಿದ್ದಾರೆ. ಆದರೆ ಈ ಬಗ್ಗೆ ಎಸ್ಡಿಪಿಐ ಮುಖಂಡರು ಸ್ಪಷ್ಟನೆ ನೀಡಿದ್ದು, ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಹರಿದಾಡ್ತಿದೆ‌. ಮಂಗಳೂರಿನ ಪ್ರತಿಷ್ಠಿತ ಎರಡು ವಿದ್ಯಾಸಂಸ್ಥೆಗಳಾದ ಅಲೋಶಿಯಸ್ ಮತ್ತು ಯೇನಪೋಯ ಕಾಲೇಜಿನ ಕೆಲವು ವಿದ್ಯಾರ್ಥಿಗಳ ನಡುವೆ ಹಿಂದಿನಿಂದಲೂ ಪರಸ್ಪರ ಹಗೆತನ ಇತ್ತು‌. ಮೊನ್ನೆ ಕೂಡ ಗಲಾಟೆ ನಡೆದಿತ್ತು.

ಎಸ್‌ಡಿಪಿಐಯ ಮಾಜಿ ನಾಯಕ ಅನ್ವರ್ ಸಾದಾತ್ ರ ಮಗ ಯೇನೆಪೋಯ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಆತನ ಗೆಳೆಯ ನಿನ್ನ ಕಾರು ಒಮ್ಮೆ ಕೊಡು ನಾವೊಮ್ಮೆ ರೌಂಡ್ಸ್ ಹೊಡೆದು ಬರುತ್ತೇವೆ ಎಂದು ಹೇಳಿ ಕಾರು ಪಡೆಯುತ್ತಾರೆ. ಆದರೆ ಆ ಪೋಕರಿ ವಿದ್ಯಾರ್ಥಿಗಳು ಕಾರನ್ನು ದುರುಪಯೋಗ ಪಡಿಸಿಕೊಂಡು ತಮಗೆ ಹಗೆತನ ಇರುವ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಯನ್ನು ನಿರ್ದಿಷ್ಟ ಸ್ಥಳದಿಂದ ಬಲವಂತವಾಗಿ ಕೂರಿಸಿಕೊಂಡು ಹೋಗಿ ದೈಹಿಕ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆ ನಡೆಸುವ ತಂಡದಲ್ಲಿ ಅನ್ವರ್ ಸಾದಾತ್ ರ ಮಗ ಇರಲಿಲ್ಲ.‌ 

ಶ್ರೀಮಂತರ ಜೇಬು ತುಂಬಿಸುವವರು ದೇಶದಲ್ಲಿ ಅಧಿಕಾರದಲ್ಲಿದ್ದಾರೆ: ಸಿದ್ದರಾಮಯ್ಯ

ಈ ಘಟನೆ ತಿಳಿದ ಕೂಡಲೇ ಅನ್ವರ್ ಸಾದಾತ್ ಗೂಡಿನಬಳಿಯವರ ಕುಟುಂಬಸ್ಥರು ಆತನನ್ನು ಠಾಣೆಗೆ ಕರೆದು ಕೊಂಡು ಹೋಗಿ ಠಾಣಾಧಿಕಾರಿಯ ಬಳಿ ನೈಜತೆಯನ್ನು ವಿವರಿಸಿ ಮನವರಿಕೆ ಮಾಡಿದ್ದಾರೆ. ಪೊಲೀಸರು ಕಾರು ನೀಡಿದ ವಿದ್ಯಾರ್ಥಿಯನ್ನು ವಿಚಾರಣೆ ನಡೆಸಿ ಸಣ್ಣ ಕೇಸ್ ದಾಖಲಿಸಿ ಬಿಟ್ಟು ಕಳಿಸಿದ್ದಾರೆ. ಹಲ್ಲೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಕಠಿಣ ಸೆಕ್ಷನ್ ನ್ನು ಕೂಡ ಹಾಕಿದ್ದಾರೆ. ಕಾರು ಕೊಟ್ಟ ವಿದ್ಯಾರ್ಥಿಯ ತಂದೆ ಸದ್ಯಕ್ಕೆ ಅವರು ಪಕ್ಷದಲ್ಲಿ ಯಾವುದೇ ನಾಯಕತ್ವದಲ್ಲಿ ಇಲ್ಲದಿದ್ದರೂ ಈ ಹಿಂದೆ ಅವರು SDPI ಪಕ್ಷದ ನಾಯಕರಾಗಿದ್ದರು ಎಂಬ ಕಾರಣಕ್ಕೆ ಮಾತ್ರ ಈ ಎಲ್ಲಾ ಕೋಲಾಹಲ ಮಾಡಿ ವಿಕೃತ ಸಂತೋಷವನ್ನು ಪಡೆಯುತ್ತಿದ್ದಾರೆ ಎಂಬ ಪೋಸ್ಟ್ ಹರಿ ಬಿಡಲಾಗಿದೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Latest Videos
Follow Us:
Download App:
  • android
  • ios