ಅಮೇರಿಕಾಕ್ಕೆ ಹೋಗಿ ಪತ್ನಿ, ಮಗುವನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಶರಣಾದ ದಾವಣಗೆರೆ ಕುಟುಂಬಸ್ಥರ ಮೃತದೇಹಗಳು ಕೊನೆಗೂ ಕನ್ನಡ ನಾಡಿಗೆ ಬರಲಿಲ್ಲ. 

ದಾವಣಗೆರೆ (ಆ.23): ಅಮೇರಿಕಾದ ಬಾಲ್ಟಿಮೋರ್‌ನಲ್ಲಿ ಇಂಜಿನಿಯರಿಂಗ್‌ ಕೆಲಸ ಮಾಡುತ್ತಾ ನೆಲೆಸಿದ್ದ ದಾವಣಗೆರೆ ಮೂಲದ ಕನ್ನಡಿಗರ ಕುಟುಂಬದಲ್ಲಿ ತಂದೆಯೇ ತನ್ನ ಹೆಂಡತಿ, ಮಗುವನ್ನು ಶೂಟ್‌ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದನು. ಇನ್ನು ಕೊನೆಗೆ ಮೃತದೇಹವನ್ನಾದರೂ ಕನ್ನಡ ನಾಡಿಗೆ ಕಳಿಸಿಕೊಡಿ ಎಂದು ಅಮೇರಿಕಾಗೆ ಎಷ್ಟೇ ಮನವಿ ಮಾಡಿದರೂ, ಇದಕ್ಕೊಪ್ಪದ ಹಿನ್ನೆಲೆಯಲ್ಲಿ ತಂದೆ, ತಾಯಿಯನ್ನು ಬಿಟ್ಟು, ಅಮೇರಿಕಾದಲ್ಲಿರುವ ಸಂಬಂಧಿಕರೇ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಾರೆ.

ದಾವಣಗೆರೆ ಮೂಲದ ಇಂಜಿನಿಯರ್ ಕುಟುಂಬವೊಂದು ಅಮೇರಿಕಾಗೆ ಹೋಗಿ 9 ವರ್ಷಗಳ ಕಾಲ ವಾಸವಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಕುಟುಂಬದಲ್ಲಿ ತಂದೆ, ತಾಯಿ ಹಾಗೂ ಮಗು ಸಾವನ್ನಪ್ಪಿದ್ದರು. ಸಾವಿನ ಬಗ್ಗೆ ಪೊಲೀಸರು ಪರಿಶೀಲನೆ ಮಾಡಿದಾಗ ಮೂವರ ತಲೆಯಲ್ಲಿಯೂ ಬಂದೂಕಿನ ಬುಲೆಟ್‌ಗಳು ಪತ್ತೆಯಾಗಿದ್ದವು. ಜೊತೆಗೆ, ಮನೆಯಲ್ಲಿ ಡೆತ್‌ನೋಟ್‌ ಬರೆದಿಟ್ಟು, ಕುಟುಂಬದ ಯಜಮಾನ (ಯೋಗೇಶ್‌ ಹೊನ್ನಾಳ್‌) ತನ್ನ ಪತ್ನಿ ಹಾಗೂ ಮಗನನ್ನು ಬಂದೂಕಿನಿಂದ ಶೂಟ್‌ ಮಾಡಿ ಕೊಲೆಗೈದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಮೇರಿಕಾದ ಪೊಲೀಸರು ಮಾಹಿತಿ ನೀಡಿದ್ದರು. ಇನ್ನು ಮರಣೋತ್ತರ ಪರೀಕ್ಷೆ ಹಾಗೂ ಇತರೆ ಪೊಲೀಸ್‌ ತನಿಖೆ ಪೂರ್ಣಗೊಳಿಸಿ ಮೃದೇಹಗಳನ್ನು ಕರ್ನಾಟಕಕ್ಕೆ ಕಳುಹಿಸಿ ಕೊಡಲಾಗುತ್ತದೆ ಎಂದು ಕುಟುಂಬ ಸದಸ್ಯರು ನಂಬಿಕೊಂಡಿದ್ದರು.

ಅಮೇರಿಕಾದಲ್ಲಿ ದಾವಣಗೆರೆ ಕುಟುಂಬದ ಸಾವಿಗೆ ಸಿಕ್ತು ಟ್ವಿಸ್ಟ್‌: ಮೂವರ ತಲೆ ಸೀಳಿದ ಬಂದೂಕಿನ ಬುಲೆಟ್‌

12 ದಿನವಾದರೂ ಮೃತದೇಹ ನೋಡಲು ಬಿಡದ ಪೊಲೀಸರು: ಇನ್ನು ಆ.15ರಂದು ಯೋಗೇಶ್ ಹೊನ್ನಾಳ(37), ಪ್ರತಿಭಾ ಹೊನ್ನಾಳ್(35), ಯಶ್ ಹೊನ್ನಾಳ್(6) ಮೃತಪಟ್ಟಿದ್ದರು. ಮೃತಪಟ್ಟ ಪಾರ್ಥಿವ ಶರೀರಗಳನ್ನು ಭಾರತಕ್ಕೆ ತರಲು ಕುಟುಂಬಸ್ಥರಿಂದ ಶತಪ್ರಯತ್ನ ಮಾಡುತ್ತಿದ್ದರು. ಈ ಬಗ್ಗೆ ದಾವಣಗೆರೆ ಜಿಲ್ಲಾಡಳಿತವು ಅಮೇರಿಕಾವನ್ನು ಕೂಡ ಸಂಪರ್ಕ ಮಾಡಿತ್ತು. ಜೊತೆಗೆ, ಮೃತ ಮಹಿಳೆ ಸಂಬಂಧಿಕರಾದ ಶ್ರೀನಿವಾಸ್ ಎನ್ನುವವರು ಅಮೇರಿಕಾದಲ್ಲಿದ್ದು, ಅವರೇ ದಾವಣಗೆರೆ ಮೃತದೇಹ ತರುವುದಾಗಿ ಭರವಸೆ ನೀಡಿದ್ದರು. ಆದರೆ, 12 ದಿನಗಳಾದರೂ ಇನ್ನೂ ಪೊಲೀಸರು ಮೃತದೇಹ ಕೊಡಲು ನಿರಾಕರಣೆ ಮಾಡಿದ್ದರಿಂದ, ಅಮೇರಿಕಾದಲ್ಲಿಯೇ ಅಂತ್ಯಕ್ರಿಯೆ ನಡೆಸುವಂತೆ ಮೃತರ ಪೋಷಕರು ತಿಳಿಸಿದ್ದಾರೆ. ಇದರಿಂದಾಗಿ ಕೊನೆಯ ಬಾರಿಗೆ ಸತ್ತವರ ಮುಖವನ್ನೂ ನೋಡಲಾಗದೇ ದಾವಣಗೆರೆಯಲ್ಲಿರುವ ತಂದೆ-ತಾಯಿ ದುಃಖಿತರಾಗಿದ್ದಾರೆ.

ಅಮೇರಿಕಾದಲ್ಲಿ ಕನ್ನಡದ ಕುಟುಂಬ ದಾರುಣ ಸಾವು: ಗಂಡ, ಹೆಂಡ್ತಿ ಮಗು ಮೃತ

ಮೃತದೇಹಗಳು ಕರ್ನಾಟಕ್ಕೆ ಕೊಂಡೊಯ್ಯುವ ಸ್ಥಿತಿಯಲ್ಲಿಲ್ಲ: ಇನ್ನು ಮೃತ ಯೋಗೇಶ್‌ ಹೊನ್ನಾಳ್‌ ಅವರ ತಾಯಿ ಶೋಭ, ಸಹೋದರ ಪುನೀತ್, ಸಂಬಂಧಿ ಸೋಮಶೇಖರ್ ಹಾಗೂ ಆತನ ಪತ್ನಿ ಪ್ರತಿಭಾ ಹೊನ್ನಾಳ್‌ ಪಾಲಕರು ಅಮೇರಿಕಾದಲ್ಲಿಯೇ ಅಂತ್ಯಕ್ರಿಯೆ ಮಾಡುವುದಕ್ಕೆ ಒಪ್ಪಿಕೊಂಡದ್ದಾರೆ. ಇನ್ನು ಅಮೇರಿಕಾದಲ್ಲಿರುವ ಮೃತಳ ಸಂಬಂಧಿಕರಾದ ಶ್ರೀನಿವಾಸ್‌ ಅವರ ನೇತೃತ್ವದಲ್ಲಿ ಕೆಲವು ಭಾರತೀಯ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲು ತಯಾರಿ ಮಾಡುತ್ತಿದ್ದಾರೆ. ಇನ್ನು ಯೋಗೇಶ್‌ ಸೇರಿ ಆತನ ಕುಟುಂಬದ ಯಾವುದೇ ಮೃತ ದೇಹಗಳನ್ನು 12 ದಿನಗಳಾದರೂ ಶವ ನೋಡುವುದಕ್ಕೂ ಅಲ್ಲಿನ ಪೊಲೀಸರು ಬಿಡುತ್ತಿಲ್ಲ. ಆದ್ದರಿಂದ ಶವಗಳು ಭಾರತಕ್ಕೆ ಕೊಂಡೊಯ್ಯಲಾಗದ ಸ್ಥಿತಿಯನ್ನು ತಲುಪಿವೆಯಂತೆ. ಹೀಗಾಗಿ, ಅಮೇರಿಕಾದ ವೈದ್ಯರ ಸಲಹೆ ಮೇರೆಗೆ ಬಾಲ್ಟಿಮೋರ್‌ನಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.