ಆರೋಪಿ ಶಾರೀಕ್‌ ಮೈಸೂರಿಗೆ ಆಗಮಿಸುವುದಕ್ಕೂ ಮುನ್ನ ಕೇರಳದ ಕೊಚ್ಚಿ ಬಳಿಯ ಅಲುವಾದಲ್ಲಿ ನೆಲೆಸಿದ್ದ. ಅಲ್ಲಿಂದಲೇ ದಕ್ಷಿಣ ಭಾರತದ ವಿವಿಧ ಕಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಲಾಗಿತ್ತು ಎಂದು ಹೇಳಲಾಗಿದೆ. 

ಮಂಗಳೂರು(ಡಿ.02): ಕುಕ್ಕರ್‌ ಬಾಂಬ್‌ ಸ್ಫೋಟದ ಶಂಕಿತ ಉಗ್ರ ಮೊಹಮ್ಮದ್‌ ಶಾರೀಕ್‌ಗೆ ಕೇರಳ ಲಿಂಕ್‌ ಇರುವ ಕುರಿತು ಎನ್‌ಐಎ ತಂಡ ಹಾಗೂ ಮಂಗಳೂರು ಪೊಲೀಸರು ತನಿಖೆಯನ್ನು ಕೇರಳಕ್ಕೆ ವಿಸ್ತರಿಸಿದ್ದಾರೆ. ಎನ್‌ಐಎ ಕೊಚ್ಚಿನ್‌ ಹಾಗೂ ತಮಿಳುನಾಡು ಘಟಕದ ಅಧಿಕಾರಿಗಳು ಮಂಗಳೂರು ಬಾಂಬ್‌ ಸ್ಫೋಟದ ಬಗ್ಗೆ ಕೇರಳದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಆರೋಪಿ ಶಾರೀಕ್‌ ಮೈಸೂರಿಗೆ ಆಗಮಿಸುವುದಕ್ಕೂ ಮುನ್ನ ಕೇರಳದ ಕೊಚ್ಚಿ ಬಳಿಯ ಅಲುವಾದಲ್ಲಿ ನೆಲೆಸಿದ್ದ. ಅಲ್ಲಿಂದಲೇ ದಕ್ಷಿಣ ಭಾರತದ ವಿವಿಧ ಕಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಲಾಗಿತ್ತು ಎಂದು ಹೇಳಲಾಗಿದೆ. ಇದಕ್ಕೆ ಪೂರಕವಾಗಿ ಅಕ್ಟೋಬರ್‌ನಲ್ಲಿ ಕೊಯಂಬತ್ತೂರಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವಿಗೀಡಾದ ಉಗ್ರ ಮುಬಿನ್‌ ಕೂಡ ಕೇರಳದ ಕೊಚ್ಚಿಯ ಅಲುವಾಕ್ಕೆ ಆಗಮಿಸಿದ್ದ. ಆತನ ಜತೆ ಈತನಿಗೆ ಸಂಪರ್ಕ ಇತ್ತೇ ಎನ್ನುವುದು ಶಾರೀಕ್‌ ತನಿಖೆಯಿಂದ ಗೊತ್ತಾಗಬೇಕಾಗಿದೆ. ಕೊಯಮತ್ತೂರು, ಮಂಗಳೂರು, ಹುಬ್ಬಳ್ಳಿ ಹೀಗೆ 2ನೇ ಹಂತದ ನಗರಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಯೋಜನೆ ರೂಪಿಸಲಾಗಿತ್ತು. ಶಾರೀಕ್‌ನ ಈ ಯೋಜನೆಗೆ ಕೇರಳದಲ್ಲಿ ಎಲ್ಲ ರೀತಿಯ ಬೆಂಬಲ ಸಿಕ್ಕಿತ್ತು. ಅಲ್ಲಿನ ಪ್ರಬಲ ಜಾಲವೊಂದು ಆತನಿಗೆ ಬೆಂಬಲ ನೀಡಿತ್ತು ಎನ್ನುವ ಮಾಹಿತಿಯನ್ನು ತನಿಖಾ ತಂಡ ಕಲೆ ಹಾಕಿದೆ.

ಕುಕ್ಕರ್‌ ಬಾಂಬ್‌ ಸ್ಫೋಟ: ಶಂಕಿತ ಉಗ್ರ ಶಾರೀಕ್‌ಗೆ ಬರುತ್ತಿದ್ದ ಹಣದ ಮೂಲದ ಬಗ್ಗೆ ತನಿಖೆ

ಡ್ರಗ್ಸ್‌, ಸ್ಮಗ್ಲಿಂಗ್‌ ಜಾಲದ ಬೆಂಬಲ?:

ಕೇರಳದಲ್ಲಿ ಡ್ರಗ್ಸ್‌ ಮತ್ತು ಗೋಲ್ಡ್‌ ಸ್ಮಗ್ಲಿಂಗ್‌ ಜಾಲ ಪ್ರಬಲವಾಗಿದ್ದು, ಹೆಚ್ಚಿನವರು ಒಂದೇ ಸಮುದಾಯದ ಮಂದಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಥ ಸಮಾಜವಿರೋಧಿ ಕೃತ್ಯಗಳಿಂದ ಬರುವ ಹಣದ ಒಂದಂಶವನ್ನು ವಿಧ್ವಂಸಕ ಕೃತ್ಯಗಳಿಗೆ ಬಳಕೆ ಮಾಡಲಾಗುತ್ತಿದೆ ಎನ್ನುವ ಆತಂಕಕಾರಿ ವಿಚಾರ ತನಿಖಾ ತಂಡಕ್ಕೆ ಲಭಿಸಿದೆ ಎಂದು ಹೇಳಲಾಗಿದೆ. ಕರ್ನಾಟಕದ ಗಡಿಭಾಗ ಕಾಸರಗೋಡು ಹಾಗೂ ಕಣ್ಣೂರಿನಲ್ಲಿ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಶಾರೀಕ್‌ ಸ್ವತಃ ಡ್ರಗ್ಸ್‌ ರಾಕೆಟ್‌ನಲ್ಲಿ ತೊಡಗಿಸಿಕೊಂಡಿದ್ದ ಎನ್ನುವ ಮಾಹಿತಿ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಕೇರಳದಲ್ಲೂ ಹಲವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Mangaluru Bomb Blast: ಶಾರೀಕ್‌ಗಿತ್ತು ಶರಿಯಾ ಕಾನೂನು ಜಾರಿ ಇಚ್ಛೆ!

ಕುಕ್ಕರ್‌ ಬಾಂಬ್‌ ಸ್ಫೋಟ ತನಿಖೆ ಎನ್‌ಐಎ ಸುಪರ್ದಿಗೆ

ಮಂಗಳೂರು ಬಾಂಬ್‌ ಸ್ಫೋಟ ಪ್ರಕರಣದ ತನಿಖೆಯನ್ನು ಎನ್‌ಐಎ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಈಗಾಗಲೇ ಮಂಗಳೂರಿಗೆ ಆಗಮಿಸಿರುವ ಎನ್‌ಐಎ ಅಧಿಕಾರಿಗಳ ತಂಡ ಗುರುವಾರ ಅಧಿಕೃತವಾಗಿ ತನಿಖೆ ಕೈಗೆತ್ತಿಕೊಂಡಿದೆ. ಬಾಂಬ್‌ ಸ್ಫೋಟದಿಂದ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕಿತ ಉಗ್ರ ಮೊಹಮ್ಮದ್‌ ಶಾರೀಕ್‌ ಚೇತರಿಸಿಕೊಳ್ಳುತ್ತಿದ್ದು, ಮಂಗಳೂರು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಇದೀಗ ಎನ್‌ಐಎ ತಂಡ ವಿಚಾರಣೆ ಮುಂದುವರಿಸಲಿದೆ. ಈವರೆಗಿನ ವಿಚಾರಣೆ ವರದಿಯನ್ನು ಪೊಲೀಸರು ಎನ್‌ಐಎಗೆ ಹಸ್ತಾಂತರಿಸಲಿದ್ದಾರೆ.

ನ.19ರಂದು ಅಟೋರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿ ಶಂಕಿತ ಉಗ್ರ ಶಾರೀಕ್‌ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಶಾರೀಕ್‌ ಗುಣಮುಖನಾದ ಬಳಿಕ ಆತನ ಪೂರ್ತಿ ವಿಚಾರಣೆಗೆ ಎನ್‌ಐಎ ತಂಡ ಬೆಂಗಳೂರಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ. ಗುರುವಾರದಿಂದಲೇ ಎನ್‌ಐಎ ತನಿಖೆ ಆರಂಭಿಸಲಿದ್ದು, ಪೊಲೀಸರು ನಡೆಸಿದ ತನಿಖೆ ವಿವರವನ್ನು ಎನ್‌ಐಎಗೆ ಹಸ್ತಾಂತರಿಸಲಾಗುತ್ತದೆ.