ಐಸಿಸ್‌ ಜತೆ ಸೇರಿಕೊಂಡು ಭಾರತದಲ್ಲಿ ಶರಿಯಾ ಕಾನೂನು ಜಾರಿಗೆ ತರಬೇಕು ಎಂಬ ಮನಸ್ಥಿತಿಯನ್ನು ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಆರೋಪಿ, ಶಂಕಿತ ಉಗ್ರ ಮೊಹಮ್ಮದ್‌ ಶಾರೀಕ್‌ ಹೊಂದಿದ್ದ.ಸಂಗತಿ ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮಂಗಳೂರು (ನ.28) : ಐಸಿಸ್‌ ಜತೆ ಸೇರಿಕೊಂಡು ಭಾರತದಲ್ಲಿ ಶರಿಯಾ ಕಾನೂನು ಜಾರಿಗೆ ತರಬೇಕು ಎಂಬ ಮನಸ್ಥಿತಿಯನ್ನು ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಆರೋಪಿ, ಶಂಕಿತ ಉಗ್ರ ಮೊಹಮ್ಮದ್‌ ಶಾರೀಕ್‌ ಹೊಂದಿದ್ದ. ಮತಾಂಧತೆಯನ್ನು ಮೈಗೂಡಿಸಿಕೊಂಡಿದ್ದ ಶಾರೀಕ್‌, ಶಿವಮೊಗ್ಗದಲ್ಲಿ ತನ್ನ ಮನೆ ಮಂದಿಗೂ ಮನರಂಜನೆಯನ್ನೇ ನಿಷೇಧಿಸಿದ್ದ, ಶರಿಯಾ ಕಾನೂನು ಪಾಲಿಸುವಂತೆ ತಾಕೀತು ಮಾಡುತ್ತಿದ್ದ ಎಂಬ ಸಂಗತಿ ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸದ್ಯ ಪೊಲೀಸ್‌ ವಶದಲ್ಲಿರುವ ಶಂಕಿತ ಉಗ್ರ ಶಾರೀಕ್‌ ಮೊಬೈಲ್‌ ಹಾಗೂ ಪೆನ್‌ಡ್ರೈವ್‌ ಪರಿಶೀಲನೆ ವೇಳೆ ಇಂಥ ಒಂದೊಂದೇ ಆಘಾತಕಾರಿ ಸಂಗತಿಗಳು ಬಯಲಿಗೆ ಬರುತ್ತಿವೆ. ಆತನ ಮೊಬೈಲ್‌ನಲ್ಲಿ ಸಾವಿರಕ್ಕೂ ಅಧಿಕ ಜಿಹಾದ್‌ ವಿಡಿಯೋ ಪತ್ತೆಯಾಗಿದ್ದು, ಜಿಹಾದಿ ಸಾಹಿತ್ಯಗಳನ್ನೂ ಪತ್ತೆ ಮಾಡಲಾಗಿದೆ. ಇವುಗಳೆಲ್ಲದರ ಕುರಿತು ಕೂಲಂಕಷ ತನಿಖೆ ಮುಂದುವರಿದಿದೆ. ಭಾರತದಲ್ಲಿ ಮುಸ್ಲಿಮರು ನೆಮ್ಮದಿಯಿಂದ ಇರಬೇಕಾದರೆ ಶರಿಯಾ ಕಾನೂನು ಜಾರಿಯಾಗಬೇಕಾದ ಅಗತ್ಯವಿದೆ. ಇದಕ್ಕಾಗಿ ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರ ಮಾಡುವ ಕನಸನ್ನು ಶಾರೀಕ್‌ ಹೊಂದಿದ್ದ ಎನ್ನುತ್ತವೆ ಮೂಲ.

Mangaluru Auto Blast: ಗೃಹ ಸಚಿವ ಹಾಗೂ ಡಿಜಿಪಿಯ ಫೇಕ್ ಆಧಾರ್-ಐಡಿ ಕಾರ್ಡ್ ಮಾಡಿದ ಶಾರೀಕ್

ಮನೆ ಮಂದಿಗೆ ಟಿವಿಯಲ್ಲಿ ಚಲನಚಿತ್ರ ನೋಡುವುದು ಹಾಗೂ ಚಿತ್ರಗೀತೆ, ಸಂಗೀತ ಕೇಳಲು ಶಾರೀಕ್‌ ಆಸ್ಪದ ನೀಡುತ್ತಿರಲಿಲ್ಲ. ತನ್ನ ಸಹೋದರಿ ಸೇರಿ ಇತರರಿಗೆ ಕೇವಲ ದೇವರ ಸ್ಮರಣೆ ಮಾಡುವಂತೆ ಶಾರೀಕ್‌ ತಾಕೀತು ಮಾಡಿದ್ದ. ಶಾರೀಕ್‌ ಮೊಬೈಲ್‌ನಲ್ಲಿ 55 ಜಿಬಿಗೂ ಹೆಚ್ಚು ವಿಡಿಯೋ ಮತ್ತು ಫೋಟೋಗಳು ಪತ್ತೆಯಾಗಿವೆ. ಸಾವಿರಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಕಂಡುಬಂದಿದ್ದು, ಫೋರ್ನ್‌ ವಿಡಿಯೋಗಳನ್ನು ಸಂಗ್ರಹಿಸಿಟ್ಟಿದ್ದ ಎಂದು ತಿಳಿಯಲಾಗಿದೆ.

ಚಾರ್ಮಾಡಿಯಲ್ಲಿ ಟ್ರಯಲ್‌ ಬ್ಲಾಸ್ಟ್‌ ಆಗಿಲ್ಲ

ಬೆಳ್ತಂಗಡಿಯ ಬೆಂದ್ರಾಳ ಅರಣ್ಯ ಪ್ರದೇಶದಲ್ಲಿ ಏಳೆಂಟು ದಿನಗಳ ಹಿಂದೆ ಭಾರೀ ಪ್ರಮಾಣದ ಸದ್ದು ಕೇಳಿಬಂದಿದ್ದು, ಕುಕ್ಕರ್‌ ಬಾಂಬ್‌ ಸ್ಫೋಟದ ಬಳಿಕ ಶಾರೀಕ್‌ ಮತ್ತವರ ತಂಡವರೇ ಈ ರೀತಿ ನಿರ್ಜನ ಪ್ರದೇಶದಲ್ಲಿ ಟ್ರಯಲ್‌ ಬ್ಲಾಸ್ಟ್‌ ಮಾಡಿರಬಹುದು ಎಂಬ ಅನುಮಾನ ಮೂಡಿತ್ತು. ಆದರೆ, ದ.ಕ. ಎಸ್ಪಿ ಹೃಷಿಕೇಶ್‌ ಸೋನೆವಾಣೆ ಅವರು ಇದನ್ನು ತಳ್ಳಿಹಾಕಿದ್ದಾರೆ.

ಉಗ್ರನಿಗೆ ಪ್ರೇಮದ ನಂಟು: ಶಾರೀಕ್‌ಗೆ ಬೆಂಗಳೂರಿನಲ್ಲಿ ಗರ್ಲ್‌ ಫ್ರೆಂಡ್‌

ದ.ಕ.ಜಿಲ್ಲೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್‌ ಸುತ್ತಮುತ್ತ ಶಂಕಿತ ಉಗ್ರ ಶಾರೀಕ್‌ ಟ್ರಯಲ್‌ ಬ್ಲಾಸ್ಟ್‌ ನಡೆಸಿದ್ದಾನೆನ್ನುವ ಸುದ್ದಿಗಳಲ್ಲಿ ಯಾವುದೇ ಹುರುಳಿಲ್ಲ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದು, ಸುತ್ತಮುತ್ತ ನಡೆದಿರುವ ಬ್ಲಾಸ್ಟ್‌ ಸದ್ದು ಕಾಡುಪ್ರಾಣಿಗಳನ್ನು ಓಡಿಸಲು ಸಿಡಿಸಿದ ಪಟಾಕಿಗಳದ್ದು ಎಂದು ಸುದ್ದಿಗಾರರಿಗೆ ಭಾನುವಾರ ಸ್ಪಷ್ಟಪಡಿಸಿದ್ದಾರೆ. ಜತೆಗೆ, ಕಕ್ಕಿಂಜೆ ಭಾಗದಲ್ಲಿ ಯಾವುದೇ ಸ್ಯಾಟಲೈಟ್‌ ಫೋನ್‌ ಕರೆಗಳು ಪತ್ತೆಯಾಗಿಲ್ಲ ಎಂದೂ ಸ್ಪಷ್ಟನೆ ನೀಡಿದ್ದಾರೆ.