ಸಾಗ್ಯ ಗ್ರಾಮದಲ್ಲಿ ವೃದ್ಧೆಯೊಬ್ಬರಿಗೆ ಚಾಕು ತೋರಿಸಿ ಕಿವಿ ಓಲೆ ಕಿತ್ತು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಸಾಗ್ಯ ಮತ್ತು ಅಂಕನಹಳ್ಳಿ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು, ಕದ್ದ ಓಲೆಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ವಶಕ್ಕೆ.
ಹಲಗೂರು (ಜೂ.18): ಚಾಕು ತೋರಿಸಿ ವೃದ್ಧೆಯನ್ನ ಬೆದರಿಸಿ ಕಿವಿ ಓಲೆ ಕಿತ್ತು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಹಿಡಿದು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿರುವ ಘಟನೆ ಸಾಗ್ಯ- ಅಂಕನಹಳ್ಳಿ ಗ್ರಾಮಗಳ ಬಳಿ ನಡೆದಿದೆ.
ಸಮೀಪದ ಸಾಗ್ಯ ಗ್ರಾಮದ ಕೃಷ್ಣಪ್ಪರ ಪತ್ನಿ ಶಾಂತಮ್ಮರನ್ನು ಇಬ್ಬರು ಕಳ್ಳರು ಚಾಕು ತೋರಿಸಿ ಹೆದರಿಸಿ ಅವರ ಎರಡು ಕಿವಿಗಳಲ್ಲಿದ್ದ ಮೂರು ಗ್ರಾಂ ಚಿನ್ನದ ಓಲೆಗಳನ್ನು ಕಿತ್ತು ಪರಾರಿಯಾಗುತ್ತಿದ್ದ ಮಂಡ್ಯ ತಾಲೂಕು ಕೆರಗೋಡು ಸಮೀಪದ ಶಿವಾರ ಗ್ರಾಮದ ಹೊಂಬಾಳಯ್ಯ ಮತ್ತು ಅಪ್ರಾಪ್ತ ಬಾಲಕ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಶಾಂತಮ್ಮ ಎಂದಿನಂತೆ ಸಾಗ್ಯ ಗ್ರಾಮದ ಕೆಂಪೇಗೌಡರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿ ನಂತರ ತಿಂಡಿ ತಿನ್ನುತ್ತಿದ್ದ ವೇಳೆ ಅಲ್ಲಿಗೆ ಬಂದ ಕಳ್ಳರು ಶಾಂತಮ್ಮನಿಗೆ ಚಾಕು ತೋರಿಸಿ ಬೆದರಿಸಿ ಅವರ ಎರಡು ಕಿವಿಗಳಲ್ಲಿದ್ದ ಓಲೆಗಳನ್ನು ಕಿತ್ತುಕೊಂಡಿದ್ದಾರೆ.
ನಂತರ ಕಳ್ಳರು ಪರಾರಿಯಾಗುತ್ತಿದ್ದಾಗ ಶಾಂತಮ್ಮ ಕೂಗಿಕೊಂಡಿದ್ದಾರೆ. ಅಕ್ಕಪಕ್ಕದ ಜಮೀನಿನವರು ವೃದ್ಧೆ ಶಬ್ಧ ಕೇಳಿ ತಕ್ಷಣ ಅಂಕನಹಳ್ಳಿ ಗ್ರಾಮಸ್ಥರಿಗೆ ದೂರವಾಣಿ ಮುಖಾಂತರ ವಿಷಯ ತಿಳಿಸಿದ್ದಾರೆ. ನಂತರ ಅಂಕನಹಳ್ಳಿ ಮತ್ತು ಸಾಗ್ಯ ಗ್ರಾಮಸ್ಥರು ಸೇರಿ ಕಳ್ಳರನ್ನು ಹಿಡಿದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ಆರೋಪಿಗಳನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ಓಲೆಗಳು, ಕಳ್ಳರ ಬಳಿ ಇದ್ದ ಚಾಕು, ಸ್ಕೂಟರ್‌ಗಳನ್ನು ವಶಪಡಿಸಿಕೊಂಡು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್‌ಪಿ ಯಶ್ವಂತ್, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಭೇಟಿ ನೀಡಿ ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ. ಓಲೆ ಕಿತ್ತುಕೊಂಡಾಗ ಕಿವಿಯಿಂದ ರಕ್ತ ಬರುತ್ತಿದ್ದ ಶಾಂತಮ್ಮನನ್ನು ತಕ್ಷಣ ಮಳವಳ್ಳಿ ಆಸ್ಪತ್ರೆಗೆ ಕಳಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.


