ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದಡಗ ಗ್ರಾಮದಲ್ಲಿ ರೈತರೊಬ್ಬರಿಗೆ ಜಮೀನು ಉಳುಮೆ ಮಾಡುವಾಗ 15-16ನೇ ಶತಮಾನಕ್ಕೆ ಸೇರಿದ ಕನ್ನಡ ಶಾಸನವೊಂದು ದೊರೆತಿದೆ. ಸಂಶೋಧಕ ಮಹಮ್ಮದ್ ಕಲೀಂಉಲ್ಲ ಅವರು ಇದನ್ನು ಗುರುತಿಸಿದ್ದು, ಗೋಪಾಲದೇವ ಎಂಬ ವ್ಯಕ್ತಿಯು ಬಸವ ಭಕ್ತರಿಗೆ ಭೂಮಿಯನ್ನು ದಾನವಾಗಿ ನೀಡಿದ ವಿಷಯವನ್ನು ಈ ಶಾಸನವು ಒಳಗೊಂಡಿದೆ.
ಮಂಡ್ಯ: ನಾಗಮಂಗಲ ತಾಲೂಕಿನ ದಡಗ ಗ್ರಾಮದ ಶ್ರೀವೀರಭದ್ರೇಶ್ವರ ಹಾಗೂ ಕೊಲ್ಲಾಪುರದಮ್ಮ ದೇವಾಲಯದ ಬಳಿ 15- 16ನೇ ಶತಮಾನದ ಕನ್ನಡ ಶಾಸನವನ್ನು ಸಾಹಿತಿ ಹಾಗೂ ಸಂಶೋಧಕ ಮಹಮ್ಮದ್ ಕಲೀಂಉಲ್ಲ ಅವರು ಪತ್ತೆ ಹಚ್ಚಿದ್ದಾರೆ. ಗ್ರಾಮದ ರೈತ ಶಂಕರಪ್ಪ ಅವರು ತಮ್ಮ ಜಮೀನು ಉಳುಮೆ ಮಾಡುತ್ತಿದ್ದ ವೇಳೆ ನೇಗಿಲಿಗೆ ಸಿಕ್ಕ ಸೂರ್ಯ, ಚಂದ್ರ, ಶಿವಲಿಂಗ ಹಾಗೂ ನಂದಿಯ ಕೆತ್ತನೆಗಳಿಂದ ಕೂಡಿದ ಕಲ್ಲನ್ನು ತಂದು ಗ್ರಾಮದ ದೇವಾಲಯದ ನಂದಿ ಕಂಬದ ಪಕ್ಕದಲ್ಲಿ ಇರಿಸಿದ್ದರು.
ಕನ್ನಡ ಶಾಸನವೆಂದು ಖಚಿತ
ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ಕೊಟ್ಟ ಸಾಹಿತಿ ಹಾಗೂ ಸಂಶೋಧಕ ಮಹಮ್ಮದ್ ಕಲೀಂ ಉಲ್ಲ ಅವರು 23 ಸಾಲಿನ ಈ ಕಲ್ಲಿನ ಮೇಲ್ಭಾಗದಲ್ಲಿ ಸೂರ್ಯ, ಚಂದ್ರ, ಶಿವಲಿಂಗ ಹಾಗೂ ನಂದಿಯ ಕೆತ್ತನೆಗಳಿರುವುದನ್ನು ಕಂಡು 15, 16ನೇ ಶತಮಾನದ ಕನ್ನಡ ಶಾಸನವೆಂದು ಖಚಿತಪಡಿಸಿ ಆ ಶಾಸನದ ಸಾರಾಂಶ ಗ್ರಹಿಸಿ, ಹೆಚ್ಚಿನ ಓದಿಗಾಗಿ ವಿದ್ವಾಂಸರಾದ ಎಂ.ಎನ್. ಪ್ರಭಾಕರ್ ಮತ್ತು ಡಾ. ನಾಗರಾಜರಾವ್ ಅವರನ್ನು ಸಂಪರ್ಕಿಸಿದರು.
ದಾನ ನೀಡಿದ ಭೂಮಿ ಬಗ್ಗೆ ಉಲ್ಲೇಖ
ಶಾಸನವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಇದು ಭೂದಾನದ ಶಾಸನವೆಂದು ಅಭಿಪ್ರಾಯಪಟ್ಟಿದ್ದಾರೆ. ವಿರೋಧಿ ಸಂವಂತ್ಸರದ ಜೇಷ್ಠ ಶು.1 ಸೋಮವಾರದ ಈ ಶಾಸನದಲ್ಲಿ ಗೋಪಾಲದೇವ ಎಂಬ ವ್ಯಕ್ತಿ ತನ್ನ ಪ್ರೀತಿಯ ಪಾಲಕರಾದ ಬಸವ ಭಕ್ತರಿಗೆ ಸೋಮಗಹಳ್ಳಿಯ ಕೆರೆಯ ಸುತ್ತಮುತ್ತಲ ಪ್ರದೇಶದ ಉತ್ತರ ದಿಕ್ಕಿನ ಮೂಲೆಯಲ್ಲಿರುವ ಜಮೀನನ್ನು ಧಾರೆಯರೆದು ದಾನ ನೀಡಿದ ವಿಷಯವಿದೆ.
ಅಂತೆಯೇ ಈ ಭೂಮಿಯನ್ನು ಬಸವ ಭಕ್ತರ ಮಕ್ಕಳು ಮತ್ತು ವಂಶಸ್ಥರು ಅನುಭವಿಸಬೇಕು ಎಂದು ಹೇಳಲಾಗಿದೆ. ದಾನ ನೀಡಿದ ಭೂಮಿಯ ಗಡಿಗಳನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. 13 ಮಂದಿ ಭಕ್ತರ ಹೆಸರುಗಳನ್ನೂ ಸಹ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಮತ್ತು ಈ ಸಂದರ್ಭದ ಸಾಕ್ಷಿಗಳ ಹೆಸರನ್ನೂ ಸಹ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಶಾಸನದ ಶೋಧನೆಯಲ್ಲಿ ಗ್ರಾಮದ ರೈತ ಶಂಕರಪ್ಪ, ಡಿ.ಎ.ಮದನ್‌ಕುಮಾರ್, ಗೋಪಾಲಪ್ಪ ಸೇರಿ ಹಲವರು ಸಹಕರಿಸಿದ್ದಾರೆ.


