ಆ್ಯಪ್‌ನಲ್ಲಿ ಬುಕ್ ಮಾಡಿದ ಆಟೋ ಅಥವಾ ಕ್ಯಾಬ್‌ನ ನೋಂದಣಿ ಸಂಖ್ಯೆಗೂ, ನಿಮ್ಮನ್ನು ಕರೆದೊಯ್ಯಲು ಬರುವ ವಾಹನದ ಸಂಖ್ಯೆಗೂ ವ್ಯತ್ಯಾಸವಿದ್ದರೆ ಅಂತಹ ವಾಹನವನ್ನು ಹತ್ತಲೇಬಾರದು. ಇಂತಹ ಸಂದರ್ಭದಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ, ಆ್ಯಪ್ ಕಂಪನಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತವೆ ಮತ್ತು ನಿಮ್ಮ ಸುರಕ್ಷತೆಗೆ ನೀವೇ ಜವಾಬ್ದಾರರಾಗುತ್ತೀರಿ ಎಂದು ಬೆಂಗಳೂರು ಪೊಲೀಸರು ಎಚ್ಚರಿಸಿದ್ದಾರೆ.
ಇದೀಗ ಮನೆಯಿಂದಲೇ ಕುಳಿತು ಆಟೋ, ಕ್ಯಾಬ್, ಕ್ಯಾಬ್ ಬುಕ್ ಮಾಡುವ ಪರಿಪಾಠ ಹೆಚ್ಚಾಗಿದೆ. ಎಲ್ಲೆಲ್ಲೋ ಇವುಗಳನ್ನು ಹುಡುಕಿ ಹೋಗುವ ಬದಲು, ಆಟೋ, ಕ್ಯಾಬ್ ಡ್ರೈವರ್‌ಗಳು ಕೇಳುವ ಡಬಲ್ ಚಾರ್ಜ್‌ಗಳಿಂದ ಬೇಸತ್ತು ಆಟೋ, ಕ್ಯಾಬ್ ಬುಕ್ ಮಾಡುವವರ ಸಂಖ್ಯೆ ವಿಪರೀತ ಹೆಚ್ಚುತ್ತಿದೆ. ಹೀಗೆ ಆಟೋ, ಕ್ಯಾಬ್ ಬುಕ್ ಮಾಡಿದವರ ಪೈಕಿ ನೀವೂ ಒಬ್ಬರಾಗಿದ್ದರೆ, ನಿಮಗಿದು ಸಾಕಷ್ಟು ಬಾರಿ ಗಮನಕ್ಕೆ ಬಂದಿರಬಹುದು, ನೀವು ಬುಕ್ ಮಾಡಿದಾಗ ಇರುವ ಆಟೋ, ಕ್ಯಾಬ್ ಸಂಖ್ಯೆನೇ ಬೇರೆ, ನಿಮ್ಮ ಮನೆ ಬಾಗಿಲಿಗೆ ಬರುವ ಆಟೋ, ಕ್ಯಾಬ್ ಸಂಖ್ಯೆನೇ ಬೇರೆ. ಆಗ ಆಟೋ, ಕ್ಯಾಬ್ ಡ್ರೈವರ್‌ರನ್ನು ಕೇಳಿದ್ರೆ ಆಟೋ, ಕ್ಯಾಬ್ ಚೇಂಜ್ ಮಾಡಿದೆ, ಅದು ಹಾಳಾಯ್ತು, ಹಾಗೆ... ಹೀಗೆ ಏನೇನೋ ನೆಪ ಹೇಳುವುದು ಇದೆ. ಹೆಚ್ಚು ಹೆಚ್ಚು ಆಟೋ, ಕ್ಯಾಬ್‌ದಲ್ಲಿ ಹೋಗುವವರಿಗೆ ಇದರ ಅನುಭವ ಆಗೇ ಇರುತ್ತದೆ.
ನೀವೇ ಜವಾಬ್ದಾರರಾಗ್ತೀರಿ ಹುಷಾರ್
ಆದರೆ, ಈ ರೀತಿ ಬುಕ್ ಮಾಡಿದ ಆಟೋ, ಕ್ಯಾಬ್, ಕ್ಯಾಬ್ ನಂಬರ್‌ಗೂ, ನಿಮ್ಮ ಮನೆಗೂ ಬರುವ ಆಟೋ, ಕ್ಯಾಬ್, ಕ್ಯಾಬ್ ನಂಬರ್‌ನಲ್ಲಿ ವ್ಯತ್ಯಾಸ ಇದ್ದರೆ, ಖಂಡಿತ ಅದನ್ನು ಹತ್ತಲೇ ಬೇಡಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮಹತ್ವದ ಎಚ್ಚರಿಕೆಯನ್ನು ನೀಡಿದ್ದಾರೆ. ಒಂದು ವೇಳೆ ಹೀಗೇನಾದರೂ ನೀವು ಹತ್ತಿ, ಏನಾದರೂ ಹೆಚ್ಚೂ ಕಮ್ಮಿ ಆದ್ರೆ ಯಾರೂ ಜವಾಬ್ದಾರರಾಗುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಒಂದು ವೇಳೆ ಹೀಗೆ ನಂಬರ್ ಬದಲಾಗಿದ್ದರೆ, ತಕ್ಷಣವೇ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿರುವ ಅವರು, ಮಾರ್ಗಸೂಚಿಗಳ ಉಲ್ಲಂಘನೆ ಹಾಗೂ ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಓಲಾ, ಉಬರ್, ರ್‍ಯಾಪಿಡೋ ಹಾಗೂ ನಮ್ಮ ಯಾತ್ರೆಯಂತಹ ರೈಡ್ ಆ್ಯಪ್‌ಗಳಲ್ಲಿ ಆಟೋ, ಕ್ಯಾಬ್ ಅಥವಾ ಟ್ಯಾಕ್ಸಿ ಬುಕ್ ಮಾಡಿದಾಗ, ಆ್ಯಪ್‌ನಲ್ಲಿ ಕಾಣಿಸುವ ನೋಂದಣಿ ಸಂಖ್ಯೆಗಿಂತ ಸಂಪೂರ್ಣ ಭಿನ್ನವಾದ ವಾಹನಗಳು ಪ್ರಯಾಣಿಕರನ್ನು ಕರೆದೊಯ್ಯಲು ಬರುತ್ತಿರುವ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ಸಮಸ್ಯೆ ಏನು?
ನೀವು APP ಮೂಲಕ ದಾಖಲಾಗಿರದ ವಾಹನವನ್ನು ಹತ್ತಿದರೆ, ಆ್ಯಪ್‌ನ ಜಿಪಿಎಸ್ ಟ್ರ್ಯಾಕಿಂಗ್ ಮತ್ತು ತುರ್ತು ಎಸ್‌ಒಎಸ್ ವೈಶಿಷ್ಟ್ಯಗಳು ಕೆಲಸ ಮಾಡುವುದಿಲ್ಲ. ಜೊತೆಗೆ, ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ, ಈ ವಾಹನ ನಮ್ಮ ಸಿಸ್ಟಮ್ ಮೂಲಕ ಬುಕ್ ಆಗಿಲ್ಲ ಎಂದು ಹೇಳಿ ಆ್ಯಪ್ ಕಂಪನಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಬಹುದು. ಅದರಲ್ಲೂ, ಸಿಂಗಲ್ ನಂಬರ್ ಪ್ಲೇಟ್ ದುರುಪಯೋಗಪಡಿಸಿಕೊಳ್ಳುವ ಅಥವಾ ಸೂಕ್ತ ಪರವಾನಗಿ ಮತ್ತು ಪೊಲೀಸ್ ವೆರಿಫಿಕೇಶನ್ ಇಲ್ಲದ ಚಾಲಕರು ಇಂತಹ ಕೃತ್ಯ ಎಸಗುತ್ತಾರೆ ಎಂದು ವಾರ್ನ್ ಮಾಡಿದ್ದಾರೆ.


