2014ರಲ್ಲಿ ಆಗ್ರಾದಲ್ಲಿ ನಡೆದ ಪತ್ರಕರ್ತನ ಪತ್ನಿ ನೀಲಂ ಶರ್ಮಾ ಕೊಲೆ ಪ್ರಕರಣದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಮನೆಯಲ್ಲಿ ಸಾಕಿದ್ದ ಗಿಳಿಯು ಸೋದರಳಿಯ 'ಆಶು' ಹೆಸರನ್ನು ಕೂಗುವ ಮೂಲಕ ಪೊಲೀಸರಿಗೆ ಮಹತ್ವದ ಸುಳಿವು ನೀಡಿತು. ಇದೇ ಸುಳಿವಿನ ಆಧಾರದ ಮೇಲೆ ತನಿಖೆ ನಡೆಸಿ, ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು.
ಅಪರಾಧಿ ಸದಾ ಚಿಕ್ಕದೊಂದು ಸುಳಿವನ್ನಾದರೂ ಬಿಟ್ಟು ಹೋಗಿರುತ್ತಾನೆ ಎನ್ನುವ ಮಾತಿದೆ. ಈಗ ಟೆಕ್ನಾಲಾಜಿ ಎಷ್ಟು ಮುಂದುವರೆದಿದೆ ಎಂದರೆ, ಕೊಲೆಯಂಥ ಪ್ರಕರಣಗಳಲ್ಲಿ ಸಾಕ್ಷಿನಾಶ ಮಾಡಲು ಏನೆಲ್ಲಾ ಬೇಕೋ ಎಲ್ಲವನ್ನೂ ಮಾಡಿ ಹೋಗುತ್ತಾರೆ. ಇದರ ಹೊರತಾಗಿಯೂ ಚಿಕ್ಕ ಸುಳಿವು ಸಿಕ್ಕರೆ, ಟ್ಯಾಲೆಂಡೆಟ್ ಪೊಲೀಸರಿಗೆ ಅದೇ ಸಾಕಾಗುತ್ತದೆ ಅಪರಾಧಿಯತ್ತ ಹೋಗಲು. ಆದರೆ ಇಲ್ಲೊಂದು ಕುತೂಹಲದ ಘಟನೆಯಲ್ಲಿ, ಮನೆಯಲ್ಲಿ ಸಾಕಿದ್ದ ಗಿಳಿಯಿಂದಲೇ ಅಪರಾಧಿ ಸಿಕ್ಕಿದ್ದಾನೆ. ಕೊಲೆಗಾರನ ಸುಳಿವು ಸಾಧ್ಯವೇ ಇಲ್ಲ ಎನ್ನುವ ಹಂತದಲ್ಲಿ ಈ ಗಿಳಿ ಕೊಟ್ಟ ಕ್ಲೂ, ಇಡೀ ಪ್ರಕರಣವನ್ನೇ ರೋಚಕ ಘಟ್ಟಕ್ಕೆ ಕರೆದೊಯ್ದು ಕೊನೆಗೂ ಕೊಲೆಗಾರ ಸಿಕ್ಕಿಬಿದಿದ್ದಾನೆ.
ಪತ್ರಕರ್ತನ ಪತ್ನಿ ಕೊಲೆ
ಅಂದಹಾಗೆ ಇದು 2014ರಲ್ಲಿ ನಡೆದಿರುವ ಘಟನೆ. ಉತ್ತರ ಪ್ರದೇಶದ ಆಗ್ರಾದ ಪ್ರಮುಖ ಪತ್ರಿಕೆಯ ಪ್ರಧಾನ ಸಂಪಾದಕ ವಿಜಯ್ ಶರ್ಮಾ ಅವರ ಪತ್ನಿ ನೀಲಂ ಶರ್ಮಾ ಅವರ ಕೊಲೆ ಪ್ರಕರಣ ಇದಾಗಿದೆ. ಫೆಬ್ರವರಿ 20, 2014 ರಂದು ನೀಲಂ ಶರ್ಮಾ ಅವರನ್ನು ಅವರ ಮನೆಯಲ್ಲಿಯೇ ಕೊಲೆ ಮಾಡಲಾಗಿತ್ತು. ಕೊಲೆಯ ನಂತರ, ಅವರ ಮನೆಯನ್ನು ದರೋಡೆ ಮಾಡಲಾಗಿತ್ತು. ಆದರೆ ಯಾವುದೇ ರೀತಿಯಲ್ಲಿ ಕೊಲೆಗಾರ ತನ್ನ ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ಪೊಲೀಸರಿಗೆ ಇದು ದೊಡ್ಡ ತಲೆನೋವಾಗಿತ್ತು. ಆದರೆ, ಅವರ ಮನೆಯಲ್ಲಿ ಸಾಕಿದ್ದ ಗಿಳಿಯಿಂದ ಇಡೀ ಪ್ರಕರಣ ಬೆಳಕಿಗೆ ಬಂದಿತ್ತು. ಪೊಲೀಸರು ಮನೆಯನ್ನು ಶೋಧಿಸುತ್ತಿದ್ದಾಗ, ಅವರಿಗೆ ಯಾವ ಸುಳಿವೂ ಸಿಗದ್ದನ್ನು ನೋಡಿದ್ದ ಗಿಳಿ, ಶರ್ಮಾ ಅವರ ಸೋದರಳಿಯನ ಹೆಸರನ್ನು ಕಿರುಚಲು ಪ್ರಾರಂಭಿತ್ತು. ಆದರೆ, ಅದರ ಮಾತು ಪೊಲೀಸರಿಗೆ ಅರ್ಥವೇ ಆಗಿರಲಿಲ್ಲ. ಬಳಿಕ ಗಿಳಿ ಒಂದೇ ಸಮನೆ ಒಂದು ಹೆಸರನ್ನು ಕಿರುಚಲು ಆರಂಭಿಸಿದಾಗ ವಿಜಯ್ ಶರ್ಮಾ ಅವರಿಗೆ ಡೌಟ್ ಬಂತು.
ಬಳಿಕ ವಿಜಯ್ ಶರ್ಮಾ ಅನುಮಾನಗೊಂಡು ಸೋದರಳಿಯನನ್ನು ಪ್ರಶ್ನಿಸಲು ಪೊಲೀಸರನ್ನು ವಿನಂತಿಸಿದರು. ಆ ಬಳಿಕ ಸೋದರಳಿಯ ಆಶುವನ್ನು ಪೊಲೀಸರು ತಮ್ಮದೇ ರೀತಿಯಲ್ಲಿ ಪ್ರಶ್ನಿಸಿದಾಗ, ತನ್ನ ಸ್ನೇಹಿತ ರೋನಿ ಮ್ಯಾಸ್ಸಿಯ ಸಹಾಯದಿಂದ ನೀಲಂ ಅವರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ. ಕೊಲೆಯಾದ ಒಂಬತ್ತು ವರ್ಷಗಳ ನಂತರ ವಿಶೇಷ ನ್ಯಾಯಾಧೀಶ ಮೊಹಮ್ಮದ್ ರಶೀದ್ ಆರೋಪಿಗಳಾದ ಆಶು ಮತ್ತು ರೋನಿ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದರು ಮತ್ತು ಆಶು ಅವರ ತಪ್ಪೊಪ್ಪಿಗೆ ಮತ್ತು ನಂತರದ ಸಾಕ್ಷ್ಯಗಳ ಆಧಾರದ ಮೇಲೆ 72,000 ರೂ. ದಂಡ ವಿಧಿಸಿದರು.
ನಾಯಿಯನ್ನೂ ಕೊಂದಿದ್ದ ಪಾಪಿಗಳು
ವಿಜಯ್ ಶರ್ಮಾ ಫೆಬ್ರವರಿ 20, 2014 ರಂದು ಫಿರೋಜಾಬಾದ್‌ನಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಲು ತನ್ನ ಮಗ ರಾಜೇಶ್ ಮತ್ತು ಮಗಳು ನಿವೇದಿತಾ ಜೊತೆ ಮನೆಯಿಂದ ಹೊರಟಿದ್ದರು. ನೀಲಂ ಮನೆಯಲ್ಲಿಯೇ ಇದ್ದರು. ವಿಜಯ್ ತಡರಾತ್ರಿ ಹಿಂತಿರುಗಿದಾಗ, ಅವರ ಪತ್ನಿ ಮತ್ತು ಸಾಕು ನಾಯಿಯ ಶವಗಳನ್ನು ಕಂಡು ಆಶ್ಚರ್ಯಚಕಿತರಾದರು. ಇಬ್ಬರನ್ನೂ ಹರಿತವಾದ ವಸ್ತುವಿನಿಂದ ಕೊಲ್ಲಲಾಯಿತು. ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಕೆಲವು ಶಂಕಿತರನ್ನು ಹಿಡಿಯಲಾಯಿತು.
ಮತ್ತೊಂದೆಡೆ, ವಿಜಯ್ ಶರ್ಮಾ ಅವರ ಸಾಕು ಗಿಳಿ ತಿನ್ನುವುದು ಮತ್ತು ಕುಡಿಯುವುದನ್ನು ನಿಲ್ಲಿಸಿ ಮೌನವಾಯಿತು. ಶರ್ಮಾಗೆ ಗಿಣಿಯೇ ಕೊಲೆಗೆ ಸಾಕ್ಷಿಯಾಗಿರಬಹುದೆಂದು ಅನುಮಾನವಿತ್ತು. ಗಿಣಿಯ ಮುಂದೆ ಶಂಕಿತರನ್ನು ಒಬ್ಬೊಬ್ಬರಾಗಿ ಹೆಸರಿಸಲು ಪ್ರಾರಂಭಿಸಿದಾಗ, ಆಶುವಿನ ಹೆಸರಿನಿಂದ ಪಕ್ಷಿ ಗಾಬರಿಗೊಂಡು "ಆಶು-ಆಶು" ಎಂದು ಕಿರುಚಲು ಪ್ರಾರಂಭಿಸಿತು. ಪೊಲೀಸರ ಮುಂದೆಯೂ ಸಹ, ಆಶು ಹೆಸರಿಗೆ ಗಿಣಿ ಅದೇ ಪ್ರತಿಕ್ರಿಯೆಯನ್ನು ನೀಡಿದಾಗ, ಅವನನ್ನು ಬಂಧಿಸಲಾಯಿತು. ಪೊಲೀಸರು ತಮ್ಮ ತನಿಖೆಯ ಸಮಯದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.
ಸಹಾಯ ಪಡೆದವನೇ ಕೊಲೆ ಮಾಡಿದ
ಎಂಬಿಎ ಪದವಿ ಪಡೆಯಲು ನೀಲಂ ತಂದೆ ಸೋದರಳಿಯನಿಗೆ 80,000 ರೂ.ಗಳನ್ನು ಸಹ ನೀಡಿದ್ದರು. ಮನೆಯಲ್ಲಿ ಆಭರಣ ಮತ್ತು ನಗದು ಎಲ್ಲಿ ಇಡಲಾಗಿದೆ ಎಂದು ಆಶುಗೆ ತಿಳಿದಿತ್ತು ಮತ್ತು ಅವನು ದರೋಡೆಗೆ ಯೋಜಿಸಿದ್ದನು ಎಂದು ತಿಳಿದುಬಂತು. ಅವನು ಸಾಕು ನಾಯಿಯನ್ನು ಒಂಬತ್ತು ಬಾರಿ ಮತ್ತು ನೀಲಂ ಅವರನ್ನು 14 ಬಾರಿ ಚಾಕುವಿನಿಂದ ಇರಿದನು, ಇದು ಅವನ ಏಕೈಕ ಉದ್ದೇಶ ಕೊಲ್ಲುವುದು ಮತ್ತು ಲೂಟಿ ಮಾಡುವುದು ಎಂದು ಸೂಚಿಸುತ್ತದೆ ಎಂದು ಅವರು ಹೇಳಿದರು. ಪ್ರಕರಣದ ಉದ್ದಕ್ಕೂ ಗಿಳಿಯ ಬಗ್ಗೆ ಉಲ್ಲೇಖಿಸಲಾಗಿದೆ, ಆದರೆ ಸಾಕ್ಷ್ಯವಾಗಿ ಹಾಜರುಪಡಿಸಲಾಗಿಲ್ಲ ಏಕೆಂದರೆ ಸಾಕ್ಷ್ಯ ಕಾಯ್ದೆಯಲ್ಲಿ ಅಂತಹ ಯಾವುದೇ ನಿಬಂಧನೆ ಇಲ್ಲ. ಘಟನೆಯ ಆರು ತಿಂಗಳ ನಂತರ ಪಕ್ಷಿ ಸತ್ತುಹೋಯಿತು. ವಿಜಯ್ ಶರ್ಮಾ ನವೆಂಬರ್ 14, 2020 ರಂದು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಿಧನರಾದರು. ಸದ್ಯ ಆಶುವನ್ನು ಗಲ್ಲಿಗೇರಿಸಬೇಕು ಎಂದು ನೀಲಂ ಅವರ ಪೋಷಕರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.


