Asianet Suvarna News Asianet Suvarna News

Murder in Bengaluru: ರೂ. 1200 ಸಾಲಕ್ಕಾಗಿ ಕೊಲೆ ಕೇಸ್‌: 9 ಮಂದಿ ಸೆರೆ

*ರೂ. 1200 ಸಾಲಕ್ಕಾಗಿ ಕೊಲೆ ಕೇಸ್‌: 9 ಮಂದಿ ಸೆರೆ
*ಕ್ರೈಂ ನ್ಯೂಸ್‌ - ಮೂವರು ಅಪ್ರಾಪ್ತರೂ ಪೊಲೀಸರ ವಶಕ್ಕೆ
*ಜ.4ರಂದು ಕೋಣನಕುಂಟೆ ಠಾಣಾ ವ್ಯಾಪ್ತಿ ನಡೆದಿದ್ದ ಕೊಲೆ

Man Beaten to death in bengaluru for fight Over 1200 Loan amount 9 Arrested by police mnj
Author
Bengaluru, First Published Jan 10, 2022, 5:40 AM IST

ಬೆಂಗಳೂರು (ಜ. 10):  ಕೇವಲ 1200 ರು. ಸಾಲದ ವಿಚಾರವಾಗಿ ನಡೆದ ಜಗಳದ ವೇಳೆ ನಡೆದ ಕೊಲೆ ಪ್ರಕರಣ (Murder Case) ಸಂಬಂಧ ಕೋಣನಕುಂಟೆ ಠಾಣೆ ಪೊಲೀಸರು 9 ಮಂದಿ ಆರೋಪಿಗಳನ್ನು (Accused) ಬಂಧಿಸಿದ್ದು, ಮೂವರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ.ಹರಿನಗರ ನಿವಾಸಿ ಕಿರಣ್‌(19), ಪವನ್‌(19), ಕಾರ್ತಿಕ್‌(19), ಮಣಿಕಂಠ(19), ಪವನ್‌ ಕುಮಾರ್‌(20), ಅಭಿಷೇಕ್‌(19), ಅನಿಲ್‌ ಕುಮಾರ್‌(20), ಮುನೇಶ್‌ ಕುಮಾರ್‌(19), ಶಶಾಂಕ್‌(18) ಬಂಧಿತರು. ಆರೋಪಿಗಳು ಜ.4ರಂದು ಮೆಹಬೂಬ್‌(25) ಎಂಬಾತನ ಹತ್ಯೆಗೈದು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?

6 ತಿಂಗಳ ಹಿಂದೆ ಆರೋಪಿ ಮಣಿಕಂಠ ಕೋಣನಕುಂಟೆ ನಿವಾಸಿ ಲಲಿತ್‌ಗೆ 1,500 ರು. ಸಾಲ ನೀಡಿದ್ದ. ಬಳಿಕ ಲಲಿತ್‌ 300 ರು. ಹಿಂದಿರುಗಿಸಿ 1,200 ರು. ಬಾಕಿ ಉಳಿಸಿಕೊಂಡಿದ್ದ. ಹೀಗಾಗಿ ಆರೋಪಿ ಮಣಿಕಂಠ ಜ.4ರಂದು ರಾತ್ರಿ 7 ಗಂಟೆ ಸುಮಾರಿಗೆ ಕೋಣನಕುಂಟೆಯ ಸರ್ಕಾರಿ ಶಾಲೆಯ ಬಳಿ ಲಲಿತ್‌ನನ್ನು ಕರೆಸಿಕೊಂಡು ಬಾಕಿ ಸಾಲ ಹಿಂತಿರುಗಿಸುವಂತೆ ದುಬಾಯಿಸಿ ಕೇಳಿದ್ದ. ಈ ವೇಳೆ ಇಬ್ಬರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆದಿತ್ತು.

ಇದನ್ನೂ ಓದಿ: Suvarna FIR : ಹೊಸ ವರ್ಷದ ಎಣ್ಣೆಯಾಟ, ಕೊಲೆಯಾದವನಿಗೂ ಕೊಲೆಗಾರರಿಗೂ ಸಂಬಂಧವೇ ಇಲ್ಲ!

ಈ ವೇಳೆ ಲಲಿತ್‌ ತನ್ನ ಸ್ನೇಹಿತ ದರ್ಶನ್‌ಗೆ ಕರೆ ಮಾಡಿ ಜಗಳದ ವಿಚಾರ ತಿಳಿಸಿದ್ದ. ದರ್ಶನ್‌ ತನ್ನ ಸಹೋದರ ಮನೋಜ್‌ ಜತೆಗೆ ಸ್ಥಳಕ್ಕೆ ಬಂದು ಮಣಿಕಂಠನನ್ನು ಸಾಲದ ಕುರಿತು ಪ್ರಶ್ನಿಸಿದ್ದ. ಆ ವೇಳೆ ಮಣಿಕಂಠನ ಜತೆಯಲ್ಲಿದ್ದ ಆರೋಪಿಗಳಾದ ಕಿರಣ್‌, ಪವನ್‌ ಮತ್ತು ಕಾರ್ತಿಕ್‌ ದರ್ಶನ್‌ ಹಾಗೂ ಮನೋಜ್‌ಗೆ ಅವಾಜ್‌ ಹಾಕಿದ್ದರು. ಇದರಿಂದ ಆಕ್ರೋಶಗೊಂಡ ದರ್ಶನ್‌, ಕಿರಣ್‌ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಕೋಪಗೊಂಡ ಕಿರಣ್‌ ಹಾಗೂ ಸಹಚರರಾದ ಪವನ್‌ ಇಬ್ಬರು ಸೇರಿಕೊಂಡು ದರ್ಶನ್‌ಗೆ ಹಲ್ಲೆ ನಡೆಸಿ, ಆವಾಜ್‌ ಹಾಕಿ ಮತ್ತೆ ಇಲ್ಲಿಗೆ ಬರುವುದಾಗಿ ಸ್ಥಳದಿಂದ ತೆರಳಿದ್ದರು.

ಮತ್ತೆ ತನ್ನ ಸಹಚರರೊಂದಿಗೆ ಬಂದ ಕಿರಣ್‌ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದ. ಲಲಿತ್‌, ದರ್ಶನ್‌ ಪರಾರಿಯಾಗಿದ್ದರು. ಆ ವೇಳೆ ಕೈಗೆ ಸಿಕ್ಕ ಮೆಹಬೂಬ್‌ ಮೇಲೆ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಮೆಹಬೂಬ್‌ನನ್ನು ಸ್ಥಳೀಯರು ಆಸ್ಪತ್ರಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ.

ದೇಶದ ಇತರೆ ನಗರಗಳಿಗಿಂತ ಬೆಂಗ್ಳೂರು ಸೇಫ್‌..!

ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ 2021ನೇ ಸಾಲಿನಲ್ಲಿ ನಗರದಲ್ಲಿ ಅಪರಾಧ(Crime) ಪ್ರಕರಣಗಳು ಕಡಿಮೆಯಾಗಿವೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌(Kamal Pant) ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಇತರೆ ನಗರಗಳ ಅಪರಾಧ ಪ್ರಕರಣಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು(Bengaluru) ಸುರಕ್ಷಿತ ನಗರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Asianet Suvarna FIR ಪತ್ನಿಯನ್ನೇ ಕೊಂದು ಮನೆಯಲ್ಲಿ ಹೂತಿಟ್ಟು ಸಮಾಧಿ ಮೇಲೆ ಮಂಚ ಹಾಕಿಕೊಂಡಿದ್ದ ಪತಿ

ನಟ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರ ಅಂತ್ಯಸಂಸ್ಕಾರದ(Funeral) ವೇಳೆ ಲಕ್ಷಾಂತರ ಅಭಿಮಾನಿಗಳು ಬಂದಿದ್ದರು. ಈ ವೇಳೆ ಅಹಿತಕರ ಘಟನೆಗಳು ಜರುಗದಂತೆ ಪೊಲೀಸರು(Police) ಉತ್ತಮವಾಗಿ ಕಾರ್ಯ ನಿರ್ವಹಿಸಿದರು. ಅಭಿಮಾನಿಗಳು ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರ ಕುಟುಂಬದ ಸಹಕಾರದಿಂದ ಆ ಸಂದರ್ಭವನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಯಿತು ಎಂದು ಹೇಳಿದರು.

ರೌಡಿಸಂ ನಿಯಂತ್ರಣ:

ನಗರದಲ್ಲಿ ಯಾವುದೇ ರೌಡಿ ಗುಂಪುಗಳಿಲ್ಲ. ರೌಡಿಗಳನ್ನು ಸದೆಬಡಿಯಲು ಪ್ರತಿ ಠಾಣೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. 2021ರಲ್ಲಿ 28 ರೌಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜೈಲಿನಲ್ಲಿದ್ದುಕೊಂಡೇ ಕ್ರೈಂ ಚಟುವಟಿಕೆ(Crime Activity) ನಡೆಸುತ್ತಿದ್ದ 40 ರೌಡಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸಿರುವುದಾಗಿ ಕಮಲ್‌ ಪಂತ್‌ ಮಾಹಿತಿ ನೀಡಿದರು. ಹೆಚ್ಚುವರಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌, ಸುಬ್ರಮಣ್ಯೇಶ್ವರ ರಾವ್‌, ಜಂಟಿ ಪೊಲೀಸ್‌ ಆಯುಕ್ತ ರಮಣ್‌ ಗುಪ್ತಾ, ಡಿಸಿಪಿಗಳಾದ ಸಂತೋಷ ಬಾಬು, ಬಿ.ಎಸ್‌.ಅಂಗಡಿ ಉಪಸ್ಥಿತರಿದ್ದರು.

Follow Us:
Download App:
  • android
  • ios