Asianet Suvarna News Asianet Suvarna News

Crime News : 2ನೇ ಮದುವೆ ಆಸೆಗೆ ಮೊದಲ ಪತ್ನಿ ಹಾಗು ಮಕ್ಕಳ ಕೊಲೆ: 11 ವರ್ಷದ ಬಳಿಕ ಸಿಕ್ಕಿಬಿದ್ದ

  •  2ನೇ ಮದುವೆ ಆಸೆಗೆ ಮೊದಲ ಪತ್ನಿ, ಮಕ್ಕಳನ್ನು ಕೊಂದಿದ್ದ ನಿವೃತ್ತ ಜವಾನ
  • ಅನಾರೋಗ್ಯ ನಾಟಕವಾಡಿ ಆಸ್ಪತ್ರೆಯಿಂದ ಪರಾರಿ
  • - ಅಸ್ಸಾಂನಲ್ಲಿ 2ನೇ ಮದುವೆಯಾಗಿ ಮಕ್ಕಳೊಂದಿಗೆ ಆರಾಮಾಗಿದ್ದ ಆರೋಪಿ
  • ಪಿಂಚಣಿ ಪಡೆಯುತ್ತಿದ್ದ ಮಾಹಿತಿ ಆಧಾರಿಸಿ ಬಂಧನ
Man arrested for Wife and Children murder Case after 11 year snr
Author
Bengaluru, First Published Dec 7, 2021, 6:33 AM IST
  • Facebook
  • Twitter
  • Whatsapp

 ಬೆಂಗಳೂರು (ಡಿ.07):  ಮೊದಲನೇ ಪತ್ನಿ (Wife) ಮತ್ತು ಇಬ್ಬರ ಹೆಣ್ಣು ಮಕ್ಕಳ (Children) ಕೊಲೆ ಪ್ರಕರಣದಲ್ಲಿ ಪರಾರಿ ಆಗಿದ್ದ ವಾಯುಸೇನೆ ನಿವೃತ್ತ ಜವಾನ ಹನ್ನೊಂದು ವರ್ಷಗಳ ಬಳಿಕ ವಿ.ವಿ.ಪುರ ಪೊಲೀಸರಿಗೆ (Police) ಸಿಕ್ಕಿಬಿದ್ದಿದ್ದಾನೆ.ಹರ್ಯಾಣ ಮೂಲದ ಧರ್ಮಸಿಂಗ್‌ ಯಾದವ್‌(53) ಬಂಧಿತ. ಆರೋಪಿಯು ಸೇನೆಯ (Indian army) ಪಿಂಚಣಿ (Pension) ಪಡೆಯುತ್ತಿದ್ದ ಮಾಹಿತಿ ಆಧರಿಸಿ ಪೊಲೀಸರು, ಕೊನೆಗೆ ಅಸ್ಸಾಂನಲ್ಲಿ 2ನೇ ಪತ್ನಿ ವಾಸಿಸುತ್ತಿದ್ದ ಆರೋಪಿಯನ್ನು ಸೆರೆ ಹಿಡಿದು ಜೈಲಿಗೆ ಕಳುಹಿಸಿದ್ದಾರೆ.

1987ರಲ್ಲಿ ವಾಯು ಸೇನೆಗೆ (Air Force) ಜವಾನನಾಗಿ ಕೆಲಸಕ್ಕೆ ಸೇರಿದ್ದ ಧರ್ಮಸಿಂಗ್‌ ವಿವಿಧೆಡೆ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತನಾಗಿದ್ದ. ದೆಹಲಿಯ (Delhi) ಅನು ಯಾದವ್‌ ಜತೆ ವಿವಾಹವಾಗಿದ್ದ ಆರೋಪಿಗೆ 14 ವರ್ಷ ಮತ್ತು 8 ವರ್ಷದ ಹೆಣ್ಣು ಮಕ್ಕಳು ಇದ್ದರು. ಬೆಂಗಳೂರಿನಲ್ಲಿ (Bengaluru) ಕಾರ್ಯನಿರ್ವಹಿಸುವಾಗಲೇ ನಿವೃತ್ತನಾದ ಧರ್ಮಸಿಂಗ್‌, ನಂತರ ವಿದ್ಯಾರಣ್ಯಪುರದಲ್ಲಿ ಸ್ವಂತ ಮನೆ ಮಾಡಿಕೊಂಡು ಕುಟುಂಬದ ಜತೆ ವಾಸವಾಗಿದ್ದ. ಸೇನೆಯಲ್ಲಿ ನಿವೃತ್ತನಾದ ನಂತರ ಆತ, ಸಂಜಯನಗರ ಸಮೀಪ ಖಾಸಗಿ ಕಂಪನಿಯಲ್ಲಿ (Private Company) ಖರೀದಿ ವಿಭಾಗದ ಅಧಿಕಾರಿಯಾಗಿ ನೇಮಕಗೊಂಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

2ನೇ ಮದುವೆಗೆ ಸಿದ್ಧತೆ:  ಮೊದಲನೇ ಪತ್ನಿ ಇದ್ದರೂ ಧರ್ಮಸಿಂಗ್‌, ಮತ್ತೊಂದು ಮದುವೆಯಾಗಲು ಜೀವನ್‌ ಸಾಥಿ ಡಾಟ್‌ ಕಾಂನಲ್ಲಿ ಮದುವೆಯಾಗಿಲ್ಲವೆಂದು ಸುಳ್ಳು ಮಾಹಿತಿ ಅಪ್‌ಲೋಡ್‌ ಮಾಡಿದ್ದ. ಆಗ ಆತನ ಸ್ವ-ವಿವರ ನೋಡಿದ ಅಂಜನಾ ಕುಮಾರಿ ಎಂಬಾಕೆ ಧರ್ಮ ಸಿಂಗ್‌ ವರಿಸಲು ಸಮ್ಮತಿಸಿದ್ದಳು. ಇದರಿಂದ ಉತ್ತೇಜಿತನಾದ ಆರೋಪಿ, ಗೌಪ್ಯವಾಗಿ ಎರಡನೇ ಮದುವೆಗೆ ಸಿದ್ಧತೆ ಆರಂಭಿಸಿದ್ದ.

ತನ್ನ ಆಸೆಗೆ ಅಡ್ಡಿಯಾಗಿದ್ದಾರೆ ಎಂದು ಭಾವಿಸಿ ಪತ್ನಿ ಮತ್ತು ಮಕ್ಕಳನ್ನು 2008ರಲ್ಲಿ ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆಗೈದು, ಪೊಲೀಸರ (Police) ದಿಕ್ಕು ತಪ್ಪಿಸಲು ಪತ್ನಿ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಮೃತದೇಹದ ಮೈಮೇಲಿದ್ದ ಚಿನ್ನಾಭರಣ ಕಳವು ಮಾಡಿದ್ದ. ಕಳ್ಳತನಕ್ಕಾಗಿ ಪತ್ನಿ ಮತ್ತು ಮಕ್ಕಳ ಕೊಲೆಯಾಗಿದೆ ಎಂದು ಪೊಲೀಸರ ಮುಂದೆ ಆತ ನಾಟಕ ಮಾಡಿದ್ದ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಧರ್ಮಸಿಂಗ್‌ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ಪೊಲೀಸರು ಪ್ರಶ್ನಿಸಿದಾಗ ಸತ್ಯ ಬಾಯ್ಬಿಟ್ಟಿದ್ದ.

ಖಾರದ ಪುಡಿ ಎರಚಿ ಪರಾರಿ:

ಕೊಲೆ ಆರೋಪದ ಮೇಲೆ ಧರ್ಮಸಿಂಗ್‌, 2 ವರ್ಷ 2 ತಿಂಗಳು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಕಳೆದಿದ್ದ. ಕೊನೆಗೆ ಜೈಲಿನಿಂದ ತಪ್ಪಿಸಿಕೊಳ್ಳಲು ಸಂಚು ರೂಪಿಸಿದ ಆತ, ಮೂತ್ರ ಕೋಶದಲ್ಲಿ ತೊಂದರೆ ಇರುವುದಾಗಿ ಕಾರಾಗೃಹ ಅಧಿಕಾರಿಗಳಿಗೆ ಸುಳ್ಳು ಹೇಳಿದ್ದ. ಇದಕ್ಕೂ ಮುನ್ನ ಆಸ್ಪತ್ರೆಗೆ (Hospital) ತೆರಳುವ ವೇಳೆ ಪರಾರಿಯಾಗಲು ಯೋಜಿಸಿದ್ದ ಆತ, ಜೈಲು ಅಡುಗೆ ಮನೆಯಲ್ಲಿ ಖಾರದ ಪುಡಿಯನ್ನು ಕದ್ದು ಜೇಬಿನಲ್ಲಿ ಇಟ್ಟುಕೊಂಡಿದ್ದ.

ವಿಕ್ಟೋರಿಯಾ ಆಸ್ಪತ್ರೆಯ ಯೂರಾಲಜಿ ವಿಭಾಗಕ್ಕೆ ಆರೋಪಿಯನ್ನು ಕಾರಾಗೃಹದ ಸಿಬ್ಬಂದಿ ತಪಾಸಣೆಗೆ ಕರೆತಂದಿದ್ದರು. ಆಗ ತಪಾಸಣೆ ನಡೆಸಿದ ವೈದ್ಯರು, ಆರೋಪಿಗೆ ನೀರು ಕುಡಿಸಿ ವಾಕಿಂಗ್‌ಗೆ ಅವಕಾಶ ಮಾಡಿಸುವಂತೆ ಸೂಚಿಸಿದ್ದರು. ನೀರು ಕುಡಿದು ವಾಕಿಂಗ್‌ ಮಾಡುವಾಗ ಧರ್ಮಸಿಂಗ್‌, ಪೊಲೀಸರ(Police) ಕಣ್ಣಿಗೆ ಖಾರದ ಪುಡಿ ಎರಚಿ ಚೈನ್‌ ಮತ್ತು ಕೈಕೊಳದ ಸಮೇತ ಪರಾರಿಯಾಗಿದ್ದ. ಈ ಬಗ್ಗೆ ವಿ.ವಿ.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಸುಳಿವು ಕೊಟ್ಟ ಪಿಂಚಣಿ

ಆಸ್ಪತ್ರೆಯಿಂದ ತಪ್ಪಿಸಿಕೊಂಡ ಬಳಿಕ ಧರ್ಮಸಿಂಗ್‌, ತನ್ನೂರು ಹರ್ಯಾಣ ರಾಜ್ಯಕ್ಕೆ ಹೋಗಿದ್ದ. ಆದರೆ ಅಲ್ಲಿ ಮೊದಲನೇ ಪತ್ನಿಯ ಸಂಬಂಧಿಕರು ಗಲಾಟೆ ಮಾಡಿದ್ದರಿಂದ ಆತ ಅಸ್ಸಾಂಗೆ ಓಡಿ ಹೋಗಿದ್ದ. ಬಳಿಕ ಅಸ್ಸಾಂನಲ್ಲಿ ಬಾರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚಿಗೆ ಹಳೇ ಪ್ರಕರಣಗಳ ತನಿಖೆ ಬಗ್ಗೆ ಪೊಲೀಸರ ವಿರುದ್ಧ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ವಿಭಾಗದ ಪತ್ತೆಯಾಗದಿರುವ ಹಳೇ ಪ್ರಕರಣ ಮರು ತನಿಖೆಗೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್‌ ಪಾಂಡೆ ಸೂಚಿಸಿದ್ದರು. ಅದರನ್ವಯ ಧರ್ಮಸಿಂಗ್‌ ನಾಪತ್ತೆ ಬಗ್ಗೆ ಮರು ತನಿಖೆ ಕೈಗೆತ್ತಿಕೊಂಡ ವಿ.ವಿ.ಪುರ ಠಾಣೆ ಪೊಲೀಸರು, ವಾಯು ಸೇನೆ ಕಚೇರಿಗೆ ತೆರಳಿ ಆರೋಪಿಯ ಬಗ್ಗೆ ವಿಚಾರಿಸಿದ್ದಾರೆ. ಆಗ ಆತ ಪ್ರತಿ ತಿಂಗಳು ಮಾಸಿಕ ಪಿಂಚಣಿ ಪಡೆಯುವ ಸಂಗತಿ ಗೊತ್ತಾಗಿದೆ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು, ಹನ್ನೊಂದು ವರ್ಷಗಳ ಬಳಿಕ ಅಸ್ಸಾಂನಲ್ಲಿ ಬಂಧಿಸಿ ಕರೆ ತಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾದಿ ಡಾಟ್‌ಕಾಂ ಮೂಲಕ ಅಸ್ಸಾಂ ಹುಡುಗಿಗೆ ಗಾಳ

ಮೊದಲಿನಿಂದಲೂ ಆರೋಪಿಗೆ ವೈವಾಹಿಕ ಸಂಬಂಧ ಕಲ್ಪಿಸುವ ಆನ್‌ಲೈನ್‌ ವೆಬ್‌ಸೈಟ್‌ನಲ್ಲಿ ಹುಡುಗಿ ಹುಡುಕಿ ಮದುವೆ ಆಗುವ ಖಯಾಲಿ ಇತ್ತು. ಎರಡನೇ ಮದುವೆ ಸಲುವಾಗಿ ಮೊದಲ ಪತ್ನಿ ಮತ್ತು ಮಕ್ಕಳನ್ನು ಕೊಂದು ಜೈಲು ಸೇರಿ ಬಳಿಕ ಅಲ್ಲಿಂದ ತಪ್ಪಿಸಿಕೊಂಡಿದ್ದ ಧರ್ಮಸಿಂಗ್‌, 2012ರಲ್ಲಿ ಶಾದಿ ಡಾಟ್‌ಕಾಂ ಮೂಲಕ ಅಸ್ಸಾಂ ಮೂಲದ ಯುವತಿಯನ್ನು ಪರಿಚಯಿಸಿಕೊಂಡು ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಹಿಂದೆ ಧರ್ಮಸಿಂಗ್‌ ಪತ್ತೆಗೆ ಎರಡ್ಮೂರು ಬಾರಿ ಹರ್ಯಾಣಕ್ಕೆ ತೆರಳಿ ಪೊಲೀಸರು ಮರಳಿದ್ದರು. ಆದರೆ ಈ ಬಾರಿ ನಮಗೆ ಆರೋಪಿಯ ಮೊದಲನೆ ಪತ್ನಿ ಸಂಬಂಧಿಕರು ಹಾಗೂ ಅಸ್ಸಾಂ ರಾಜ್ಯದ ಪೊಲೀಸರ ನೀಡಿದ ನೆರವಿನಿಂದ ಕಾರ್ಯಾಚರಣೆ ಯಶಸ್ಸು ಕಂಡಿತು.

ಹರೀಶ್‌ ಪಾಂಡೆ, ಡಿಸಿಪಿ, ದಕ್ಷಿಣ ವಿಭಾಗ

Follow Us:
Download App:
  • android
  • ios