ಡ್ರಗ್ಸ್‌ ತಯಾರಿಕಾ ಫ್ಯಾಕ್ಟರಿ ಪತ್ತೆಯಿಂದಾಗಿ ರಾಷ್ಟ್ರಮಟ್ಟದಲ್ಲಿ ಭಾರಿ ಸುದ್ದಿಯಾಗಿದ್ದ ಮೈಸೂರಿನಲ್ಲಿ ಮತ್ತೆ ಕೋಟ್ಯಂತರ ರುಪಾಯಿ ಮೌಲ್ಯದ ಮಾದಕ ವಸ್ತು ಪತ್ತೆಯಾಗಿದೆ. ಮೈಸೂರು ಜಿಲ್ಲಾ ಪೊಲೀಸರು ಎರಡನೇ ಬಾರಿ ಡ್ರಗ್ಸ್‌ ಸಂಗ್ರಹವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ಮೈಸೂರು : ಡ್ರಗ್ಸ್‌ ತಯಾರಿಕಾ ಫ್ಯಾಕ್ಟರಿ ಪತ್ತೆಯಿಂದಾಗಿ ರಾಷ್ಟ್ರಮಟ್ಟದಲ್ಲಿ ಭಾರಿ ಸುದ್ದಿಯಾಗಿದ್ದ ಮೈಸೂರಿನಲ್ಲಿ ಮತ್ತೆ ಕೋಟ್ಯಂತರ ರುಪಾಯಿ ಮೌಲ್ಯದ ಮಾದಕ ವಸ್ತು ಪತ್ತೆಯಾಗಿದೆ.

Add Asianetnews Kannada as a Preferred SourcegooglePreferred

ಮಹಾರಾಷ್ಟ್ರ, ದೆಹಲಿ ಪೊಲೀಸರು ವಿವಿಧ ಸಂದರ್ಭದಲ್ಲಿ ಮೂರು ಬಾರಿ ಮೈಸೂರಿನಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ ಹಚ್ಚಿ ದಾಳಿ ನಡೆಸಿದ್ದರು. ಇದರಿಂದಾಗಿ ಸ್ಥಳೀಯ ಪೊಲೀಸರ ದಕ್ಷತೆ ಮೇಲೆಯೇ ಸಂಶಯ ಮೂಡಿತ್ತು. ಬಳಿಕ ಚುರುಕಾದ ಮೈಸೂರು ಜಿಲ್ಲಾ ಪೊಲೀಸರು ಎರಡನೇ ಬಾರಿ ಡ್ರಗ್ಸ್‌ ಸಂಗ್ರಹವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್‌ ವ್ಯಸನಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಭಾರೀ ಪ್ರಮಾಣದಲ್ಲಿ ಮಾದಕ ವಸ್ತು ಸಂಗ್ರಹಿಸಿರುವ ಮಾಹಿತಿ ಸಿಕ್ಕಿದ್ದು, ಅದನ್ನು ಆಧರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ 30 ಕೇಜಿಯ ಡ್ರಗ್ಸ್‌ ಸಿಕ್ಕಿದೆ. ನಗರ ವ್ಯಾಪ್ತಿಯಲ್ಲಷ್ಟೇ ಇದ್ದ ಡ್ರಗ್ಸ್‌ ತಯಾರಿ, ಸಂಗ್ರಹ ಈಗ ಗ್ರಾಮಾಂತರ ಮಟ್ಟಕ್ಕೂ ವಿಸ್ತರಿಸಿರುವುದು ಈಗ ಬೆಳಕಿಗೆ ಬಂದಿದೆ.

30 ಕೆ.ಜಿ.ಗಿಂತಲೂ ಹೆಚ್ಚಿನ ಸಿಂಥೆಟಿಕ್‌ ಡ್ರಗ್ಸ್‌

ಹುಣಸೂರು ತಾಲೂಕು ದಾಸನಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಡ್ರಗ್ಸ್‌ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಕೋಟ್ಯಂತರ ರುಪಾಯಿ ಮೌಲ್ಯದ 30 ಕೇಜಿ ಸಿಂಥೆಟಿಕ್‌ ಡ್ರಗ್ಸ್‌ ವಶಕ್ಕೆ ಪಡೆದಿದ್ದಾರೆ. ಮನೆಯೊಂದರಲ್ಲಿ ಸಿಂಥೆಟಿಕ್‌ ಡ್ರಗ್ಸ್‌ ದಾಸ್ತಾನು ಮಾಡಿರುವ ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಡಿಎಸ್‌ಪಿ ಸಿ.ಮಲ್ಲಿಕ್‌, ಹುಣಸೂರು ಉಪವಿಭಾಗದ ಡಿವೈಎಸ್‌ಪಿ ರವಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ. ಕೋಟ್ಯಂತರ ಮೌಲ್ಯದ ಸುಮಾರು 30 ಕೆ.ಜಿ.ಗಿಂತಲೂ ಹೆಚ್ಚಿನ ಸಿಂಥೆಟಿಕ್‌ ಡ್ರಗ್ಸ್‌ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಡ್ರಗ್ಸ್‌ ಸೇವನೆ ಮಾಡಿದ್ದ ಇಬ್ಬರನ್ನು ಬಂಧಿಸಿದ್ದೆವು

‘ಗುರುವಾರ ಡ್ರಗ್ಸ್‌ ಸೇವನೆ ಮಾಡಿದ್ದ ಇಬ್ಬರನ್ನು ಬಂಧಿಸಿದ್ದೆವು. ಅವರನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ದಾಸನಪುರದ ಮನೆಯೊಂದರಲ್ಲಿ ಸಿಂಥೆಟಿಕ್‌ ಡ್ರಗ್ಸ್‌ ದಾಸ್ತಾನು ಮಾಡಿರುವ ಮಾಹಿತಿ ತಿಳಿಯಿತು. ದಾಳಿ ನಡೆಸಿದಾಗ 2 ಕೆ.ಜಿ, 5 ಕೆ.ಜಿ.ಯ ಪೊಟ್ಟಣಗಳಲ್ಲಿ ಡ್ರಗ್ಸ್‌ ತುಂಬಿಟ್ಟಿರುವುದು ಕಂಡುಬಂದಿದೆ. ಇಬ್ಬರು ಆರೋಪಿಗಳೂ ಮೈಸೂರು ನಿವಾಸಿಗಳಾಗಿದ್ದು, ಇಲ್ಲಿಂದ ಇತರೆಡೆಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ತನಿಖೆ ಮುಂದುವರೆಸಿದ್ದೇವೆ’ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಮೈಸೂರಿನಲ್ಲಿ ಡ್ರಗ್ಸ್‌ ಫ್ಯಾಕ್ಟರಿಯನ್ನೇ ಸ್ಥಾಪಿಸಿ ಮಾದಕ ವಸ್ತುವನ್ನು ತಯಾರಿಸಿ ಮಾರಾಟ, ಸಾಗಣೆ ಮಾಡುತ್ತಿದ್ದ ಜಾಲವನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಹೆಚ್ಚಿದ್ದರು. ವಿವಿಧ ಸಂದರ್ಭದಲ್ಲಿ 2 ಬಾರಿ ದಾಳಿ ನಡೆಸಿ ಕೋಟ್ಯಂತರ ರುಪಾಯಿ ಮೌಲ್ಯದ ಫ್ಯಾಕ್ಟರಿಯನ್ನು ಸೀಜ್‌ ಮಾಡಿದ್ದರು. ಅಲ್ಲದೆ ದೆಹಲಿಯ ಪೊಲೀಸರು ಒಮ್ಮೆ ಮೈಸೂರಿನಲ್ಲಿ ಕಾರ್ಯಾಚರಣೆ ನಡೆಸಿದ್ದರು. ಇದರಿಂದಾಗಿ ಮೈಸೂರು ಜಿಲ್ಲಾ ಪೊಲೀಸರಿಗೆ ಭಾರೀ ಮುಜುಗರವಾಗಿತ್ತು. ಅಲ್ಲದೆ ರಾಷ್ಟ್ರಮಟ್ಟದಲ್ಲಿ ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಬಳಿಕ ಚುರುಕಾದ ಪೊಲೀಸರು, ಭಾರೀ ನಿಗಾವಹಿಸಿದ್ದು, ದಂಪತಿ ಮನೆಯಲ್ಲಿ ಡ್ರಗ್ಸ್‌ ತಯಾರಿಸುತ್ತಿರುವ ಮಾಹಿತಿ ಸಂಗ್ರಹಿಸಿ ಡ್ರಗ್ಸ್‌ ವಶಕ್ಕೆ ಪಡೆದಿದ್ದರು. ಈಗ ಮತ್ತೊಂದು ಪ್ರಕರಣವನ್ನು ಭೇದಿಸಿದ್ದು, ಸಂಗ್ರಹಿಸಿ ಇಟ್ಟಿದ್ದ ಡ್ರಗ್ಸ್‌ ವಶಕ್ಕೆ ಪಡೆದಿದ್ದಾರೆ. ಅದರ ಒಟ್ಟಾರೆ ಮೌಲ್ಯ ತನಿಖೆಯಿಂದಷ್ಟೇ ತಿಳಿಯಬೇಕಿದೆ.