ಮೊಬೈಲ್ ಬ್ಯಾಟರಿ ಸ್ಫೋಟಕ್ಕೆ ವ್ಯಕ್ತಿ ಬಲಿ: ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಶವ..!
ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಮೊಬೈಲ್ ಫೋನ್‌ನ ಬ್ಯಾಟರಿ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಉಜ್ಜಯಿನಿ (ಮಾರ್ಚ್ 2, 2023): ಮೊಬೈಲ್‌ಫೋನ್, ಅದ್ರಲ್ಲೂ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಫೋನ್‌ಗಳ ಬಳಕೆ ಹೆಚ್ಚಾದಂತೆ ಮೊಬೈಲ್ ಫೋನ್ ಬ್ಯಾಟರಿ ಸ್ಫೋಟಗೊಳ್ಳುವ ಪ್ರಕರಣಗಳು ಸಹ ಆಗಾಗ್ಗೆ ವರದಿಯಾಗುತ್ತಿರುತ್ತದೆ. ಇದರಿಂದ ಅನೆಕ ಜೀವಗಳು ಹೋಗಿದ್ದು, ಕೆಲವರಿಗೆ ತೀವ್ರ ಗಾಯಗಳಾಗಿರುವ ವರದಿಗಳು ಸಾಕಷ್ಟಿವೆ. ಈಗ ಮಧ್ಯ ಪ್ರದೇಶದಲ್ಲಿ ಮತ್ತೆ ಇಂತದ್ದೇ ಆರೋಪವೊಂದು ಕೇಳಿಬಂದಿದೆ. ಮೊಬೈಲ್ ಫೋನ್ ಬ್ಯಾಟರಿ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಬಲಿಯಾಗಿದ್ದು, ಅವರ ದೇಹ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ.
ಹೌದು, ಮಧ್ಯಪ್ರದೇಶದ (Madhya Pradesh) ಉಜ್ಜಯಿನಿ ಜಿಲ್ಲೆಯಲ್ಲಿ (Ujjain District) ಮೊಬೈಲ್ ಫೋನ್‌ನ ಬ್ಯಾಟರಿ ಸ್ಫೋಟಗೊಂಡು (Mobile Phone Battery Explodes) ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ (Death). ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಬದ್‌ನಗರ ಪಟ್ಟಣದಲ್ಲಿ ಸೋಮವಾರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮೃತ ವ್ಯಕ್ತಿಯನ್ನು 68 ವರ್ಷದ ದಯಾರಾಮ್ ಬರೋದ್ ಎಂದು ಗುರುತಿಸಲಾಗಿದ್ದು, ಅವರ ಮುಖ ಮತ್ತು ದೇಹದ ಇತರ ಭಾಗಗಳು ತೀವ್ರವಾಗಿ ಹಾನಿಗೊಳಗಾಗಿದ್ದು, ಅವರ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ: Phone Battery: ಚಾರ್ಜ್ ಆಗುತ್ತಿದ್ದ ಅಮ್ಮನ ಫೋನ್ ಸ್ಫೋಟ: ಬಲಿಯಾದ 8 ತಿಂಗಳ ಕಂದಮ್ಮ
ದಯಾರಾಮ್ ಬರೋದ್ ತನ್ನ ಸ್ನೇಹಿತನೊಂದಿಗೆ ಹೊರಕ್ಕೆ ಹೋಗಲು ನಿರ್ಧಾರ ಮಾಡಿದ್ದರು. ಆದರೆ, ಆ ವ್ಯಕ್ತಿ ಪದೇ ಪದೇ ಫೋನ್ ಮಾಡಿದರೂ ಇವರು ಉತ್ತರಿಸದಿದ್ದಾಗ, ದಯಾರಾಮ್ ಬರೋದ್ ಅವರ ನಿವಾಸಕ್ಕೆ ಹೋಗಿದ್ದಾರೆ. ಈ ವೇಳೆ, ಮುಖ ಹಾಗೂ ದೇಹದ ಮೇಲ್ಭಾಗದ ಭಾಗಗಳು ತೀವ್ರವಾಗಿ ಹಾನಿಗೊಳಗಾದ ಹಾಗೂ ಚದುರಿದ (ಚೆಲ್ಲಾಪಿಲ್ಲಿಯಾಗಿ) ಸ್ಥಿತಿಯಲ್ಲಿ ಮೃತಪಟ್ಟಿದ್ದರು ಎಂದು ಸ್ನೇಹಿತ ತಿಳಿಸಿದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ದಯಾರಾಮ್ ಬರೋದ್ ಅವರ ಮೃತದೇಹದ ಬಳಿ ಮೊಬೈಲ್ ಫೋನ್ ಸಹ ಪೀಸ್ ಪೀಸ್ ಆಗಿ ಬಿದ್ದಿದ್ದು ಪತ್ತೆಯಾಗಿದೆ. ಆದರೆ, ಮನೆಯಲ್ಲಿ ಬೇರೆ ಯಾವುದೇ ಸ್ಫೋಟಕ ವಸ್ತುಗಳು ಪೊಲೀಸರಿಗೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ವರದಿಗಳ ಪ್ರಕಾರ, ಮೃತ ವ್ಯಕ್ತಿ ತನ್ನ ಫೋನ್ ಚಾರ್ಜ್ ಆಗುತ್ತಿರುವಾಗ ಯಾರೊಂದಿಗಾದರೂ ಮಾತನಾಡುತ್ತಿದ್ದರು ಎಮದೂ ಹೇಳಲಾಗಿದೆ.
ಇದನ್ನೂ ಓದಿ: ಮಾತನಾಡುತ್ತಲೇ ಸ್ಫೋಟಗೊಂಡ ಮೊಬೈಲ್ ಫೋನ್: ಉತ್ತರ ಪ್ರದೇಶ ವ್ಯಕ್ತಿಗೆ ತೀವ್ರ ಗಾಯ
ಈ ಹಿನ್ನೆಲೆ, ಮೊಬೈಲ್ ಫೋನ್ ಬ್ಯಾಟರಿ ಸ್ಫೋಟದಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದ್ದು, ಆತನ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ವಿಧಿವಿಜ್ಞಾನ ತಜ್ಞರು ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುತ್ತಿದ್ದಾರೆ ಎಂದು ಬದ್‌ನಗರ ಪೊಲೀಸ್ ಠಾಣೆ ಪ್ರಭಾರಿ ಮನೀಶ್ ಮಿಶ್ರಾ ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಅಲ್ಲದೆ, ಮೃತ ವ್ಯಕ್ತಿಯ ಮನೆಯ ಸಮೀಪ ಹಾದು ಹೋಗಿರುವ ಹೈಟೆನ್ಷನ್ ವಿದ್ಯುತ್ ತಂತಿಯಿಂದ ಈ ಘಟನೆ ಸಂಭವಿಸಿದೆಯೇ ಎಂದು ತಿಳಿಯಲು ಸಹ ವಿಧಿವಿಜ್ಞಾನ ತಜ್ಞರು ಪ್ರಯತ್ನಿಸುತ್ತಿದ್ದಾರೆ ಎಂದೂ ಅವರು ಹೇಳಿದರು.
ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಇನ್ನು, ಪೊಲೀಸರು ದಯಾನಂದ ಬರೋದ್ ಅವರ ಸಾವಿಗೆ ಯಾವುದೇ ಸಾಧ್ಯತೆಗಳನ್ನು ತಳ್ಳಿಹಾಕಿಲ್ಲ ಮತ್ತು ನಿಖರವಾದ ಕಾರಣ ಪತ್ತೆಹಚ್ಚಲು ತಮ್ಮ ತನಿಖೆಯನ್ನು ಮುಂದುವರೆಸಿದ್ದಾರೆ.
ಈ ಘಟನೆಯು ಮೊಬೈಲ್ ಫೋನ್ ಮತ್ತು ಅವುಗಳ ಬ್ಯಾಟರಿಗಳ ಸುರಕ್ಷತೆಯ ಬಗ್ಗೆ ಮತ್ತಷ್ಟು ಕಳವಳವನ್ನು ಹುಟ್ಟುಹಾಕಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಫೋನ್‌ಗಳ ಬಗ್ಗೆ ಸೂಕ್ತ ಕಾಳಜಿ ವಹಿಸಲು ಮತ್ತು ಅಗ್ಗದ ಅಥವಾ ನಕಲಿ ಬ್ಯಾಟರಿಗಳನ್ನು ಬಳಸದಂತೆ ಸಲಹೆ ನೀಡಲಾಗುತ್ತಿದೆ. ಈ ರೀತಿ ಅಗ್ಗದ ಅಥವಾ ನಕಲಿ ಬ್ಯಾಟರಿಗಳು ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದೂ ಎಚ್ಚರಿಸಲಾಗುತ್ತಿದೆ. ಜತೆಗೆ, ಸಾರ್ವಜನಿಕರು ಜಾಗರೂಕರಾಗಿರಬೇಕು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ಅಸಾಮಾನ್ಯ ಘಟನೆಗಳು ಕಂಡುಬಂದಲ್ಲಿ ತಕ್ಷಣ ಅಧಿಕಾರಿಗಳಿಗೆ ವರದಿ ಮಾಡುವಂತೆ ಸ್ಥಳೀಯ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ ಎಂದೂ ತಿಳಿದುಬಂದಿದೆ.