ಜಮ್ಮು ಮತ್ತು ಕಾಶ್ಮೀರದ ಸೋಪೋರ್‌ನಲ್ಲಿ, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಶಿಕ್ಷಕನೊಬ್ಬನ ಲೈಂಗಿಕ ದೌರ್ಜನ್ಯದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿನಿಯರ ಹೋರಾಟ ತೀವ್ರಗೊಂಡ ಬಳಿಕ, ಆರೋಪಿ ಶಿಕ್ಷಕನನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರ ಉದ್ವಿಗ್ನ ಸ್ಥಿತಿ ತಲುಪಿದೆ. ಪ್ರತಿಬಾರಿಯೂ ಕಲ್ಲು ತೂರಾಟದಂಥ ಘಟನೆಗಳಿಂದ ಸುದ್ದಿ ಮಾಡುತ್ತಿದ್ದ ಜಮ್ಮು -ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅದೂ ತಮ್ಮ ಹಕ್ಕಿಗಾಗಿ, ತಮ್ಮ ವಿರುದ್ಧ ನಡೆದಿರುವ ಅನ್ಯಾಯಕ್ಕಾಗಿ. ಅಷ್ಟಕ್ಕೂ ಇವರೆಲ್ಲರೂ ಪ್ರತಿಭಟನೆ ಮಾಡುತ್ತಿರುವುದು ಕಾಮುಕ ಶಿಕ್ಷಕನೊಬ್ಬನ ವಿರುದ್ಧ. ಪದವಿಪೂರ್ವ ಕಾಲೇಜಿನಲ್ಲಿನ ಶಿಕ್ಷಕನೊಬ್ಬ ಹೆಣ್ಣುಮಕ್ಕಳ ಮೇಲೆ ನಡೆಸುತ್ತಿರುವ ಲೈಂ*ಗಿಕ ದೌರ್ಜನ್ಯದ ವಿರುದ್ಧ ಈ ಹೆಣ್ಣುಮಕ್ಕಳು ದನಿ ಎತ್ತಿದ್ದಾರೆ. ಆತನಿಗೆ ಶಿಕ್ಷೆ ಕೊಡಿಸುವಂತೆ ಪಟ್ಟು ಹಿಡಿದಿದ್ದಾರೆ. ಇದರಿಂದ ಜಮ್ಮು ಕಾಶ್ಮೀರ ಉದ್ವಿಗ್ನವಾಗಿದೆ.

Add Asianetnews Kannada as a Preferred SourcegooglePreferred

ಲೈಂ*ಗಿಕ ಕಿರುಕುಳ ಪ್ರಕರಣ

ಇಲ್ಲಿಯ ಸೋಪೋರ್ನ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯರ ಮೇಲೆ ನಡೆದ ಲೈಂ*ಗಿಕ ಕಿರುಕುಳ ಪ್ರಕರಣ ಇದಾಗಿದೆ. ಇದು ಇಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲು ಕಾರಣವೇನೆಂದರೆ, ವಿದ್ಯಾರ್ಥಿನಿಯರು ಈ ಬಗ್ಗೆ ಎಷ್ಟೇ ದೂರಿದರೂ ಪ್ರಯೋಜನ ಆಗಿರಲಿಲ್ಲ. ಕೊನೆಗೆ ಒಬ್ಬಳೇ ಒಬ್ಬಳು ವಿದ್ಯಾರ್ಥಿನಿಯ ಮೇಲೆ ಈ ರೀತಿ ಆಗಿದೆ ಎಂದು ಹೇಳಿ ನುಣುಚಿಕೊಳ್ಳುವ ಪ್ರಯತ್ನ ಮಾಡಲಾಯಿತು. ಆದರೆ ಯಾವಾಗ ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರು ಬೀದಿಗಿಳಿದು ಪ್ರತಿಭಟನೆ ಮಾಡಿದರೋ ಆಗ ಪೊಲೀಸರೇ ಅವರಿಗೆ ತಲೆಬಾಗಬೇಕಾಯ್ತು.

ಶಿಕ್ಷಕನ ಅಮಾನತು

ಸದ್ಯ ಕಾಮುಕ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಕೆಲವು ದಿನಗಳ ಮಟ್ಟಿಗೆ ಈ ಕಾಲೇಜನ್ನು ಮುಚ್ಚಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಉಪನ್ಯಾಸಕರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಉಪ ಆಯುಕ್ತ (ಎಡಿಸಿ) ಹೇಳಿದ್ದಾರೆ. ಕಾಶ್ಮೀರದ ಶಾಲಾ ಶಿಕ್ಷಣ ನಿರ್ದೇಶನಾಲಯ (ಡಿಎಸ್‌ಇಕೆ) ಜಿಎಚ್‌ಎಸ್‌ಎಸ್ ಸೋಪೋರ್‌ನಲ್ಲಿ ಉರ್ದುವಿನ ಹಿರಿಯ ಉಪನ್ಯಾಸಕ ಗುಲಾಮ್ ಹಸನ್ ಮಿರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದಿದ್ದಾರೆ.

ತನಿಖಾಧಿಕಾರಿ ನೇಮಕ

ಈ ಬಗ್ಗೆ ವಿದ್ಯಾರ್ಥಿನಿಯರು ನ್ಯಾಯಕ್ಕಾಗಿ ಪಟ್ಟು ಹಿಡಿದ ಕಾರಣ, ಪೊಲೀಸರು ಜಂಟಿ ನಿರ್ದೇಶಕರು (ಉತ್ತರ ಕಾಶ್ಮೀರ) ಅವರನ್ನು ತನಿಖಾ ಅಧಿಕಾರಿಯಾಗಿ ನೇಮಿಸಿದ್ದು, 15 ದಿನಗಳಲ್ಲಿ ವರದಿ ನೀಡುವಂತೆ ತಿಳಿಸಿದ್ದಾರೆ. ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ಅದು ಹಿಂಸಾಚಾರಕ್ಕೂ ತಿರುಗಿತು. ಕೆಲವರು ಇದನ್ನೇ ನೆಪ ಮಾಡಿಕೊಂಡು ಅಲ್ಲಿ ಅಶಾಂತಿ ಸೃಷ್ಟಿಸಲು ಮುಂದಾದರು. ಅವರ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.