ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಪತ್ತೆಯಾದ ಪುರಾತನ ನಿಧಿಯ ಕುರಿತು ಪುರಾತತ್ವ ಇಲಾಖೆಯ ಅಧಿಕಾರಿಯೊಬ್ಬರು ಗೊಂದಲದ ಹೇಳಿಕೆ ನೀಡಿದ್ದಾರೆ. ಆರಂಭದಲ್ಲಿ ನಿಧಿಯಲ್ಲ ಎಂದಿದ್ದ ಅವರು, ನಂತರ ಒತ್ತಡದಿಂದಾಗಿ ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡಿದ್ದು, ಈ ನಿಧಿ ಸರ್ಕಾರಕ್ಕೆ ಸೇರಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಗದಗ(ಜ.12): ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾದ ಪುರಾತನ ನಿಧಿಯ ಕುರಿತು ಗೊಂದಲದ ಹೇಳಿಕೆ ನೀಡಿದ್ದ ಪುರಾತತ್ವ ಇಲಾಖೆಯ ಅಧಿಕಾರಿಗಳು ಈಗ ತಮ್ಮ ಮಾತನ್ನು ಬದಲಿಸಿದ್ದಾರೆ. ಲಕ್ಕುಂಡಿಯಲ್ಲಿ ಸಿಕ್ಕಿದ್ದು ಅಪ್ಪಟ ನಿಧಿ. ಅದು ಸರ್ಕಾರಕ್ಕೆ ಸೇರಿದ್ದು ಎಂದು ಅಧಿಕಾರಿ ರಮೇಶ್ ಸ್ಪಷ್ಟಪಡಿಸಿದ್ದಾರೆ.
‘ಒತ್ತಡದಲ್ಲಿ ಸುಳ್ಳು ಹೇಳಿದ್ದೆ' ಎಂದ ಅಧಿಕಾರಿ ರಮೇಶ್
ಲಕ್ಕುಂಡಿಯಲ್ಲಿ ಸಿಕ್ಕ ವಸ್ತುಗಳು ನಿಧಿಯಲ್ಲ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ರಮೇಶ್, ಈಗ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿ ಸತ್ಯ ಒಪ್ಪಿಕೊಂಡಿದ್ದಾರೆ. 'ನಾನು ಈ ಹಿಂದೆ ಒತ್ತಡದಲ್ಲಿ ಆ ರೀತಿ ಹೇಳಿಕೆ ನೀಡಿದ್ದೆ. ಆದರೆ ಲಕ್ಕುಂಡಿಯಲ್ಲಿ ಸಿಕ್ಕಿರುವುದು ನಿಧಿಯೇ ಆಗಿದೆ. ನನ್ನ ಮೊದಲಿನ ಹೇಳಿಕೆಯನ್ನು ಯಾರೂ ತಪ್ಪಾಗಿ ಭಾವಿಸಬೇಡಿ' ಎಂದು ಮನವಿ ಮಾಡಿದ್ದಾರೆ.
ಫೋಟೋದಲ್ಲಷ್ಟೇ ಚಿನ್ನ ನೋಡಿದ್ದೆ
ತಮ್ಮ ಗೊಂದಲದ ಹೇಳಿಕೆಗೆ ಸ್ಪಷ್ಟನೆ ನೀಡಿದ ರಮೇಶ್, 'ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆ ಅಷ್ಟೆ. ಆದರೆ ನೇರವಾಗಿ ಚಿನ್ನವನ್ನು ನೋಡಿರಲಿಲ್ಲ. ಕೇವಲ ಫೋಟೋದಲ್ಲಷ್ಟೇ ಚಿನ್ನವನ್ನು ನೋಡಿದ್ದೇನೆ. ಆದರೂ ಅದು ಪುರಾತನ ಕಾಲದ ನಿಧಿ ಎಂಬುದು ಖಚಿತವಾಗಿದೆ' ಎಂದು ತಿಳಿಸಿದ್ದಾರೆ. ಅಧಿಕಾರಿಯ ಈ ಯು-ಟರ್ನ್ ಈಗ ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಜನೆವರಿ 10ರಂದು ಲಕ್ಕುಂಡಿಯಲ್ಲಿ ನಡೆದಿದ್ದೇನು?
ಗದಗ ಜಿಲ್ಲೆಯ ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಜನೆವರಿ 10ರಂದು ಮಧ್ಯಾಹ್ನ ಹಳೆಯ ಮನೆಯೊಂದರ ಅಡಿಪಾಯ ತೋಡುವಾಗ ಈ ಅಚ್ಚರಿಯ ಘಟನೆ ಸಂಭವಿಸಿತ್ತು. ಕೆಲಸಗಾರರು ಭೂಮಿ ಅಗೆಯುವಾಗ ಅಪಾರ ಪ್ರಮಾಣದ ಪುರಾತನ ಕಾಲದ ಬಂಗಾರ ಮತ್ತು ನಿಧಿ ಪತ್ತೆಯಾಗಿತ್ತು. ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಇಡೀ ಗ್ರಾಮದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು.
ಸರ್ಕಾರದ ವಶಕ್ಕೆ ಸೇರಬೇಕಿದೆ ನಿಧಿ
ಪುರಾತತ್ವ ಇಲಾಖೆಯ ನಿಯಮದ ಪ್ರಕಾರ ಭೂಮಿಯಲ್ಲಿ ಸಿಗುವ ಇಂತಹ ಐತಿಹಾಸಿಕ ನಿಧಿಗಳು ಸರ್ಕಾರದ ಸ್ವತ್ತಾಗಿರುತ್ತವೆ. ಆರಂಭದಲ್ಲಿ ಅಧಿಕಾರಿಗಳು ಇದು ನಿಧಿಯಲ್ಲ ಎಂದು ಹೇಳಿರುವುದು ಪ್ರಕರಣವನ್ನು ಹಳ್ಳ ಹಿಡಿಸುವ ತಂತ್ರವೇ ಎಂಬ ಸಂಶಯ ಮೂಡಿತ್ತು. ಆದರೆ ಈಗ ಅಧಿಕಾರಿಯೇ ಅದನ್ನು 'ನಿಧಿ' ಎಂದು ಒಪ್ಪಿಕೊಂಡಿರುವುದರಿಂದ, ಲಕ್ಕುಂಡಿಯ ಆ ಅಮೂಲ್ಯ ಬಂಗಾರ ಈಗ ಸರ್ಕಾರದ ಖಜಾನೆ ಸೇರಬೇಕಿದೆ.


