ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ರಾಜ್ಯಾದ್ಯಂತ ಕುತೂಹಲ ಮೂಡಿಸಿದೆ. ಕಾನೂನಿನ ಪ್ರಕಾರ, ನಿಧಿ ಎಂದುಯ ಪರಿಗಣಿಸಬೇಕಾದರೆ ಎಷ್ಟು ಮೌಲ್ಯದ್ದಾಗಿರಬೇಕು, ಎಷ್ಟು ವರ್ಷ ಹಳೆಯದಾಗಿರಬೇಕು ಹಾಗೂ ಎಷ್ಟು ಪಾಲು ನಿಧಿ ಸಿಕ್ಕಿದವರಿಗೆ ಹಣ ಸಿಗುತ್ತದೆ ಎಂಬ ಪುರಾತತ್ವ ಇಲಾಖೆ ಮಾಹಿತಿ ಇಲ್ಲಿದೆ ನೋಡಿ.
ಗದಗ/ಬೆಂಗಳೂರು (ಜ.12): ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ರಾಜ್ಯಾದ್ಯಂತ ಕುತೂಹಲ ಮೂಡಿಸಿದೆ. ಕಾನೂನಿನ ಪ್ರಕಾರ, ನಿಧಿ ಎಂದುಯ ಪರಿಗಣಿಸಬೇಕಾದರೆ ಎಷ್ಟು ಮೌಲ್ಯದ್ದಾಗಿರಬೇಕು, ಎಷ್ಟು ವರ್ಷ ಹಳೆಯದಾಗಿರಬೇಕು ಹಾಗೂ ಎಷ್ಟು ಪಾಲು ನಿಧಿ ಸಿಕ್ಕಿದವರಿಗೆ ಹಣ ಸಿಗುತ್ತದೆ ಎಂಬ ಪುರಾತತ್ವ ಇಲಾಖೆ ಮಾಹಿತಿ ಇಲ್ಲಿದೆ ನೋಡಿ.
ನಮ್ಮ ದೇಶದಲ್ಲಿ ಯಾವುದೇ ಐತಿಹಾಸಿಕ ಸ್ಥಳ, ಯುದ್ಧಭೂಮಿ, ದೇವಾಲಯಗಳು ಅಥವಾ ಇತರೆ ಸ್ಥಳಗಳಲ್ಲಿ ಭೂಮಿಯೊಳಗೆ 10 ರೂ.ಗಿಂತ ಅಧಿಕ ಮೌಲ್ಯದ ಏನೇ ವಸ್ತುಗಳು (ಚಿನ್ನ, ಬೆಳ್ಳಿ,ವಜ್ರ, ವೈಢೂರ್ಯ, ಹವಳಗಳು, ನಾಣ್ಯಗಳು) ಸಿಕ್ಕಿದರೆ ಅದನ್ನು 'ನಿಧಿ' ಎಂದೇ ಪರಿಗಣಿಸಲಾಗುತ್ತದೆ. ಆದರೆ, ಅದು ಕನಿಷ್ಠ 100 ವರ್ಷ ಹಳೆಯದ್ದಾಗಿರಬೇಕು. ಹೀಗೆ, ಹಳೆಯ ಕಾಲದ ನಿಧಿ ಸಿಕ್ಕಿದರೆ ಅದು ಸರ್ಕಾರದ ಸ್ವತ್ತಾಗಿರುತ್ತದೆ. ಆದರೆ, ನಿಧಿ ಯಾರಿಗೆ ಸಿಕ್ಕಿದೆಯೋ ಅವರಿಗೆ ಸಿಗುವ ಪಾಲು ಎಷ್ಟು ಎಂಬ ಮಾಹಿತಿಯನ್ನು ಸ್ವತಃ ಪುರಾತತ್ವ ಇಲಾಖೆ ಅಧಿಕಾರಿಯೇ ನೀಡಿದ್ದಾರೆ. ಇಲ್ಲಿದೆ ನೋಡಿ ವಿಶೇಷ ವರದಿ.
ಇದೀಗ ಗದಗ ಜಿಲ್ಲೆಯ ಇತಿಹಾಸ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾದ ಚಿನ್ನದ ನಾಣ್ಯಗಳ ನಿಧಿ ಇಡೀ ರಾಜ್ಯದ ಕುತೂಹಲ ಕೆರಳಿಸಿದೆ. ಈ ಬೆನ್ನಲ್ಲೇ ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕರಾದ ಶೇಜೇಶ್ವರ ಅವರು ನಿಧಿ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಏಷ್ಯನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು, ಈ ನಿಧಿಯ ಮಹತ್ವ ಮತ್ತು ಸರ್ಕಾರಿ ನಿಯಮಗಳ ಬಗ್ಗೆ ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
10 ರೂಪಾಯಿ ಮೌಲ್ಯಕ್ಕಿಂತ ಹೆಚ್ಚಿದ್ದರೆ ಅದು 'ನಿಧಿ'
ಬಹಳಷ್ಟು ಜನರಿಗೆ ನಿಧಿ ಎಂದರೆ ಕೇವಲ ಬಂಗಾರ ಎಂಬ ಕಲ್ಪನೆಯಿದೆ. ಆದರೆ, ಪುರಾತತ್ವ ಇಲಾಖೆಯ ನಿಯಮಗಳ ಬಗ್ಗೆ ವಿವರಿಸಿದ ಶೇಜೇಶ್ವರ ಅವರು, 'ಕಾನೂನಿನ ಪ್ರಕಾರ 10 ರೂಪಾಯಿ ಮೌಲ್ಯಕ್ಕಿಂತ ಹೆಚ್ಚಿಗೆ ಏನೇ ಪತ್ತೆಯಾದರೂ ಅದನ್ನು ನಿಧಿ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಪತ್ತೆಯಾದ ವಸ್ತು 100 ವರ್ಷಗಳಿಗಿಂತ ಹಳೆಯದಾಗಿದ್ದರೆ ಅದು ನಿಧಿಯ ವ್ಯಾಪ್ತಿಗೆ ಬರುತ್ತದೆ' ಎಂದು ಸ್ಪಷ್ಟಪಡಿಸಿದರು. ಲಕ್ಕುಂಡಿಯಲ್ಲಿ ಸಿಕ್ಕಿರುವ ಈ ಬೃಹತ್ ಪ್ರಮಾಣದ ಬಂಗಾರವು ಇತ್ತೀಚಿನ ವರ್ಷಗಳಲ್ಲಿ ಪತ್ತೆಯಾದ ಅತಿ ದೊಡ್ಡ ನಿಧಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು 100 ವರ್ಷಕ್ಕಿಂತ ಹಳೆಯದ್ದಾಗಿರದ ಯಾವುದೇ ಚಿನ್ನಾಭರಣ, ವಸ್ತುಗಳು ಅಥವಾ ಬೆಳ್ಳಿ-ಬಂಗಾರದ ನಾಣ್ಯಗಳನ್ನು ನಿಧಿ ಎನ್ನಲಾಗುವುದಿಲ್ಲ. ಯಾರ ಜಾಗದಲ್ಲಿ ಸಿಕ್ಕಿದೆಯೇ ಅವರೇ ಅದರ ಮಾಲೀಕರು ಆಗಿರುತ್ತಾರೆ. ಇದನ್ನು ಸರ್ಕಾರದ ಸುಪರ್ದಿಗೆ ಒಪ್ಪಿಸುವ ಅಗತ್ಯವಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.
ರಿತ್ತಿ ಕುಟುಂಬಕ್ಕೆ ಸಿಗಲಿದೆ 5ನೇ ಒಂದು ಭಾಗದಷ್ಟು ಹಣ
ಪತ್ತೆಯಾದ ಚಿನ್ನದ ನಾಣ್ಯಗಳನ್ನು ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಗೆ ಹಸ್ತಾಂತರಿಸಲಾಗಿದೆ. ಸದ್ಯ ಈ ನಾಣ್ಯಗಳ ಮೌಲ್ಯ ನಿರ್ಧಾರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. '1962ರ ಕಾಯ್ದೆಯ ಪ್ರಕಾರ, ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದವರಿಗೆ ಆ ನಿಧಿಯ ಒಟ್ಟು ಮೌಲ್ಯದ ಐದನೇ ಒಂದು ಭಾಗದಷ್ಟು (1/5th share) ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ' ಎಂದು ನಿರ್ದೇಶಕರು ತಿಳಿಸಿದ್ದಾರೆ. ಬಡತನದ ನಡುವೆಯೂ ಬಂಗಾರವನ್ನು ಸರ್ಕಾರಕ್ಕೆ ಒಪ್ಪಿಸಿದ ರಿತ್ತಿ ಕುಟುಂಬಕ್ಕೆ ಇದರಿಂದ ದೊಡ್ಡ ಆರ್ಥಿಕ ನೆರವು ಸಿಗುವ ನಿರೀಕ್ಷೆಯಿದೆ.
ಮುಂದಿನ ನಡೆ ಏನು? ಲಕ್ಕುಂಡಿಯಲ್ಲಿ ಇನ್ನೂ ಹೆಚ್ಚಿನ ಐತಿಹಾಸಿಕ ಕುರುಹುಗಳು ಇರುವ ಸಾಧ್ಯತೆಯಿದೆ. ಹೀಗಾಗಿ ಆ ಸ್ಥಳದಲ್ಲಿ ವೈಜ್ಞಾನಿಕವಾಗಿ ಉತ್ಖನನ ನಡೆಸುವ ಬಗ್ಗೆ ಪ್ರವಾಸೋದ್ಯಮ ಸಚಿವರ ಜೊತೆಗೆ ಚರ್ಚೆ ನಡೆಸುವುದಾಗಿ ಶೇಜೇಶ್ವರ ತಿಳಿಸಿದರು.
ಶಾಸಕ ಸಿಸಿ ಪಾಟೀಲ್ ಭೇಟಿ - ಸನ್ಮಾನ
ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿದ ನರಗುಂದ ಕ್ಷೇತ್ರದ ಶಾಸಕ ಸಿಸಿ ಪಾಟೀಲ್ ಅವರು ನಿಧಿ ಪತ್ತೆಯಾದ ಸ್ಥಳವನ್ನು ಪರಿಶೀಲಿಸಿದರು. ಅಲ್ಲದೆ, ಬಡತನದ ನಡುವೆಯೂ ತಮಗೆ ಸಿಕ್ಕ ಅರ್ಧ ಕೆಜಿಗೂ ಹೆಚ್ಚು ಬಂಗಾರವನ್ನು ಸರ್ಕಾರಕ್ಕೆ ಒಪ್ಪಿಸಿದ ರಿತ್ತಿ ಕುಟುಂಬದ ಪ್ರಾಮಾಣಿಕತೆಯನ್ನು ಮೆಚ್ಚಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. 'ನನ್ನ ಜೀವಮಾನದಲ್ಲೇ ಇಂತಹ ಘಟನೆ ನೋಡಿಲ್ಲ. ರಿತ್ತಿ ಕುಟುಂಬಕ್ಕೆ ಸ್ವಂತ ಮನೆ ಇಲ್ಲ ಎಂದು ತಿಳಿದುಬಂದಿದೆ. ಆ ಕುಟುಂಬಕ್ಕೆ ಪಂಚಾಯ್ತಿಯಿಂದ ಜಾಗ ಕೊಡಿಸಿ, ನೆಮ್ಮದಿಯ ಜೀವನ ನಡೆಸಲು ಸರ್ಕಾರದಿಂದ ಸೂಕ್ತ ನೆರವು ಕೊಡಿಸಲು ನಾನು ಶ್ರಮಿಸುತ್ತೇನೆ' ಎಂದು ಭರವಸೆ ನೀಡಿದರು.


