ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ, ಹಳೆಯ ಮನೆಯ ಅಡಿಪಾಯ ತೋಡುವಾಗ ಪುರಾತನ ಚಿನ್ನಾಭರಣಗಳಿದ್ದ ನಿಧಿ ಪತ್ತೆಯಾಗಿದೆ. ಈ ಆಭರಣಗಳು ಸಮೀಪದ ಲಕ್ಷ್ಮೀ ದೇವಸ್ಥಾನಕ್ಕೆ ಸೇರಿದ್ದೆಂದು ಶಂಕಿಸಲಾಗಿದ್ದು, ಕಲ್ಯಾಣ ಚಾಲುಕ್ಯರ ಕಾಲದ ಇತಿಹಾಸಕ್ಕೆ ಹೊಸ ಸೇರ್ಪಡೆಯಾಗಿದೆ.
ಲಕ್ಕುಂಡಿ (ಜ.10): ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಅಚ್ಚರಿ ಘಟನೆಯೊಂದು ನಡೆದಿದೆ. ಹಳೆಯ ಮನೆಯ ಅಡಿಪಾಯ ತೋಡುವಾಗ ಅಪಾರ ಪ್ರಮಾಣದ ಪುರಾತನ ನಿಧಿ ಪತ್ತೆಯಾಗಿದ್ದು, ಇಡೀ ಗ್ರಾಮದಲ್ಲಿ ಸಂಚಲನ ಮೂಡಿಸಿದೆ.
ಮನೆ ಅಡಿಪಾಯ ತೋಡುವಾಗ ಸಿಕ್ಕಿತು ನಿಧಿ!
ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದ ಕಸ್ತೂರೆವ್ವ ರಿತ್ತಿ ಎನ್ನುವವರ ಮನೆಯಲ್ಲಿ ಈ ವಿಸ್ಮಯ ನಡೆದಿದೆ. ಹೊಸ ಮನೆ ನಿರ್ಮಾಣಕ್ಕಾಗಿ ಹಳೆಯ ಅಡಿಪಾಯವನ್ನು ತೋಡುತ್ತಿದ್ದಾಗ ಕಾರ್ಮಿಕರಿಗೆ ಲೋಹದ ಚೆಂಬು ಪತ್ತೆಯಾಗಿದೆ. ಕುತೂಹಲದಿಂದ ಆ ಚೆಂಬನ್ನು ಪರೀಕ್ಷಿಸಿದಾಗ ಅದರ ಒಳಗೆ ಪಳಪಳ ಹೊಳೆಯುವ ಚಿನ್ನಾಭರಣಗಳು ಕಂಡುಬಂದಿವೆ.
ಚೆಂಬಿನಲ್ಲಿ ಏನೇನು ಅಭರಣಗಳಿವೆ?
ಪತ್ತೆಯಾದ ಪುರಾತನ ಚೆಂಬಿನಲ್ಲಿ ಚಿನ್ನದ ಚೈನ್, ಬೆಲೆಬಾಳುವ ಬಳೆಗಳು ಹಾಗೂ ವಿವಿಧ ವಿನ್ಯಾಸದ ಉಂಗುರಗಳು ಪತ್ತೆಯಾಗಿವೆ. ವಿಶೇಷವೆಂದರೆ, ನಿಧಿ ಸಿಕ್ಕ ಮನೆಯ ಪಕ್ಕದಲ್ಲೇ ಪುರಾತನ ಲಕ್ಷ್ಮೀ ದೇವಸ್ಥಾನವಿದೆ. ಈ ಹಿನ್ನೆಲೆಯಲ್ಲಿ, ಸಿಕ್ಕಿರುವ ಚಿನ್ನಾಭರಣಗಳು ದೇವಸ್ಥಾನಕ್ಕೆ ಸೇರಿದ ಪುರಾತನ ಒಡವೆಗಳಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಕಲ್ಯಾಣ ಚಾಲುಕ್ಯರ ಕಾಲದ ಇತಿಹಾಸ ಹೊಂದಿರುವ ಈ ಮಣ್ಣಿನಲ್ಲಿ ಮತ್ತೆ ನಿಧಿ ಪತ್ತೆಯಾಗಿರುವುದು ಕುತೂಹಲ ಕೆರಳಿಸಿದೆ.
ಅಧಿಕಾರಿಗಳ ಭೇಟಿ ಚಿನ್ನಾಭರಣ ತಪಾಸಣೆ
ನಿಧಿ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾದ ಆಭರಣಗಳ ಕಾಲಮಾನ ಮತ್ತು ಅವುಗಳ ಮೌಲ್ಯದ ಬಗ್ಗೆ ಸಂಶೋಧನೆ ನಡೆಸಲು ಮುಂದಾಗಿದ್ದಾರೆ. ಜಿಲ್ಲಾಡಳಿತವು ಸ್ಥಳವನ್ನು ವಶಕ್ಕೆ ಪಡೆದು, ಹೆಚ್ಚಿನ ಉತ್ಖನನ ನಡೆಸುವ ಸಾಧ್ಯತೆಯೂ ಇದೆ.

ಶಿಲ್ಪಕಲೆಯ ತೊಟ್ಟಿಲು ಲಕ್ಕುಂಡಿ ಗ್ರಾಮ
ಲಕ್ಕುಂಡಿ ಗ್ರಾಮವು 11 ಮತ್ತು 12ನೇ ಶತಮಾನದ ದೇವಸ್ಥಾನಗಳಿಗೆ ಹೆಸರುವಾಸಿಯಾಗಿದೆ. 101 ದೇವಸ್ಥಾನ ಹಾಗೂ 101 ಬಾವಿಗಳನ್ನು ಹೊಂದಿರುವ ಈ ಗ್ರಾಮವು 'ಶಿಲ್ಪಕಲೆಯ ತೊಟ್ಟಿಲು' ಎಂದೇ ಪ್ರಖ್ಯಾತಿ ಪಡೆದಿದೆ. ಕಲ್ಯಾಣ ಚಾಲುಕ್ಯರ ಕಾಲದ ವೈಭವಕ್ಕೆ ಈ ಗ್ರಾಮ ಸಾಕ್ಷಿಯಾಗಿದ್ದು, ಆಗಾಗ ಇಂತಹ ಪುರಾತನ ವಸ್ತುಗಳು ಪತ್ತೆಯಾಗುತ್ತಲೇ ಇವೆ. ಇಂದು ಪತ್ತೆಯಾದ ನಿಧಿಯು ಆ ಕಾಲದ ಆರ್ಥಿಕ ಸಮೃದ್ಧಿಯನ್ನು ನೆನಪಿಸುವಂತಿದೆ.


