ಕೊಡಗು ಜಿಲ್ಲೆಯಲ್ಲಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ಉದ್ಯಮಿ ತೇಜಕುಮಾರ್ ಅವರ ಕಾರಿಗೆ ಲಾರಿ ಗುದ್ದಿಸಿ ಕೊಲೆಗೆ ಯತ್ನಿಸಲಾಗಿದೆ. ಈ ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಆರೋಪಿಗಳು ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೊಡಗು (ಅ.22): ಹಳೆ ದ್ವೇಷ ಹಿನ್ನೆಲೆ ಉದ್ಯಮಿ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಗುದ್ದಿಸಿ ಕೊಲೆಗೆ ಯತ್ನಿಸಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ದೊಡ್ಡಕುಂದ ಗ್ರಾಮದ ಬಳಿ ನಿನ್ನೆ ರಾತ್ರಿ ನಡೆದಿದೆ.
ತೇಜಕುಮಾರ್ ಕೊಲೆಯತ್ನದಿಂದ ಬಚಾವ್ ಆಗಿರುವ ಉದ್ಯಮಿ. ತೇಜಕುಮಾರ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಇಬ್ಬರು ಕಿಡಿಗೇಡಿಗಳು ಲಾರಿಯನ್ನು ಉದ್ದೇಶಪೂರ್ವಕವಾಗಿ ಗುದ್ದಿಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಾರು ಸಂಪೂರ್ಣ ಜಖಂ:
ರಾತ್ರಿ ವೇಳೆ ತೇಜಕುಮಾರ್ ಅವರ ಕಾರಿನ ಮೇಲೆ ಲಾರಿಯನ್ನು ಗುದ್ದಿಸಲಾಗಿದ್ದು, ಈ ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಒಂದು ಬಾರಿ ಗುದ್ದಿದ ಬಳಿಕ ಮತ್ತೆ ಎರಡನೇ ಬಾರಿ ಲಾರಿಯನ್ನು ಗುದ್ದಿಸುವ ಯತ್ನದಲ್ಲಿ ಕಿಡಿಗೇಡಿಗಳು ಸಮೀಪದ ಬೈಕೊಂದಕ್ಕೂ ಗುದ್ದಿದ್ದಾರೆ. ಈ ವೇಳೆ ಲಾರಿ ರಸ್ತೆ ಪಕ್ಕದ ಗುಂಡಿಗೆ ಇಳಿದ ಕಾರಣ, ಆರೋಪಿಗಳು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ.
ಹಳೇ ದ್ವೇಷವೇ ಕಾರಣಾಯ್ತಾ?
ಈ ಘಟನೆಗೆ ಹಳೇ ದ್ವೇಷವೇ ಕಾರಣ ಎಂದು ಶಂಕಿಸಲಾಗಿದ್ದು, ಒಂದು ತಿಂಗಳ ಹಿಂದೆಯೂ ತೇಜಕುಮಾರ್ ಮೇಲೆ ಇದೇ ವ್ಯಕ್ತಿಗಳಿಂದ ಹಲ್ಲೆ ನಡೆದಿತ್ತು ಎಂದು ತಿಳಿದುಬಂದಿದೆ. ಆಗ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಶನಿವಾರಸಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.
