ಪ್ರಕೃತಿಯ ತಾಣ ಕೊಡಗು ಜಿಲ್ಲೆಯನ್ನು ಮತ್ತಷ್ಟು ಸ್ವಚ್ಛಗೊಳಿಸಬೇಕೆಂಬ ದೃಷ್ಟಿಯಿಂದ ಇಂದು ಸ್ವಚ್ಛ ಕೊಡಗು-ಸುಂದರ ಕೊಡಗು ಹೆಸರಿನಲ್ಲಿ ಇಡೀ ಜಿಲ್ಲೆಯಲ್ಲಿ ಏಕಕಾಲಕ್ಕೆ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಅ.15): ಪ್ರಕೃತಿಯ ತಾಣ ಕೊಡಗು ಜಿಲ್ಲೆಯನ್ನು ಮತ್ತಷ್ಟು ಸ್ವಚ್ಛಗೊಳಿಸಬೇಕೆಂಬ ದೃಷ್ಟಿಯಿಂದ ಇಂದು ಸ್ವಚ್ಛ ಕೊಡಗು-ಸುಂದರ ಕೊಡಗು ಹೆಸರಿನಲ್ಲಿ ಇಡೀ ಜಿಲ್ಲೆಯಲ್ಲಿ ಏಕಕಾಲಕ್ಕೆ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಹೊಟೇಲ್ ಹಾಗೂ ರೆಸಾರ್ಟ್ ಅಸೋಷಿಯೇಷನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ಬೆಳಿಗ್ಗೆ 8 ಗಂಟೆಗೆ ಆರಂಭವಾದ ಸ್ವಚ್ಛತಾ ಅಭಿಯಾನಕ್ಕೆ ಜಿಲ್ಲಾಕೇಂದ್ರ ಮಡಿಕೇರಿಯಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ರಸ್ತೆ ಬದಿಯಲ್ಲಿ ಕಸ ಗುಡಿಸಿ ಸ್ವಚ್ಛತೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಬಳಿಕ ಓಂಕಾರೇಶ್ವರ ದೇವಾಲಯ ರಸ್ತೆ, ಮೈಸೂರು ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಡಾ. ಮಂತರ್ ಗೌಡ, ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ, ಹೊಟೇಲ್ ಹಾಗೂ ರೆಸಾರ್ಟ್ ಅಸೋಷಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ ಮಡಿಕೇರಿ ನಗರಸಭೆ ಅಧ್ಯಕ್ಷೆ, ಆಯುಕ್ತರು ಸೇರಿದಂತೆ ನೂರಾರು ಜನರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಮಡಿಕೇರಿ ನಗರ ಸ್ವಚ್ಛಗೊಳಿಸಿದರು. ಅಷ್ಟೇ ಅಲ್ಲ, ಎನ್ಸಿಸಿ, ಎನ್ಎಸ್ಎಸ್, ಸ್ಕೌಡ್ಸ್ ಅಂಡ್ ಗೈಡ್ಸ್ ಸೇರಿದಂತೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕೂಡ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರ, ಪ್ರಮುಖ ಪಟ್ಟಣಗಳು, ನಗರಗಳು ಸೇರಿದಂತೆ ಎಲ್ಲೆಡೆ ಸ್ವಚ್ಛತೆ ಕೆಲಸ ನಡೆಯಿತು.

ಇಡೀ ಜಿಲ್ಲೆಯಲ್ಲಿ ಬರೋಬ್ಬರಿ 320 ಕ್ಕೂ ಹೆಚ್ಚು ಸಂಘಟನೆಗಳು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಹತ್ತಾರು ಲೋಡ್ ಒಣ ಕಸವನ್ನು ಶೇಕರಿಸಿದರು. ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾಧಿಕಾರಿ ಕೊಡಗು ಜಿಲ್ಲೆಯನ್ನು ಮತ್ತಷ್ಟು ಸ್ವಚ್ಛ ಜಿಲ್ಲೆಯನ್ನಾಗಿ ಮಾಡುವ ದೃಷ್ಟಿಯಿಂದ ಈ ಅಭಿಯಾನ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಸಂಜೆವರೆಗೆ ಒಣ ಕಸ, ಅದರಲ್ಲೂ ಪ್ಲಾಸ್ಟಿಕ್ ಅನ್ನು ಸಂಗ್ರಹಿಸಿ ಅದನ್ನು ಮರು ಬಳಕೆಗೆ ಕಳುಹಿಸಲಾಗುವುದು. ಆ ಮೂಲಕ ಕೊಡಗು ಜಿಲ್ಲೆಯ ಸ್ವಚ್ಛತೆಯನ್ನು ಮತ್ತಷ್ಟು ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಶಾಸಕ ಮಂತರ್ ಗೌಡ ಅವರು ಮಾತನಾಡಿ ಹೊರ ಜಿಲ್ಲೆ, ರಾಜ್ಯಗಳಿಂದ ಜಿಲ್ಲೆಗೆ ಬರುವ ಪ್ರವಾಸಿಗರು ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಿದ್ದಾರೆ.

ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು

ಇದರಿಂದಾಗಿ ಜಿಲ್ಲೆ ಒಂದಿಷ್ಟು ಅಶುಚಿತ್ವವಾಗುತ್ತಿದ್ದು, ಇದಕ್ಕೆ ಕಡಿವಾಣ ಬೀಳಬೇಕು. ಹಸಿರು ಕೊಡಗು ಜಿಲ್ಲೆಯನ್ನು ಮತ್ತಷ್ಟು ಹಸಿರಾಗಿಸಬೇಕಾಗಿದೆ. ಯಾರಾದರೂ ಎಲ್ಲೆಂದರೆ ಅಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿದರೆ ಅಂತವರಿಗೆ ದಂಡ ವಿಧಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಜನರು ಕೂಡ ತಮ್ಮ ಮನೆಗಳಲ್ಲಿ ಕಸ ಉತ್ಪಾದನೆ ಆಗದಂತೆ ನೋಡಿಕೊಳ್ಳುವುದು ಅತ್ಯಗತ್ಯ ಎಂದಿದ್ದಾರೆ. ಹೊಟೇಲ್ ಮತ್ತು ರೆಸಾರ್ಟ್ ಅಸೋಷಿಯೇಷನ್ ಸಂಘಟನೆ ಅಧ್ಯಕ್ಷ ದಿನೇಶ್ ಕಾರ್ಯಪ್ಪ ಪ್ರವಾಸೋದ್ಯಮದಿಂದಲೇ ಜಿಲ್ಲೆ ಒಂದಿಷ್ಟು ಅಶುಚಿಯಾಗುತ್ತಿದೆ ಎನ್ನುವ ಆರೋಪವಿತ್ತು. ಹೀಗಾಗಿ ನಾವೇ ಹೆಚ್ಚಿನ ಮುತುವರ್ಜಿ ವಹಿಸಿ ಅಭಿಯಾನದಲ್ಲಿ ತೊಡಗಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.