Asianet Suvarna News Asianet Suvarna News

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನಲ್ಲಿ ಕೇರಳದ ಲಾಟರಿ ಮಾರಾಟ

ಪೊಲೀಸರು ಸೇರಿದಂತೆ ಗುಪ್ತ ಮಾಹಿತಿ ಸಿಬ್ಬಂದಿಗೆ ಲಾಟರಿ ಮಾರಾಟದ ಬಗ್ಗೆ ಮಾಹಿತಿ ಇದ್ದರೂ ತಡೆಗೆ ಕ್ರಮವಹಿಸುತ್ತಿಲ್ಲ ಎಂದು ಸಾರ್ವಜನಿಕರ ದೂರು 

Kerala Lottery Sale at Gundlupete in Chamarajanagar grg
Author
First Published Sep 24, 2022, 12:43 PM IST

ಗುಂಡ್ಲುಪೇಟೆ(ಸೆ.24): ಕೇರಳದಲ್ಲಿ ಹಣದಾಸೆಗೆ ಲಾಟರಿ ಗೀಳಿಗೆ ಬಿದ್ದು ಸಂಕಷ್ಟಕ್ಕೆ ಸಿಲುಕುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪೊಲೀಸರ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ. ಗುಂಡ್ಲುಪೇಟೆ, ಹಂಗಳ, ಬೇಗೂರು ಮತ್ತು ತೆರಕಣಾಂಬಿ ವ್ಯಾಪ್ತಿಯಲ್ಲಿ ಹಣದಾಸೆಗೆ ಕೇರಳದ ಲಾಟರಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವಕರು, ಕೂಲಿ ಕಾರ್ಮಿಕರು ಪ್ರತಿದಿನ ಲಾಟರಿ ಖರೀದಿಸಿ ಹಣ ಕಳೆದುಕೊಂಡು ಸಾಲ ಮಾಡಿದ್ದಾರೆ. ಪೊಲೀಸರು ಸೇರಿದಂತೆ ಗುಪ್ತ ಮಾಹಿತಿ ಸಿಬ್ಬಂದಿಗೆ ಲಾಟರಿ ಮಾರಾಟದ ಬಗ್ಗೆ ಮಾಹಿತಿ ಇದ್ದರೂ ತಡೆಗೆ ಕ್ರಮವಹಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಈ ಹಿಂದೆ ಗುಂಡ್ಲುಪೇಟೆ ತಾಲೂಕಿನ ಹಲವೆಡೆ ಜಿಲ್ಲಾ ಅಪರಾಧ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಲಾಟರಿ ಮಾರುತ್ತಿದ್ದವರನ್ನು ಬಂಧಿಸಿದ್ದರು.

ಕಳೆದೊಂದುವರ್ಷದಿಂದ ಎಗ್ಗಿಲ್ಲದೆ ಲಾಟರಿ ಮಾರಾಟ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿದ್ದರೂ ಸ್ಥಳೀಯ ಪೊಲೀಸರು ಲಾಟರಿ ಮಾರಾಟ ತಡೆಗೆ ಮುಂದಾಗಿಲ್ಲ. ತಾಲೂಕಿನ ಜನರು ನೆರೆ ರಾಜ್ಯ ಕೇರಳದ ಸುಲ್ತಾನ್‌ ಬತ್ತೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಲಿ ಮಾಡುತ್ತಾರೆ.

ಓಲಾ ಕಾರಿಗೆ ‘ಬೈಕ್‌ ವಿಮೆ’ ಮಾಡಿಸಿ ಮಾರಿದ ಭೂಪನ ಬಂಧನ..!

ದುಡಿಮೆಯ ಹಣದಲ್ಲಿ ಲಾಟರಿ ಖರೀದಿಸುವುದು ಒಂದೆಡೆಯಾದರೆ, ಕೆಲ ಯುವಕರು ಸುಲ್ತಾನ್‌ ಬತ್ತೇರಿಗೆ ಕೇರಳಕ್ಕೆ ಹೋಗಿ ಲಾಟರಿ ಟಿಕೆಟ್‌ ಖರೀದಿಸಿ ಮಾರಾಟ ಮಾಡುತ್ತಿದ್ದಾರೆ. ರಾಜ್ಯದ ಗಡಿ ಮೂಲೆಹೊಳೆ ಚೆಕ್‌ಪೋಸ್ಟ್‌ ಮೂಲಕವೇ ಮಾರಾಟಗಾರರು ಆಗಮಿಸುತ್ತಿದ್ದಾರೆ. ತಪಾಸಣೆ ನಡೆಸದಿರುವುದೇ ಲಾಟರಿ ಟಿಕೆಟ್‌ ಗುಂಡ್ಲುಪೇಟೆಗೆ ಬರಲು ಕಾರಣ ಎನ್ನಲಾಗಿದೆ.

ಚೆಕ್‌ಪೋಸ್ಟ್‌ ತಪಾಸಣಾ ಸಿಬ್ಬಂದಿ ಕೇರಳದಿಂದ ಬರುವ ಜನರನ್ನು ತೀವ್ರ ತಪಾಸಣೆ ನಡೆಸದ ಕಾರಣ ಕೇರಳದಿಂದ ಲಾಟರಿ ಹಾಗೂ ಕೇರಳದ ತ್ಯಾಜ್ಯತಾಲೂಕಿಗೆ ಬರುತ್ತಿದೆ. ಕೂಲಿ ಕಾರ್ಮಿಕರು ಪ್ರತಿದಿನ ಲಾಟರಿ ದಲ್ಲಾಳಿಗಳ ಜೊತೆ ಸಂಪರ್ಕದಲ್ಲಿದ್ದು, ದುಡಿದ ಕೂಲಿಯ ಹಣವನ್ನು ಲಾಟರಿಗೆ ವ್ಯಯಿಸುತ್ತಿದ್ದಾರೆ. ಕೆಲ ಪೊಲೀಸರಿಗೆ ಮಾಮೂಲಿ ಕೊಡುತ್ತಿರುವ ಕಾರಣ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಲಾಗಿದೆ. ಪೊಲೀಸರು ಲಾಟರಿ ದಂಧೆಗೆ ಕಡಿವಾಣ ಹಾಕಬೇಕು ಎಂದು ನಿವಾಸಿ ವೆಂಕಟೇಶ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಲಾಟರಿ ನಿಷೇಧಿಸಿದೆ, ಕೇರಳ ರಾಜ್ಯದಲ್ಲಿ ಲಾಟರಿ ಕಳ್ಳದಾರಿಯಲ್ಲಿ ಲಾಟರಿ ಟಿಕೆಟ್‌ ಮಾರಾಟವಾಗುತ್ತಿದೆ. ಈ ಅಕ್ರಮ ಮಾರಾಟ ದಂಧೆಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಲಾಟರಿ ಮಾರಾಟ ತಡೆಯಬೇಕು ಅಂತ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್‌ ತಿಳಿಸಿದ್ದಾರೆ.  

ಕಳೆದ ತಿಂಗಳು ನಾಲ್ಕು ಲಾಟರಿ ಮಾರಾಟದ ಸಂಬಂಧ ಪ್ರಕರಣ ದಾಖಲಾಗಿದೆ. ಲಾಟರಿ ತಡೆ ಸಂಬಂಧ ಪೊಲೀಸರಿಗೆ ಸೂಚನೆ ನೀಡಿ ಕ್ರಮ ವಹಿಸಲು ಸೂಚನೆ ನೀಡಲಾಗುವುದು ಅಂತ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಹೇಳಿದ್ದಾರೆ. 

Follow Us:
Download App:
  • android
  • ios