Asianet Suvarna News Asianet Suvarna News

ಓಲಾ ಕಾರಿಗೆ ‘ಬೈಕ್‌ ವಿಮೆ’ ಮಾಡಿಸಿ ಮಾರಿದ ಭೂಪನ ಬಂಧನ..!

ವಿಮಾ ಕಂಪನಿಯ ಆ್ಯಪ್‌ನಲ್ಲಿ ಇದ್ದ ದೋಷ ದುರ್ಬಳಕೆ ಮಾಡಿ ಕೃತ್ಯ, 140 ಕಾರು ಮಾರಾಟ ಮಾಡಿದ ಆರೋಪಿ ಸೆರೆ

Accused Who Sold  Bike Insurance for Ola Car in Bengaluru grg
Author
First Published Sep 21, 2022, 3:00 AM IST

ಬೆಂಗಳೂರು(ಸೆ.21):  ಕೊರೋನಾ ಲಾಕ್‌ಡೌನ್‌ ವೇಳೆ ಸಾರಿಗೆ ವಹಿವಾಟಿ ಇಲ್ಲದೆ ನಿಲುಗಡೆಯಾಗಿದ್ದ ಓಲಾ ಕಂಪನಿಯ ಕಾರುಗಳನ್ನು ಖರೀದಿಸಿ ಬಳಿಕ ಅವುಗಳಿಗೆ ಬೈಕ್‌ಗಳ ಹೆಸರಿನಲ್ಲಿ ವಿಮೆ ನವೀಕರಿಸಿ ಮಾರಾಟ ಮಾಡಿದ್ದ ಚಾಲಾಕಿ ಸೋದರರ ಪೈಕಿ ಒಬ್ಬಾತ ಆಗ್ನೇಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಧಾರವಾಡ ಜಿಲ್ಲೆಯ ಇರ್ಫಾನ್‌ ಶೇಖ್‌ ಬಂಧಿತನಾಗಿದ್ದು, ಕೃತ್ಯ ಎಸಗಿ ಪರಾರಿಯಾಗಿರುವ ಆರೋಪಿಯ ಹಿರಿಯ ಸೋದರ ಮನ್ಸೂರ್‌ ಶೇಖ್‌ ಪತ್ತೆಗೆ ತನಿಖೆ ನಡೆದಿದೆ. ಇತ್ತೀಚೆಗೆ ತಮ್ಮ ಕಂಪನಿಯ ವಿಮೆ ಹೆಸರಿನಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿ ಸಿಇಎನ್‌ ಠಾಣೆಗೆ ಆ್ಯಕೋ ವಿಮಾ ಕಂಪನಿ ದೂರು ನೀಡಿತು. ಅಂತೆಯೇ ತನಿಖೆ ನಡೆಸಿದ ಇನ್‌ಸ್ಪೆಕ್ಟರ್‌ ಎಸ್‌.ಟಿ.ಯೋಗೇಶ್‌ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

NewsHour ಶಿವಮೊಗ್ಗದಲ್ಲಿ ಐಸಿಸ್ ಶಂಕಿತ ಉಗ್ರರ ಬಂಧನ, ಬೆಚ್ಚಿ ಬೀಳಿಸುತ್ತಿದೆ ಭಯೋತ್ಪಾದಕರ ಹಿನ್ನಲೆ!

ಆ್ಯಪ್‌ ತಾಂತ್ರಿಕ ದೋಷದಿಂದ ಲಾಭ:

ಧಾರವಾಡದ ಮನ್ಸೂರ್‌ ಶೇಖ್‌, ಹೆಬ್ಬಾಳದಲ್ಲಿ ಸೆಕೆಂಡ್‌ ಹ್ಯಾಂಡ್‌ ಕಾರು ಡೀಲರ್‌ ಸೆಂಟರ್‌ ನಡೆಸುತ್ತಿದ್ದ. ಕೊರೋನಾ ಲಾಕ್‌ಡೌನ್‌ ವೇಳೆ ವಹಿವಾಟಿ ಇಲ್ಲದೆ ಓಲಾ ಕಂಪನಿಯು, ತನ್ನ ಕಂಪನಿಯಲ್ಲಿದ್ದ ಕಾರುಗಳನ್ನು ಮಾರಾಟಕ್ಕೆ ಮುಂದಾಯಿತು. ಆಗ ಆ ಕಂಪನಿಯಲ್ಲಿ 140 ಕಾರುಗಳನ್ನು ಶೇಖ್‌ ಖರೀದಿಸಿದ್ದ. ಈ ಕಾರುಗಳಿಗೆ ತನ್ನ ಕಿರಿಯ ಸೋದರ ಇರ್ಫಾನ್‌ ಮೂಲಕ ನಕಲಿ ವಿಮೆ ಮಾಡಿಸಿದ್ದ. ಬೇರೆಯವರು ಖರೀದಿಸಿದ್ದ 85 ಓಲಾ ಕಾರುಗಳನ್ನೂ ಇರ್ಫಾನ್‌ ತಾನೇ ಖರೀದಿಸಿದ್ದ.

ಆ್ಯಕೋ ವಿಮಾ ಕಂಪನಿಯ ಆ್ಯಪ್‌ನಲ್ಲಿ ತಾಂತ್ರಿಕ ದೋಷವನ್ನು ಬಳಸಿಕೊಂಡ ಇರ್ಫಾನ್‌, ಕಾರುಗಳಿಗೆ ದ್ವಿಚಕ್ರದ ಹೆಸರಿನಲ್ಲಿ ವಿಮೆ ಮಾಡಿಸಿದ್ದ. ಮೊದಲಿನಿಂದಲೂ ವಿಮಾ ಏಜೆಂಟ್‌ ಆಗಿದ್ದ ಕೆಲಸ ಮಾಡುತ್ತಿದ್ದ ಆತನಿಗೆ ಆ್ಯಪ್‌ ಲೋಪದೋಷಗಳ ಬಗ್ಗೆ ಅರಿವಿತ್ತು. ಓಲಾ ಕಂಪನಿಯಿಂದ ಖರೀದಿಸಿದ ಹಳೆಯ ಕಾರುಗಳ ವಿಮೆ ಅವಧಿ ಮುಗಿದಿದ್ದವು. ಹಾಗಾಗಿ ನವೀಕರಣ ಸಲುವಾಗಿ ತಲಾ ಪಾಲಿಸಿಗೆ 8ರಿಂದ 10 ಸಾವಿರ ರು. ಪಾವತಿಸಬೇಕಿತ್ತು. ಆಗ ಆ್ಯಕೋ ಆ್ಯಪ್‌ನ ಲೋಪದೋಷ ದುರ್ಬಳಕೆ ಮಾಡಿಕೊಂಡ ಆರೋಪಿ, ದ್ವಿಚಕ್ರದ ಹೆಸರಿನಲ್ಲಿ ಕಾರುಗಳಿಗೆ ವಿಮೆ ಮಾಡಿಸಿದ್ದ. ಆ್ಯಕೋ ಜನರಲ್‌ ಇನ್ಶೂರೆನ್ಸ್‌ನಲ್ಲಿ ಕಾರಿನ ನೋಂದಣಿ ಸಂಖ್ಯೆ ಹಾಕಿ ವಾಹನ ಮಾದರಿ ಕಾಲಂನಲ್ಲಿ ದ್ವಿಚಕ್ರ ವಾಹನ ಎಂದು ಆಯ್ಕೆ ಮಾಡಿದ್ದ. ಇದಕ್ಕೆ ಪ್ರತಿಯಾಗಿ ತಲಾ ಪಾಲಿಸಿಗೆ .500ರಿಂದ .1 ಸಾವಿರವರೆಗೆ ಹಣ ಪಾವತಿಸಿ ನವೀಕರಣ ಮಾಡಿದ್ದ. ಇದೇ ದಾಖಲೆ ಇಟ್ಟುಕೊಂಡು 140 ಕಾರುಗಳನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡು ಆನಂತರ ವೈಟ್‌ ಬೋರ್ಡ್‌ಗೆ ಬದಲಾಯಿಸಿ ಗ್ರಾಹಕರಿಗೆ ಮಾರಾಟ ಮಾಡಿದ್ದರು.

ವಿಮೆ ಕಂಪನಿಯ ಆಂತರಿಕ ತನಿಖೇಲಿ ನಕಲಿ ಆಟ ಪತ್ತೆ

ಕೆಲ ದಿನಗಳ ಹಿಂದೆ ಕಾರುಗಳ ವಿಮಾ ಪಾಲಿಸಿಗಳ ಲೆಕ್ಕ ಪರಿಶೀಲನೆ ವೇಳೆ ತನ್ನ ಕಂಪನಿಯ ಹೆಸರಿನಲ್ಲಿ ದೇಶಾದ್ಯಂತ 2 ಲಕ್ಷ ವಿಮೆ ಮಾಡಿರುವುದು ಆಂತರಿಕ ಲೆಕ್ಕ ಪರಿಶೀಲನೆ ವೇಳೆ ಆ್ಯಕೋ ಜನರಲ್‌ ಇನ್ಸೂರೆನ್ಸ್‌ ಕಂಪನಿಗೆ ಗೊತ್ತಾಗಿದೆ. ಆಗ ಕರ್ನಾಟಕದ ನವೀಕರಣ ಸಂಬಂಧ ಕಂಪನಿಯ ಸಾಫ್ಟ್‌ವೇರ್‌ ನವೀಕರಣದ ಪಟ್ಟಿಯಲ್ಲಿ ಏಕಾಏಕಿ .1.09 ಕೋಟಿ ಸಂಗ್ರಹವಾಗಬೇಕು ಎಂದು ವರದಿ ಬಂದಿತ್ತು. ಈ ಹಣದ ವ್ಯತ್ಯಾಸದ ಬಗ್ಗೆ ಕಂಪನಿ ಸಮಗ್ರವಾಗಿ ಪರಿಶೀಲಿಸಿದಾಗ ವಂಚನೆ ಬಹಿರಂಗವಾಗಿದೆ.

Pune Crime: ಯುವತಿ ಮೇಲೆ ಲೈಂಗಿಕ ದೌರ್ಜನ್ಯ; ಫುಡ್ ಡೆಲಿವರಿ ಏಜೆಂಟ್ ಬಂಧನ

ಒಂದೇ ಮೊಬೈಲ್‌ ಮತ್ತು ಇ-ಮೇಲ್‌ ಐಡಿಯಿಂದ ಅತಿ ಹೆಚ್ಚು ವಿಮಾ ಪಾಲಿಸಿ ನವೀಕರಣಯಾಗಿದ್ದವು. ಇರ್ಫಾನ್‌ ವಿರುದ್ಧ ದಾಖಲೆ ಸಮೇತ ಪೊಲೀಸರಿಗೆ ಆ್ಯಕೋ ಕಂಪನಿ ಅಧಿಕಾರಿಗಳು ದೂರು ನೀಡಿದ್ದರು. ಇದರ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಆರ್‌ಟಿಒ ಕೈವಾಡ?

ವಿಮಾ ವಂಚನೆ ಕೃತ್ಯದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ಕೈವಾಡದ ಬಗ್ಗೆ ತನಿಖೆ ನಡೆದಿದೆ. ಈ ಸಂಬಂಧ ಈಗಾಗಲೇ ಆರ್‌ಟಿಒ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಗಿದ್ದು, ತಾವು ತಪ್ಪು ಮಾಡಿಲ್ಲ. ವಿಮೆ ಪಾವತಿಗೆ ಬಗ್ಗೆ ದಾಖಲೆ ಸಲ್ಲಿಸಿದ ಮೇರೆಗೆ ವಾಹನ ನೋಂದಣಿ ಮಾಡಿಕೊಟಿದ್ದೇವೆ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಹೀಗಿದ್ದರೂ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Follow Us:
Download App:
  • android
  • ios