ಯೂಟ್ಯೂಬ್ ಚಾನೆಲ್ ಹೊಂದಿರುವ ಮಹಿಳೆಯ ವಿಡಿಯೋಗಳಿಗೆ ಗಂಡ ಅಸಭ್ಯ ಕಾಮೆಂಟ್ ಮಾಡುತ್ತಿದ್ದ ಎಂಬ ಆರೋಪ.
ಕಾಸರಗೋಡು: ಮಹಿಳೆಯೊಬ್ಬರು ಗಂಡನ ವಿರುದ್ಧ ದೂರು ಸಲ್ಲಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ನೀಲೇಶ್ವರಂನ ಸುಜಿತಾ ಎಂಬುವರು ಗಂಡ ರಘು ವಿರುದ್ಧ ಹಲ್ಲೆ ದೂರು ದಾಖಲಿಸಿದ್ದಾರೆ. ಸುಜಿತಾ ಯುಟ್ಯೂಬ್ ಚಾನೆಲ್ ಹೊಂದಿದ್ದು, ಇವರ ವಿಡಿಯೋಗಳಿಗೆ ಗಂಡ ರಘು ಅಸಭ್ಯವಾಗಿ ಕಮೆಂಟ್ ಮಾಡುತ್ತಿದ್ದನು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ರಘು ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸುಜಿತಾ ಆರೋಪಿಸಿದ್ದಾರೆ. ಗಂಡ ರಘು ತನ್ನ ಮೇಲೆ ಹಲ್ಲೆ ನಡೆಸಿರುವ ವಿಡಿಯೋಗಳನ್ನು ಸಾಕ್ಷ್ಯವಾಗಿ ನೀಡಿದ್ದಾರೆ. ವಿಡಿಯೋ ಸಹಿತ ಗಂಡ ರಘು ವಿರುದ್ಧ ಸುಜಿತಾ ದೂರು ದಾಖಲಿಸಿದ್ದಾರೆ.
40 ವರ್ಷದ ನೀಲೇಶ್ವರಂನ ನಿವಾಸಿಯಾಗಿರುವ ಸುಜಿತಾ, ಕ್ಲಿನಿಕ್ ಮತ್ತು ಹಣ್ಣಿನ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಗಂಡ ರಘು ಕುವೈತ್‌ನಲ್ಲಿ ಕೆಲಸ ಮಾಡಿಕೊಂಡಿದ್ದರೂ, ಪತ್ನಿಗೆ ಹಣ ಕಳುಹಿಸುತ್ತಿರಲಿಲ್ಲ. ಹಾಗಾಗಿತೇ ಸುಜಿತಾ ಕೆಲಸ ಮಾಡಿಕೊಂಡಿದ್ದರು. ತೀವ್ರವಾದ ಬೆನ್ನುನೋವಿನಿಂದ ಬಳಲುತ್ತಿರೋದರಿಂದ ಸುಜಿತಾ, ಯುಟ್ಯೂಬ್ ಚಾನೆಲೆ ಆರಂಭಿಸಿ ಸ್ವಲ್ಪ ಹಣ ಗಳಿಸಲು ಶುರು ಮಾಡಿದ್ದರು.
ಕೂದಲು ಹಿಡಿದು ಎಳೆದಾಡಿ ಹಲ್ಲೆ
ಪತ್ನಿ ಸುಜಿತಾ ಅಪ್ಲೋಡ್ ಮಾಡುತ್ತಿದ್ದ ವಿಡಿಯೋಗಳಿಗೆ ರಘು ಅಸಭ್ಯವಾಗಿ ಕಮೆಂಟ್ ಮಾಡಲು ಆರಂಭಿಸಿದ್ದನು. ಈ ರೀತಿ ಕಮೆಂಟ್ ಹಾಕುತ್ತಿರೋದನ್ನು ಸುಜಿತಾ ಪ್ರಶ್ನೆ ಮಾಡಿದ್ದರು. ದಿಕ್ಕೆ ಕೋಪಗೊಂಡು, ಸುಜಿತಾ ಕೂದಲು ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾನೆ. ಈ ಹಿಂದೆಯೂ ಹಲವು ಬಾರಿ ಗಂಡ ಹಲ್ಲೆ ನಡೆಸಿದ್ದಾಗಿ ಸುಜಿತಾ ಹೇಳಿಕೊಂಡಿದ್ದಾರೆ. 2023ರಲ್ಲಿ ಗಂಡನ ವಿರುದ್ಧ ಸುಜಿತಾ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದರು. ಇದೀಗ ಮತ್ತೆ ಗಂಡನ ವಿರುದ್ಧ ದೂರು ದಾಖಲಿಸಿದ್ದಾರೆ.
ಮುದ್ದೆ ಕೋಲಿಂದ ಹೊಡೆದು ಪತಿಯ ಕೊ*ಲೆ
ತಮ್ಮ ಮನೆ ಕೆಲಸದ ಮಹಿಳೆ ಜತೆ ಅಕ್ರಮ ಸಂಬಂಧ ಶಂಕೆ ಮೇರೆಗೆ ಪತಿಯನ್ನು ಕೊಂದು ಬಳಿಕ ಹೃದಯಾಘಾತದ ಸಾವು ಎಂದು ನಾಟಕವಾಡಿದ್ದ ಮೃತನ ಎರಡನೇ ಪತ್ನಿ ಕೊನೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾಳೆ.
ಭವಾನಿ ನಗರದ ನಿವಾಸಿ ಭಾಸ್ಕರ್ (42) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಪತ್ನಿ ಶೃತಿಯನ್ನು ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಸ್ನಾನದ ಮನೆಯಲ್ಲಿ ಕುಸಿದು ಬಿದ್ದು ಭಾಸ್ಕರ್ ಮೃತಪಟ್ಟಿದ್ದಾರೆ ಎಂದು ದೂರು ದಾಖಲಾಗಿತ್ತು. ಆದರೆ ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸತ್ಯ ಬಯಲಾಗಿದೆ. ಭಾಸ್ಕರ್ ಮೇಲೆ ಹಲ್ಲೆ ನಡೆದು ಆಂತರಿಕ ರಕ್ತಸ್ರಾವದಿಂದ ಭಾಸ್ಕರ್ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದರು. ಈ ಬೆನ್ನಲ್ಲೇ ಶಂಕೆ ಮೇರೆಗೆ ಶೃತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ.
ವೃದ್ಧ ದಂಪತಿ ಆತ್ಮಹ*ತ್ಯೆ
ತಮ್ಮನ್ನು ಮಗ ವೃದ್ಧಾಶ್ರಮಕ್ಕೆ ಸೇರಿಸಿದ್ದರಿಂದ ಮನನೊಂದು ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಮನ ಕಲಕುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜೆ.ಪಿ.ನಗರದ 8ನೇ ಹಂತದ ಕೃಷ್ಣಮೂರ್ತಿ (81) ಹಾಗೂ ರಾಧಾ (74) ಮೃತ ದುರ್ದೈವಿಗಳು. ಎರಡು ದಿನಗಳ ಹಿಂದೆ ಅಂಜನಾ ನಗರದ ಕಮಲಮ್ಮ ರಾಮಕೃಷ್ಣಪ್ಪ ವೃದ್ಧಾಶ್ರಮದಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮರುದಿನ ಮೃತರ ಕೋಣೆಗೆ ಆಶ್ರಮದ ಸಿಬ್ಬಂದಿ ತೆರಳಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಕೃಷ್ಣಮೂರ್ತಿ ಅವರು ನಿವೃತ್ತಿ ಬಳಿಕ ತಮ್ಮ ಪತ್ನಿ ಹಾಗೂ ಮಗನ ಕುಟುಂಬ ಜತೆ ಜೆ.ಪಿ.ನಗರದ 8ನೇ ಹಂತದಲ್ಲಿ ನೆಲೆಸಿದ್ದರು. ಖಾಸಗಿ ಕಂಪನಿಯಲ್ಲಿ ಅವರ ಪುತ್ರ ವಿಜಯ್ ಕೆಲಸದಲ್ಲಿದ್ದಾನೆ. ಆದರೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಿಂದೆ ಅವರನ್ನು ಕಮಲಮ್ಮ ವೃದ್ಧಾಶ್ರಮಕ್ಕೆ ಮಗ ಸೇರಿಸಿದ್ದ.