ಭುವನೇಶ್ವರದಲ್ಲಿ ಬಿಎಂಸಿ ಹೆಚ್ಚುವರಿ ಆಯುಕ್ತ ರತ್ನಾಕರ್ ಸಾಹೂ ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ಕುಂದುಕೊರತೆ ಸಭೆಯ ವೇಳೆ ಈ ಘಟನೆ ನಡೆದಿದ್ದು, ಘಟನೆ ಖಂಡಿಸಿ ಆಡಳಿತ ಸೇವಾ ಸಿಬ್ಬಂದಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ಗುಂಪೊಂದು ಬಿಎಂಸಿ ಅಧಿಕಾರಿಯನ್ನು ಕಚೇರಿಯಿಂದ ಹೊರಗೆಳೆದು ಹಲ್ಲೆ ಮಾಡಿದ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಭುವನೇಶ್ವರ ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿ (Bhubaneswar Municipal Corporation) ಹೆಚ್ಚುವರಿ ಕಮೀಷನರ್ ರತ್ನಾಕರ್ ಸಾಹೂ ಅವರನ್ನು ಗುಂಪೊಂದು ಕಚೇರಿಯಿಂದ ಹೊರಗೆಳೆದು ಹಲ್ಲೆ ಮಾಡಿದ್ದು, ಅವರ ಮುಖಕ್ಕೆ ಪಂಚ್ ಮಾಡಿ ಹಲ್ಲೆ ಮಾಡಲಾಗಿದೆ. ಕುಂದು ಕೊರತೆಗಳ ವಿಚಾರಣೆ ವೇಳೆ ಈ ಘಟನೆ ನಡೆದಿದೆ.

ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಯುತ್ತಿದ್ದಾಗ ಅವರ ಕಚೇರಿಗೆ ನುಗ್ಗಿದ ಕೆಲವರು ಅವರನ್ನು ಅವರ ಶರ್ಟ್ ಕಾಲರ್‌ನಲ್ಲಿ ಹಿಡಿದು ಹೊರಗೆಳೆದುಕೊಂಡು ಬಂದು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಜಗ್ ಬೈ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಈ ಹಲ್ಲೆ ಮಾಡಿದ್ದಾರೆ. ಜಗ್ ಬೈ ಎಂದರೆ ಸ್ಥಳಿಯ ಬಿಜೆಪಿ ನಾಯಕ ಜಗನ್ನಾಥ್ ಪ್ರಧಾನ್ ಎಂದು ತಿಳಿದು ಬಂದಿದೆ. ರತ್ನಾಕರ್ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಅವರನ್ನು ಒತ್ತಾಯಪೂರ್ವಕವಾಗಿ ತಮ್ಮ ವಾಹನಕ್ಕೆ ತುಂಬಿಸಿ ಕರೆದೊಯ್ಯಲು ಯತ್ನಿಸಿದ್ದಾರೆ ಎಂದು ರತ್ನಾಕರ್ ಸಾಹೂ ಅವರು ಆರೋಫಿಸಿದ್ದಾರೆ.

ನಾನು ನಿನ್ನೆ ಮಧ್ಯಾಹ್ನ 11.30ರ ಸುಮಾರಿಗೆ ಕುಂದು ಕೊರತೆ ಸಭೆ ನಡೆಸುತ್ತಿದ್ದಾಗ ಬಿಎಂಸಿಯ ಕಾರ್ಪೋರೇಟರ್ ಜೀವನ್ ರೌತ್ ಸೇರಿದಂತೆ ಒಟ್ಟು ಆರು ಜನ ನನ್ನ ಕಚೇರಿಗೆ ನುಗ್ಗಿದ್ದಾರೆ. ಬಳಿಕ ಅವರು ನೀವು ಜಗ್‌ಬೈ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದೀರಾ ಎಂದು ಕೇಳಿದ್ದಾರೆ. ನಾನು ಇಲ್ಲ ಎಂದು ಹೇಳಿದಾಗ ಆ ಕಾರ್ಪೋರೇಟರ್ ಹಾಗೂ ಆತನ ಜೊತೆಗಿದ್ದವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನನ್ನು ಕಚೇರಿಯಿಂದ ಎಳೆದುಕೊಂಡು ಬಂದು ಹಲ್ಲೆ ಮಾಡಿದ್ದಲ್ಲದೇ, ಅವರ ವಾಹನಕ್ಕೆ ಒತ್ತಾಯಪೂರ್ವಕವಾಗಿ ಹತ್ತಿಸಲು ನೋಡಿದ್ದಾರೆ ಎಂದು ಸಾಹು ಆರೋಪಿಸಿದ್ದಾರೆ.

ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗುಂಪೊಂದು ಅವರನ್ನು ನೆಲಕ್ಕೆ ತಳ್ಳಿ ಅವರನ್ನು ಮೆಟ್ಟಿಲುಗಳ ಮೇಲೆ ಎಳೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಜೀವನ್ ರಾವತ್, ರಶ್ಮಿ ಮಹಾಪಾತ್ರ ಹಾಗೂ ದೆಬಶಿಶ್ ಪ್ರಧಾನ್ ಎಂಬುವವರನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.

ಇನ್ನು ಈ ಘಟನೆ ಖಂಡಿಸಿ ಬಿಜೆಡಿ ಕಾರ್ಪೋರೇಟರ್‌ಗಳು, ಬಿಎಂಸಿಯ ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದು, ಭುವನೇಶ್ವರದ ಜನದಟ್ಟಣೆಯ ರಸ್ತೆ ಜನಪಥ್‌ನಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರತ್ನಾಕರ್ ಅವರ ಮೇಲಿನ ಹಲ್ಲೆ ಖಂಡಿಸಿ ಒಡಿಶಾದ ಆಡಳಿತ ಸೇವಾ ವಿಭಾಗವೂ ಇಂದು ಸಾಮೂಹಿಕ ರಜೆ ಹಾಕಿದೆ.

ಈ ಘಟನೆಗೆ ಸಂಬಂಧಿಸಿದಂತೆ ಒಡಿಶಾ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬೇಸರ ವ್ಯಕ್ತಪಡಿಸಿದ್ದು, ಈ ನಾಚಿಕೆಗೇಡಿನ ದಾಳಿಯನ್ನು ಆಯೋಜಿಸಿದ ಮತ್ತು ಪಿತೂರಿ ನಡೆಸಿದ ರಾಜಕೀಯ ನಾಯಕರು ಸೇರಿದಂತೆ ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರನ್ನು ಒತ್ತಾಯಿಸಿದ್ದಾರೆ. ಈ ವೀಡಿಯೊವನ್ನು ನೋಡಿ ನನಗೆ ಸಂಪೂರ್ಣ ಆಘಾತವಾಗಿದೆ. ಇಂದು, ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯ ಹಿರಿಯ ಅಧಿಕಾರಿ ಹಾಗೂ ಬಿಎಂಸಿಯ ಒಎಎಸ್ ಹೆಚ್ಚುವರಿ ಆಯುಕ್ತರಾದ ರತ್ನಾಕರ್ ಸಾಹೂ ಅವರನ್ನು ತಮ್ಮ ಕಚೇರಿಯಿಂದ ಎಳೆದೊಯ್ದು ಬಿಜೆಪಿ ಕಾರ್ಪೊರೇಟರ್ ಮುಂದೆಯೇ ಕ್ರೂರವಾಗಿ ಒದ್ದು ಹಲ್ಲೆ ಮಾಡಿದ್ದಾರೆ.

ರಾಜಧಾನಿಯ ಹೃದಯಭಾಗದಲ್ಲಿ, ಹಿರಿಯ ಅಧಿಕಾರಿಯೊಬ್ಬರಿಗೆ ಸಾರ್ವಜನಿಕರ ಸಮ್ಮುಖದಲ್ಲಿ ಇದು ಸಂಭವಿಸಿದ್ದು ಭಯಾನಕವಾಗಿದೆ . ಒಬ್ಬ ಹಿರಿಯ ಅಧಿಕಾರಿ ತನ್ನ ಸ್ವಂತ ಕಚೇರಿಯಲ್ಲಿ ಸುರಕ್ಷಿತವಾಗಿಲ್ಲದಿದ್ದರೆ, ಸಾಮಾನ್ಯ ನಾಗರಿಕರು ಸರ್ಕಾರದಿಂದ ಯಾವ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರೀಕ್ಷಿಸುತ್ತಾರೆ? ಎಂದು ಅವರು ಕೇಳಿದ್ದಾರೆ.ಬಿಎಂಸಿ ಮೇಯರ್ ಸುಲೋಚನಾ ದಾಸ್ ಕೂಡ ಈ ಘಟನೆಯನ್ನು ಖಂಡಿಸಿ್ದು ಮತ್ತು ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.

I am utterly shocked seeing this video. 

Today, Shri Ratnakar Sahoo, OAS Additional Commissioner, BMC, a senior officer of the rank of Additional Secretary was dragged from his office and brutally kicked and assaulted in front of a BJP Corporator, allegedly linked to a defeated… pic.twitter.com/yf7M3dLt9C

Scroll to load tweet…