ಕೆಲಸದವನಿಗೆ ಹೃದಯ ಕೊಟ್ಟ ಉದ್ಯಮಿಯ ಪತ್ನಿ, ಆಳಿಗಾಗಿ ಗಂಡನ ಕೊಲೆ!
* ಗಂಡನ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾನ ಮೇಲೆ ಪ್ರೀತಿ
* ಪ್ರೀತಿಸಿದಾತನಿಗಾಗಿ ಗಂಡನನ್ನೇ ಕೊಲ್ಲಲು ಮುಂದಾದ ಪತ್ನಿ
* ಪ್ರಿಯಕರನ ಜೊತೆ ಸೇರಿ ಪತಿಯ ಕೊಲ್ಲಲು ಸಂಚು
ಜಾರ್ಖಂಡ್(ಏ.04): ವಿವಾಹದ ಬಳಿಕ ಬೇರೊಬ್ಬರ ಪ್ರೀತಿಯಲ್ಲಿ ಬೀಳುವುದು ಅಥವಾ ಮದುವೆಯಾದ ನಂತರ ಬೇರೊಬ್ಬರೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ಎಂದರೆ ಭವಿಷ್ಯದಲ್ಲಿ ಕೆಲವು ಅಪರಾಧಗಳಿಗೆ ಆಹ್ವಾನ ಕೊಟ್ಟಂತೆ. ಇಲ್ಲಿ ಅನೇಕ ಪ್ರಕರಣಗಳಲ್ಲಿ ಪ್ರೇಮಿಯೊಂದಿಗೆ ಸೇರಿ ಕೈಹಿಡಿದ ತನ್ನ ಸಂಗಾತಿಯನ್ನು ಕೊಲೆಗೈಯ್ಯುವ ವರದಿಗಳು ಸದ್ದು ಮಾಡುತ್ತವೆ. ಇಂತಹದೊಂದು ಭಯಾನಕ ಪ್ರಕರಣ ಜಾರ್ಖಂಡ್‌ನ ಧನ್‌ಬಾದ್‌ನಿಂದ ಬೆಳಕಿಗೆ ಬಂದಿದೆ. ಅಲ್ಲಿ ಒಬ್ಬ ಉದ್ಯಮಿಯ ಹೆಂಡತಿ ತನ್ನ ಪತಿಯೊಂದಿಗೆ ಕೆಲಸ ಮಾಡುವ ಆಳನ್ನು ಪ್ರೀತಿಸಿದ್ದಾಳೆ. ಕೆಲಸದವನ ಪ್ರೀತಿ ಆಕೆಯನ್ನು ಅದೆಷ್ಟು ಮರುಳು ಮಾಡಿತ್ತೆಂದರೆ, ಆತನಿಗಾಗಿ ಆಕೆ ತನ್ನ ಗಂಡನನ್ನು ಕೊಂದಿದ್ದಾಳೆ. ಈ ಕೊಲೆ ನಡೆಸಲು ಇಬ್ಬರೂ ಸಂಚು ರೂಪಿಸಿದ್ದಾರೆ. ಆದರೆ ಅಂತಿಮವಾಗಿ ಇಬ್ಬರೂ ಈ ಸಂಚಿನಲ್ಲಿ ಸಿಕ್ಕಾಕೊಂಡಿದ್ದಾರೆ.
ಆಘಾತಕಾರಿ ವಿಚಾರ ಬಹಿರಂಗಪಡಿಸಿದ ಧನ್ಬಾದ್ ಪೊಲೀಸರು
ವಾಸ್ತವವಾಗಿ, ಈ ಪ್ರಕರಣವು ಧನ್ಬಾದ್ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾರ್ಚ್ 26 ರಂದು ಪಾನ್-ಮಸಾಲಾ ವ್ಯಾಪಾರಿ ಮುಖೇಶ್ ಪಂಡಿತ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಈ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರು ಒಂದು ವಾರದಿಂದ ಈ ಕೊಲೆ ಪ್ರಕರಣದಲ್ಲಿ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಈ ಕೊಲೆಯನ್ನು ರೂಪಿಸಿ ಉದ್ಯಮಿಯ ಹತ್ಯೆಗೈದಿದ್ದು ಬೇರೆ ಯಾರೂ ಅಲ್ಲ, ಮೃತನ ಪತ್ನಿ ನೀಲಮ್ ದೇವಿ ಮತ್ತು ಆಕೆಯ ಪ್ರೇಮಿ, ಗಂಡನ ಆಳು ಉಜ್ವಲ್ ಶರ್ಮಾ ಎಂದಿದ್ದಾರೆ. ನೀಲಂ ಮತ್ತು ಆಕೆಯ ಪ್ರಿಯಕರ ಉಜ್ವಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲಸದವನನ್ನು ಪ್ರೀತಿಸುತ್ತಿದ್ದ ಪತ್ನಿ, ಅಕ್ರಮ ಸಂಬಂಧಕ್ಕೆ ಗಂಡನ ಕೊಲೆ
ಈ ಪ್ರಕರಣದ ಬಗ್ಗೆ ಮಾಹಿತಿ ಕೊಟ್ಟ ಧನ್‌ಬಾದ್ ಎಸ್‌ಎಸ್‌ಪಿ ಸಂಜೀವ್ ಕುಮಾರ್, ಮೃತ ಮುಖೇಶ್ ಪಂಡಿತ್ ತನ್ನ ಕುಟುಂಬದೊಂದಿಗೆ ದಾಮೋದರ್‌ಪುರದ ಸೋಮ್‌ನಗರದಲ್ಲಿ ವಾಸಿಸುತ್ತಿದ್ದ. ಅವರ ಮನೆ ಬಳಿಯೇ ವಾಸಿಸುತ್ತಿದ್ದ ಉಜ್ವಲ್ ಶರ್ಮಾ ಈ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲಸದ ಆಳು ಉಜ್ವಲ್ ಮುಖೇಶ್ ಮನೆಗೆ ಭೇಟಿ ನೀಡಲಾರಂಭಿಸಿದ್ದ. ಈ ನಡುವೆ ಉಜ್ವಲ್ ಹಾಗೂ ಮಲಿಕ್ ಪತ್ನಿ ನೀಲಂ ನಡುವೆ ಪ್ರೇಮ ಸಂಬಂಧ ಏರ್ಪಟ್ಟಿತ್ತು. ಅಷ್ಟೇ ಅಲ್ಲ, ಇಬ್ಬರೂ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದ್ದರು. ಆದರೆ ಮಹಿಳೆಯ ಪತಿ ಅವರ ದಾರಿಗೆ ಅಡ್ಡಿಯಾಗುತ್ತಿದ್ದ. ಹೀಗಾಗಿ ತಮಗೆ ತೊಡಕಾಗಿದ್ದ ಗಂಡನನ್ನು ಕೊಲ್ಲಲು ಇಬ್ಬರೂ ಸೇರಿ ಒಂದು ಸಂಚು ರೂಪಿಸಿದ್ದರು.
ತನ್ನ ಗಂಡನನ್ನು ಕೊಲ್ಲಲು ಮೋಸದ ಬಲೆ ಬೀಸಿದ ಹೆಂಡತಿ
ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರ ಉಜ್ವಲ್ ಸೇರಿ ಮುಖೇಶ್ ನನ್ನು ಹನಿ ಟ್ರ್ಯಾಪ್ ನಲ್ಲಿ ಸಿಲುಕಿಸಿದ್ದಾರೆ. ಇದಕ್ಕಾಗಿ ಫೇಸ್ ಬುಕ್ ನಲ್ಲಿ ಥ್ರೋ ಐಡಿ ಅಂದರೆ ಹುಡುಗಿ ಹೆಸರಿನಲ್ಲಿ ಖಾತೆ ಸೃಷ್ಟಿಸಿ ಮುಖೇಶ್ ಜತೆ ಸ್ನೇಹ ಬೆಳೆಸಿದ್ದರು. ಉಜ್ವಲ್ ಮೆಸೆಂಜರ್ ಮೂಲಕ ಮುಖೇಶ್ ಜೊತೆ ಮಾತನಾಡಲು ಪ್ರಾರಂಭಿಸಿದ್ದ ಮತ್ತು ಉಜ್ವಲ್ ಪ್ರೀತಿಯ ನಾಟಕವನ್ನೂ ಮಾಡಿದ. ಮಾರ್ಚ್ 25 ರ ರಾತ್ರಿ, ಉಜ್ವಲ್, ಹುಡುಗಿಯಂತೆ ನಟಿಸಿ, ಮುಖೇಶ್ ಅವರನ್ನು ಭೇಟಿಯಾಗಲು ದಾಮೋದರಪುರ ಫುಟ್ಬಾಲ್ ಮೈದಾನಕ್ಕೆ ಕರೆದಿದ್ದ. ಆದರೆ ಎದುರಿನಲ್ಲಿ ಉಜ್ವಲ್‌ನನ್ನು ನೋಡಿದ ಮುಖೇಶ್‌ಗೆ ಆಶ್ಚರ್ಯವಾಗಿದೆ. ಆದರೆ ವಾಸ್ತವ ವಿಚಾರ ಅರಿವಾಗುವಷ್ಟರಲ್ಲಿ ಆರೋಪಿಗಳು ಮುಖೇಶ್ ಎದೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನೂ ವಿಚಾರಣೆಗೊಳಪಡಿಸಿದಾಗ ವಿಷಯ ಬಯಲಿಗೆ ಬಂದಿದೆ. ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.