* ಗಂಡನಿಂದ ವಿಚ್ಛೇದನ ಪಡೆದಿದ್ದ ಮಗಳು* ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗೆಳತಿಯ ತಾಯಿಯನ್ನೇ ಹತ್ಯೆಗೈದ* ಗೋವಿಂದರಾಜ ನಗರದ ಎಸ್‌ವಿಜಿ ನಗರದಲ್ಲಿ ಘಟನೆ* ಅನೈತಿಕ ಸಂಬಂಧಕ್ಕೆ ಗೆಳತಿಯ ತಾಯಿ ಆಕ್ಷೇಪ
ಬೆಂಗಳೂರು(ಮೇ.07): ತಮ್ಮ ಅನೈತಿಕ ಸಂಬಂಧ ಅಡ್ಡಿಯಾಗಿದ್ದಾಳೆ ಎಂದು ಕೋಪಗೊಂಡು ಗೆಳತಿಯ ತಾಯಿಯನ್ನು ಕತ್ತು ಹಿಸುಕಿ ಕಿಡಿಗೇಡಿಯೊಬ್ಬ ಕೊಂದಿರುವ ಘಟನೆ ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎಸ್‌ವಿಜಿ ನಗರದ ನಿವಾಸಿ ನಂಜಮ್ಮ (50) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿ ಪರಾರಿಯಾಗಿರುವ ಮೃತಳ ಮಗಳ ಗೆಳೆಯ ರಾಘವೇಂದ್ರ ಅಲಿಯಾಸ್ ಗೆಡ್ಡೆಯನ್ನು ಪೊಲೀಸರು ಬಂಧಿಸಿದ್ದಾರೆ. ವೈಯಕ್ತಿಕ ವಿಚಾರ ಮಾತನಾಡುವ ನೆಪದಲ್ಲಿ ನಂಜಮ್ಮ ಮನೆಗೆ ಗುರುವಾರ ರಾತ್ರಿ ತೆರಳಿದ ಆರೋಪಿ, ಬಳಿಕ ಆಕೆಯನ್ನು ಹತ್ಯೆಗೈದು ಪರಾರಿಯಾಗಿದ್ದ. ತಮ್ಮ ಅಜ್ಜಿ ಮನೆಗೆ ಶುಕ್ರವಾರ ಮಧ್ಯಾಹ್ನ ಮೃತರ ಮೊಮ್ಮಕ್ಕಳು ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ರಾಮನಗರ ಜಿಲ್ಲೆಯ ನಂಜಮ್ಮ, ಹಲವು ವರ್ಷಗಳಿಂದ ಗೋವಿಂದರಾಜ ನಗರ ಠಾಣಾ ವ್ಯಾಪ್ತಿಯ ಎಸ್‌ವಿಜಿ ನಗರದಲ್ಲಿ ನೆಲೆಸಿದ್ದರು. ಅಲ್ಲೇ ಸುತ್ತಮುತ್ತ ಮನೆಗಳಲ್ಲಿ ಅವರು ಕೆಲಸ ಮಾಡಿಕೊಂಡಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯಿಂದ ವಿವಾಹ ವಿಚ್ಛೇದನ ಪಡೆದಿದ್ದ ನಂಜಮ್ಮ ಪುತ್ರಿ ಸುಧಾ, ತಾಯಿ ಮನೆಯ ಹತ್ತಿರದಲ್ಲೇ ಇಬ್ಬರು ಮಕ್ಕಳ ಜತೆ ನೆಲೆಸಿದ್ದಳು. ನಾಲ್ಕೈದು ವರ್ಷಗಳ ಹಿಂದೆ ಸುಧಾಳಿಗೆ ಆನೇಕಲ್ ತಾಲೂಕಿನ ರಾಘವೇಂದ್ರ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಆತ್ಮೀಯತೆ ಮೂಡಿದೆ.
ಕೊನೆಗೆ ಇಬ್ಬರು ಒಟ್ಟಿಗೆ ವಾಸವಾಗಿದ್ದರು. ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ನಂಜಮ್ಮ, ಮಗಳಿಗೆ ರಾಘವೇಂದ್ರನಿಂದ ದೂರವಾಗುವಂತೆ ಒತ್ತಾಯಿಸುತ್ತಿದ್ದರು. ಇತ್ತೀಚೆಗೆ ಇದೇ ವಿಚಾರವಾಗಿ ನಂಜಮ್ಮ ಜತೆ ರಾಘವೇಂದ್ರ ಜಗಳವಾಡಿದ್ದ. ಇತ್ತ ತನ್ನ ತಾಯಿ ಮನೆಗೆ ಹೋಗುವುದಾಗಿ ಸುಧಾ ಹೇಳುತ್ತಿದ್ದಳು. ಇದರಿಂದ ಕೆರಳಿದ ರಾಘವೇಂದ್ರ, ತಮ್ಮ ಸಂಬಂಧ ಅಡ್ಡಿಪಡಿಸುತ್ತಿರುವ ನಂಜಮ್ಮ ಹತ್ಯೆಗೆ ನಿರ್ಧರಿಸಿದ್ದ. ಅಂತೆಯೇ ಗುರುವಾರ ರಾತ್ರಿ ನಂಜಮ್ಮ ಮನೆಗೆ ತೆರಳಿ ಕೃತ್ಯ ಎಸಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅನೈತಿಕ ಸಂಬಂಧಕ್ಕೆ ಅಡ್ಡಿ ಎಂದು ಗಂಡನನ್ನೇ ಕೊಂದ ಹೆಂಡ್ತಿ..!
ಮೂರು ದಿನದ ಹಿಂದೆ ನಡೆದ ಖಾಸಗಿ ಕಂಪನಿ ಅಕೌಂಟೆಂಟ್ ಶಂಕರ್ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಅನೈತಿಕ ಸಂಬಂಧಕ್ಕೆ(Illicit Relationship) ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ಪತ್ನಿಯೇ ಗಾಢ ನಿದ್ರೆಯಲ್ಲಿದ್ದ ಪತಿಯ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿ ಕೊಲೆ(Murder) ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಕಳೆದ ಗುರುವಾರ ಖಾಸಗಿ ಕಂಪನಿ ಅಕೌಂಟೆಂಟ್ ಶಂಕರ್ ರೆಡ್ಡಿ (35) ಹತ್ಯೆಯಾಗಿತ್ತು. ಈ ಸಂಬಂಧ ಮೃತನ ಪತ್ನಿ ದಿಲ್ಲಿ ರಾಣಿ(26) ಎಂಬಾಕೆಯನ್ನು ಯಶವಂತಪುರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ(Arrest). ತಲೆಮರೆಸಿಕೊಂಡಿರುವ ಆಕೆಯ ಪ್ರಿಯಕರನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಗನೆದುರೇ ತಾಯಿಗೆ 16 ಬಾರಿ ಚೂರಿ ಇರಿದ ಪ್ರೇಮಿ, ಶಾಕ್‌ನಿಂದ ಕಪಾಟಿನಲ್ಲಿ ಬಂಧಿಯಾದ ಕಂದ!
ಆಂಧ್ರಪ್ರದೇಶದ(Andhra Pradesh) ಮೂಲದ ಮೃತ ಶಂಕರ್ ರೆಡ್ಡಿ ಚಿತ್ತೂರು ಮೂಲದ ದಿಲ್ಲಿ ರಾಣಿಯನ್ನು ವಿವಾಹವಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದರು. ನಗರದ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದ ಶಂಕರ್ ರೆಡ್ಡಿ ಪತ್ನಿ ಹಾಗೂ ಮಕ್ಕಳೊಂದಿಗೆ ಯಶವಂತಪುರದ ಮೋಹನಕುಮಾರ್ ನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ದಿಲ್ಲಿ ರಾಣಿ ಪತಿ ಶಂಕರ್ ರೆಡ್ಡಿ ಜತೆ ಮುನಿಸಿಕೊಂಡು ಚಿತ್ತೂರಿನ ತವರು ಮನೆಯಲ್ಲಿದ್ದಳು. ಈ ವೇಳೆ ನೆರೆ ಮನೆಯ ವ್ಯಕ್ತಿಯ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ಪತ್ನಿಗೆ ಕರೆ ಮಾಡಿದ್ದ ಶಂಕರ್, ಮನೆಗೆ ವಾಪಸಾಗುವಂತೆ ಒತ್ತಾಯಿಸಿದ್ದ. ಅಂತೆಯೆ ಆಕೆಯ ಪೋಷಕರಿಗೂ ಕರೆ ಮಾಡಿ ಆಕೆಯನ್ನು ಮನೆಗೆ ಕಳುಹಿಸುವಂತೆ ಕೇಳಿಕೊಂಡಿದ್ದ. ಶಂಕರ್ ಜತೆಗೆ ಬರಲು ದಿಲ್ಲಿ ರಾಣಿಗೆ ಇಷ್ಟವಿರಲಿಲ್ಲ. ಹೀಗಾಗಿ ಈ ವಿಚಾರವನ್ನು ತನ್ನ ಪ್ರಿಯಕರನಿಗೆ ತಿಳಿಸಿದ್ದಳು. ಈ ವೇಳೆ ಪ್ರಿಯಕರ ಕೊಲೆ ಮಾಡಿ ಕಥೆ ಕಟ್ಟುವ ಐಡಿಯಾ ನೀಡಿದ್ದ. ಹೀಗಾಗಿ ಮೂರು ದಿನದ ಹಿಂದೆಯಷ್ಟೇ ದಿಲ್ಲಿ ರಾಣಿ ಶಂಕರ್‌ಗೆ ಮನೆಗೆ ಬಂದಿದ್ದಳು.