ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ, ರಾತ್ರೋರಾತ್ರಿ ಕೋಣವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯರು ವಾಹನವನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಆರೋಪಿಗಳನ್ನು ಬಂಧಿಸಿ ವಾಹನ ಹಾಗೂ ಕೋಣವನ್ನು ವಶಪಡಿಸಿಕೊಳ್ಳಲಾಗಿದೆ.
ಕಾರವಾರ (ನ.16): ರಾತ್ರೋರಾತ್ರಿ ಕೋಣ ಕಳ್ಳ ಸಾಗಾಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಿದ್ದರ ಐಟಿಐ ಕ್ರಾಸ್ ಬಳಿ ಪೊಲೀಸರು ಬಂಧಿಸಿದ್ದಾರೆ.
ಚಾಲಕ ಅಣ್ಣಪ್ಪ ಗೌಡಪ್ಪ ನಾಯ್ಕ (35), ಕ್ಲೀನರ್ ಶಿವಾನಂದ ಬಸವಣ್ಣೆಪ್ಪ ರೋಟಗೋಡ (26), ಖಾರ್ಗೆಜೂಗದ ಶೈಲೇಶ್ ಮಹಾಭಲೇಶ್ವರ ನಾಯ್ಕ ಹಾಗೂ ಪರಶುರಾಮ ಮನೋಹರ ಮಾಂಜೇಕರ ಬಂಧಿತ ಆರೋಪಿಗಳು.
ಯಾರದ್ದೋ ಕೋಣ ಸಾಗಿಸುತ್ತಿದ್ದ ಖದೀಮರು:
ಯಾರದ್ದೋ ಕೋಣವನ್ನು ಟಾಟಾ ಇಂಟ್ರಾ ವಾಹದಲ್ಲಿ ಕಟ್ಟಿಹಾಕಿದ್ದ ಆರೋಪಿಗಳು ಖಾರ್ಗೆಜೋಗದಿಂದ ಯಲ್ಲಾಪುರ–ಕಿರವತ್ತಿಯ ಕಡೆಗೆ ಕಳ್ಳ ಸಾಗಾಣೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಸಿದ್ದರ ಐಟಿಐ ಕ್ರಾಸ್ ಬಳಿ ಸಂಶಯಾಸ್ಪದವಾಗಿ ವಾಹನ ಚಲಿಸುತ್ತಿರುವುದನ್ನು ಸ್ಥಳೀಯರು ಗಮನಿಸಿ. ವಾಹನವನ್ನು ನಿಲ್ಲಿಸಿ ಆರೋಪಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ವಾಹನದೊಳಗೆ ಕಟ್ಟಿಹಾಕಿರುವ ಕೋಣ ಕಂಡುಬಂದಿದೆ. ಈ ಹಿನ್ನೆಲೆ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ಬಂದ ಕಾರವಾರ ಗ್ರಾಮೀಣ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಾಹನ ಮತ್ತು ಕೋಣ ವಶಪಡಿಸಿಕೊಂಡಿದ್ದಾರೆ.
ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು
ಈ ಪ್ರಕರಣವು ಕಾರವಾರ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕೋಣ ಸಾಗಾಟಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಕೋಣ ಕಳ್ಳಸಾಗಾಟದಂತಹ ಅಕ್ರಮಗಳು ಹೆಚ್ಚಾಗುತ್ತಿರುವುದರಿಂದ, ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಕಟ್ಟುನಿಟ್ಟು ನಿಗಾ ಇರಿಸಿದ್ದಾರೆ.
