ಕುಶಾಲನಗರ ಗಣಪತಿ ರಥೋತ್ಸವದ ಅಂಗವಾಗಿ ನಡೆದ ಜಾನುವಾರು ಜಾತ್ರೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಹೋರಿಗಳು ಪ್ರದರ್ಶನಗೊಂಡವು. ಮೈಸೂರು, ಹಾಸನ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳ ರೈತರು ತಮ್ಮ ಅಮೃತ್ ಮಹಲ್, ಹಳ್ಳಿಕಾರ್ ತಳಿಯ ಹೋರಿಗಳನ್ನು ಪ್ರದರ್ಶಿಸಿದರು.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಗು

ಕೊಡಗು (ನ.13) : ಒಬ್ಬೊಬ್ಬರಿಗೂ ಒಂದೊಂದು ಕ್ರೇಜ್ ಇರುತ್ತದೆ ಅಲ್ವಾ.? ಅದರಲ್ಲೂ ಇಂದಿನ ಯುವಜನರಿಗೆ ಲಕ್ಷ ಲಕ್ಷ ಬೆಲೆಯ ಕಾರು, ಬೈಕುಗಳನ್ನು ಖರೀದಿಸುವುದು ಎಂದರೆ ಸಖತ್ ಕ್ರೇಜು ಇದ್ದೇ ಇರುತ್ತೆ. ಆದರೆ ಇಲ್ಲಿನ ನಡೆದ ಜಾನುವಾರು ಜಾತ್ರೆಯಲ್ಲಿ ಸಾಮಾನ್ಯ ವರ್ಗದ ಕಾರಿನ ಬೆಲೆಯನ್ನು ಮೀರಿಸುವ ಹೋರಿಗಳನ್ನು ರೈತರು ಪ್ರದರ್ಶಿಸಿದ್ರು. ಜಾನುವಾರುಗಳನ್ನು ಸಾಕುವ ರೈತರ ಕ್ರೇಜ್ ಹೇಗಿದೆ ನೀವು ನೋಡಿ.

ಬಂದವರನ್ನೆಲ್ಲಾ ಕೆಕ್ಕರಿಸಿ ನೋಡುತ್ತಿರುವ, ಬರೋಬ್ಬರಿ ಮೂರು ಲಕ್ಷ ಬೆಲೆಯ ಅಮೃತ್ ಮಹಲ್ ತಳಿಯ ಒಂಟಿ ಗೂಳಿ. ಮುದ್ದು ಮುದ್ದಾಗಿರುವ ಐದು ಲಕ್ಷ ಬೆಲೆಯ ಹಳ್ಳಿಕಾರ್ ತಳಿಯ ಜೋಡಿ ಕರುಗಳು. ಐದು ಲಕ್ಷ ಬೆಲೆಯ ಹಳ್ಳಿಕಾರ್ ತಳಿಯ ಜೋಡೆತ್ತುಗಳು. ಅಬ್ಬಬ್ಬಾ ಇದೇನು ಯಾವ ಹೋರಿ, ಎತ್ತು ಮತ್ತು ಗೂಳಿಯ ಬೆಲೆಯ ಕೇಳಿದರೂ ಸಾಮಾನ್ಯ ವರ್ಗದ ಒಂದು ಕಾರಿನ ಬೆಲೆಯನ್ನು ಮೀರಿಸುವಷ್ಟು ರೇಟ್. ಹೌದು ಇಂದಿನ ಯುವಕರಿಗೆ ಕಾರು, ಬೈಕುಗಳನ್ನು ಖರೀದಿಸುವ ಕ್ರೇಜು ಇದ್ದರೆ ದೇಶಕ್ಕೆ ಅನ್ನ ಬೆಳೆದುಕೊಡುವ ರೈತರಿಗೆ ಮಾತ್ರ ಲಕ್ಷ ಲಕ್ಷ ಬೆಲೆಯ ಹೋರಿಗಳನ್ನು ಬೆಳೆಸುವುದೆಂದರೆ ಇನ್ನಿಲ್ಲದ ಕ್ರೇಜು ಎನ್ನುವುದಕ್ಕೆ ಇಲ್ಲಿರುವ ಹೋರಿಗಳೇ ಸಾಕ್ಷಿ.

ಕುಶಾಲನಗರ ಗಣಪತಿ ರಥೋತ್ಸವ: ಜಾನುವಾರು ಜಾತ್ರೆ

ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಇಲ್ಲಿನ ಗಣಪತಿ ರಥೋತ್ಸವ ಮತ್ತು ಜಾತ್ರೆಯ ಅಂಗವಾಗಿ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ಕಂಡು ಬಂದ ಝಲಕ್ ಇದು. ಮೈಸೂರು, ಹಾಸನ, ಚಿಕ್ಕಮಗಳೂರು ಸೇರಿದಂತೆ ಸ್ಥಳೀಯ ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದಲೂ 150 ಕ್ಕೂ ಹೆಚ್ಚು ಜೋಡಿ ಹೋರಿಗಳು ಈ ಜಾನುವಾರು ಜಾತ್ರೆಯಲ್ಲಿ ಭಾಗವಹಿಸಿದ್ದವು. ಇವುಗಳನ್ನು ನೋಡಿದ ರೈತರು, ಇತರೆ ಜನರು ಗೋವುಗಳ ಬೆಲೆಯನ್ನು ಕೇಳಿ ಬಾಯಿ ಮೇಲೆ ಕೈ ಇಟ್ಟುಕೊಂಡಿದ್ದು ಸುಳ್ಳಲ್ಲ. ಇನ್ನು ರೈತರು ಅವುಗಳನ್ನು ಒಂದಷ್ಟು ಸಿಂಗಾರ ಮಾಡಿದ್ದನ್ನು ನೋಡಿ ಸಂತಸಪಟ್ಟರು. ಹಳ್ಳಿಕಾರ್ ಹೋರಿಗಳ ಜೊತೆಗೆ ಜರ್ಸಿ ತಳಿ, ಎಚ್ಎಫ್ ತಳಿಯ ಹಸುಗಳು, ಎಮ್ಮೆಗಳು, ಮಲೆನಾಡು ಗಿಡ್ಡ ತಳಿಯ ಹಸುಗಳು ಸೇರಿದಂತೆ ಎಚ್ಎಫ್ ತಳಿಯ ಹೋರಿಗಳು ಕೂಡ ಎಲ್ಲರ ಗಮನ ಸೆಳೆದವು. ರೈತರು ಅವುಗಳನ್ನು ಸಾಕುವ ರೀತಿಯ ಬಗ್ಗೆಯೂ ಯುವ ರೈತ ಮಂಜುನಾಥ್ ಹೇಳಿದರು.

ಜಾನುವಾರ ಜಾತ್ರೆ ಉದ್ಘಾಟಿಸಿದ ಶಾಸಕ ಮಂಥರ್ ಗೌಡ:

ಇನ್ನು ಜಾನುವಾರು ಜಾತ್ರೆಯನ್ನು ಉದ್ಘಾಟಿಸಿದ ಮಡಿಕೇರಿ ಶಾಸಕ ಮಂಥರ್ ಗೌಡ ಉತ್ತಮ ತಳಿಯ ಹೋರಿಗಳು ನೋಡಿ, ರೈತರಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು. ಜಾನುವಾರುಗಳ ಜೊತೆಗೆ ಹಲವು ತಳಿಯ ಮೇಕೆ, ಕುರಿಗಳನ್ನು ರೈತರು ಜಾನುವಾರ ಜಾತ್ರೆಯಲ್ಲಿ ಪ್ರದರ್ಶಿಸಿದರು. ಅಲ್ಲದೆ ಸೈಬೀರಿಯನ್ ಅಸ್ಕಿ, ಅಮೆರಿಕನ್ ಅಸ್ಕಿ, ಲ್ಯಾಬ್ರಡಾಲ್, ಜರ್ಮನ್ ಶಫರ್ಡ್ ಸೇರಿದಂತೆ ಹಲವು ತಳಿಯ ಮುದ್ದಿನಿಂದ ಸಾಕಿದ ನಾಯಿಗಳನ್ನು ಕೂಡ ರೈತರು ಜಾನುವಾರು ಜಾತ್ರೆಯಲ್ಲಿ ಪ್ರದರ್ಶಿಸಿದರು.

ಕಷ್ಟಪಟ್ಟು ದುಡಿಯುವ ರೈತರಿಗೆ ಜಾನುವಾರುಗಳೆಂದರೆ ತಮ್ಮ ಮಕ್ಕಳಿದ್ದಂತೆ. ಅಷ್ಟೇ ಜೋಪಾನವಾಗಿ ಅವುಗಳನ್ನು ಸಾಕಿರುತ್ತಾರೆ. ಅವರಿಗೆ ಒಂದು ವೇದಿಕೆಯನ್ನು ಕೊಡಲೇಬೇಕು. ಈ ಉದ್ದೇಶದಿಂದಲೇ ಜಾನುವಾರು ಜಾತ್ರೆ ನಡೆಯುತ್ತಿದೆ. ನಿಜವಾಗಿಯೂ ಇದು ಅರ್ಥಪೂರ್ಣ. ರೈತರು ಜಾನುವಾರು ಸಾಕಾಣಿಕೆ ಕುರಿತು ಪರಸ್ಪರ ಮಾಹಿತಿ ವಿನಿಮಯಕ್ಕೂ ಇದು ಉತ್ತಮ ವೇದಿಕೆ ಎಂದರು. ಒಟ್ಟಿನಲ್ಲಿ ಕುಶಾಲನಗರ ಗಣಪತಿ ರಥೋತ್ಸವದ ಅಂಗವಾಗಿ ನಡೆದ ಜಾನುವಾರು ಜಾತ್ರೆ ರೈತರಿಗೆ ಒಳ್ಳೆಯ ಪ್ರೋತ್ಸಾಹ ಕೊಡುವುದರ ಜೊತೆಗೆ ಹೋರಿಗಳನ್ನು ಸಾಕುವ ರೈತರ ಕ್ರೇಜ್ ಏನು ಎನ್ನುವುದನ್ನು ಸಾರಿ ಹೇಳಿತು.