ಹನಿಮೂನ್​ಗೆಂದು ಕರೆದೊಯ್ದು ಪತಿಯನ್ನೇ ಕೊಲೆ ಮಾಡಿಸಿದ ಆರೋಪ ಹೊತ್ತಿರುವ ಸೋನಮ್ ರಘುವಂಶಿಗೆ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದೆ. ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ಮೂರು ವಾರಗಳಲ್ಲಿ ಶರಣಾಗುವಂತೆ ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣವನ್ನು ಆರು ತಿಂಗಳೊಳಗೆ ಇತ್ಯರ್ಥಪಡಿಸುವಂತೆಯೂ ಪರೋಕ್ಷವಾಗಿ ಸೂಚನೆ ನೀಡಿದೆ.

'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾವನ್ನು ನೆನಪಿಸುವ ರೀತಿಯಲ್ಲಿಯೇ ಹನಿಮೂನ್​ಗೆ ಕರೆದುಕೊಂಡು ಹೋಗಿ ಲವರ್​ ಜೊತೆಗೂಡಿ ಅಮಾಯಕ ಪತಿಯನ್ನು ಕೊಲೆ ಮಾಡಿರುವ ಆರೊಪ ಹೊತ್ತ ಸೋನಮ್‌ ರಘುವಂಶಿ ನೆನಪಿರಬೇಕಲ್ಲವೆ? ಕಳೆದ ಜೂನ್​ನಲ್ಲಷ್ಟೇ ಈ ಘಟನೆ ನಡೆದಿತ್ತು. ಮೇಘಾಲಯ ಹನಿಮೂನ್‌ ಕೊಲೆ ಪ್ರಕರಣವೆಂದೇ ಇದು ಫೇಮಸ್​ ಆಗಿದೆ. ತನ್ನ ಪ್ರಿಯಕರ ಕಳುಹಿಸಿದ ಸುಪಾರಿ ಹಂತಕರ ನೆರವಿನಿಂದ ಪತಿ ರಾಜಾ ರಘುವಂಶಿಯನ್ನೇ ಕೊಲೆ ಮಾಡಿರುವ ಆರೋಪ ಸೋನಮ್‌ ರಘುವಂಶಿ ಜೊತೆಗಿದೆ. ಆದರೆ ಆಕೆ ಇನ್ನೂ ಕಾನೂನಿನ ದೃಷ್ಟಿಯಲ್ಲಿ ಆರೋಪಿಯಷ್ಟೇ. ಅವಳೇ ಕೊಲೆ ಮಾಡಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳು ಇದ್ದರೂ, ಅದನ್ನುಕೋರ್ಟ್​ ಮುಂದೆ ಸಾಬೀತುಪಡಿಸಿ ಕೋರ್ಟ್​ ಆದೇಶ ಹೊರಡಿಸುವವರೆಗೂ ಅವಳು ಆರೋಪಿಯಷ್ಟೇ.

ಸುಪ್ರೀಂಕೋರ್ಟ್​ ಹೇಳಿದ್ದೇನು?

ಸದ್ಯ ಸೋನಮ್​ ರಘುವಂಶಿ ಜಾಮೀನಿನ ಮೇಲೆ ಹೊರಗಡೆ ಇದ್ದಾಳೆ. ನನಗೆ ಜಾಮೀನು ನೀಡುವಾಗ ಕೋರ್ಟ್​ ಹೇಳಿದ್ದನ್ನು ಪಾಲಿಸುತ್ತೇನೆ. ಊರು ಬಿಟ್ಟು ಹೋಗುವುದಿಲ್ಲ. ನಾನು ಎಲ್ಲಿ ಇದ್ದೇನೆ ಎಂದು ಯಾರಿಗೂ ಹೇಳುವುದಿಲ್ಲ... ಎಂಬಿತ್ಯಾದಿಯಾಗಿ ಪಾಪದವಳಂತೆ ಪೋಸ್​ ಕೊಟ್ಟು ಮಾಧ್ಯಮಗಳ ಎದುರು ಸೋನಮ್​ ಮಾತನಾಡಿದ್ದಾಳೆ. ಒಂದಿಷ್ಟು ವರ್ಷ ಪ್ರಕರಣ ನಡೆದು ಆಕೆ ಅಪರಾಧಿ ಎಂದು ಸಾಬೀತಾದರೆ, ಅದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್​ ಸಫಲವಾದರೆ, ಅವಳಿಗೆ ಶಿಕ್ಷೆ ಆಗಬಹುದು. ಆದರೆ ಅಲ್ಲಿಯವರೆಗೆ ಒಂದಿಷ್ಟು ಷರತ್ತು ಹೊರತುಪಡಿಸಿ ಆರಾಮಾಗಿ ಓಡಾಡಿಕೊಂಡು ಇರುವ ಸ್ವಾತಂತ್ರ್ಯ ಅವಳಿಗೆ ಕಾನೂನು ನೀಡಿತ್ತು.

ಆದರೆ ಇದೀಗ ಕುತೂಹಲ ಘಟ್ಟದಲ್ಲಿ ಸುಪ್ರೀಂಕೋರ್ಟ್​ ಸೋನಮ್​ಗೆ ನೀಡಿರುವ ಜಾಮೀನನ್ನು ರದ್ದು ಮಾಡಿದೆ. ಮೂರು ವಾರಗಳಲ್ಲಿ ಶರಣಾಗುವಂತೆ ಅವಳಿಗೆ ಆದೇಶಿಸಿದೆ. ಸೋನಂ ವಿರುದ್ಧದ ಆರೋಪಗಳು "ಸಾಕಷ್ಟು ಗಂಭೀರ" ಎಂದು ಹೇಳಿರುವ, ನ್ಯಾಯಮೂರ್ತಿಗಳಾದ ಎಂ ಎಂ ಸುಂದ್ರೇಶ್ ಮತ್ತು ಪಿ ಬಿ ವರಾಲೆ ಅವರ ಪೀಠವು ವಿಚಾರಣಾ ಪ್ರಕ್ರಿಯೆಗಳು ಪೂರ್ಣಗೊಳ್ಳದಿದ್ದರೆ ಆರು ತಿಂಗಳ ನಂತರ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದೆ. ಈ ಮೂಲಕ ಆರು ತಿಂಗಳ ಒಳಗೆ ಈ ಕೇಸ್​ಗೆ ಅಂತ್ಯ ಹಾಡುವಂತೆ ಪರೋಕ್ಷವಾಗಿ ಕೋರ್ಟ್​ ಸೂಚನೆ ನೀಡಿದೆ.

ಅವಿಭಕ್ತ ಕುಟುಂಬಗಳ ಮಹತ್ವ

ವಿಚಾರಣೆಯ ಸಮಯದಲ್ಲಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೇಶದಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆಗಳ ಮಹತ್ವವನ್ನು ಎತ್ತಿ ತೋರಿಸಿದೆ. "ವೈವಾಹಿಕ ವಿವಾದಗಳ ಹೆಚ್ಚಳದೊಂದಿಗೆ ವೈಯಕ್ತಿಕ ಕಾನೂನುಗಳೊಂದಿಗೆ ಸಂಘರ್ಷ ಹೆಚ್ಚಾಗುವುದನ್ನು ನಾವು ನೋಡುತ್ತೇವೆ. ದಂಪತಿಯಲ್ಲಿ ಸಮಸ್ಯೆಗಳಿದ್ದಲ್ಲಿ, ಹಿರಿಯರು ಅದನ್ನು ಪರಿಹರಿಸುವ ವ್ಯವಸ್ಥೆ ಅವಿಭಕ್ತ ಕುಟುಂಬದಲ್ಲಿ ಇತ್ತು. ಆದರೆ ಇಂದು ಹಾಗಿಲ್ಲ. ವಿಭಕ್ತ ಕುಟುಂಬಗಳೇ ಹೆಚ್ಚಾಗಿವೆ. ಎಲ್ಲರೂ ಒಂಟಿಯಾಗಿರುತ್ತಾರೆ, ಇದರಿಂದ ಪ್ರತ್ಯೇಕತೆಗಳು ಹೆಚ್ಚುತ್ತಿದ್ದು, ಖಿನ್ನತೆಯೂ ಸಹ ಹೆಚ್ಚುತ್ತಿದೆ ಎಂದು ಹೇಳಿದರು. ಅದಕ್ಕೆ, ನ್ಯಾಯಮೂರ್ತಿ ಎಂ ಎಂ ಸುಂದರೇಶ್, "ಪ್ರಸ್ತುತ ಪೀಳಿಗೆ ನಮಗಿಂತ ಹೆಚ್ಚು ಜ್ಞಾನವುಳ್ಳವರಾಗಿರಬಹುದು, ಆದರೆ ಒತ್ತಡವನ್ನು ನಿಭಾಯಿಸುವ ವಿಷಯದಲ್ಲಿ ಅವರು ಹೆಚ್ಚು ದುರ್ಬಲರಾಗಿದ್ದಾರೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಈಗ ಸೋನಂ ರಘುವಂಶಿ ಮೂರು ವಾರಗಳ ಒಳಗೆ ಖುದ್ದಾಗಿ ಶರಣಾಗಬೇಕಿದೆ.