ಕ್ಷುಲ್ಲಕ ಕಾರಣಕ್ಕೆ ಪಾಪಿ ಪತಿಯೋರ್ವ ತನ್ನ ಪತ್ನಿಯ ತಲೆಗೆ ಲಟ್ಟಣಿಗೆಯಿಂದ ಹೊಡೆದ ಘಟನೆ ಬೆಂಗಳೂರಿನ ಪೀಣ್ಯದ ಬಳಿಯ ಚೊಕ್ಕಸಂದ್ರದಲ್ಲಿ ನಡೆದಿದೆ. ಸೆಪ್ಟೆಂಬರ್ 24ರಂದು ನಡೆದಿದ್ದ ಘಟನೆಯು ಇದೀಗ ಬೆಳಕಿಗೆ ಬಂದಿದೆ.

ಬೆಂಗಳೂರು (ಅ.06): ಕ್ಷುಲ್ಲಕ ಕಾರಣಕ್ಕೆ ಪಾಪಿ ಪತಿಯೋರ್ವ ತನ್ನ ಪತ್ನಿಯ ತಲೆಗೆ ಲಟ್ಟಣಿಗೆಯಿಂದ ಹೊಡೆದ ಘಟನೆ ಬೆಂಗಳೂರಿನ ಪೀಣ್ಯದ ಬಳಿಯ ಚೊಕ್ಕಸಂದ್ರದಲ್ಲಿ ನಡೆದಿದೆ. ಸೆಪ್ಟೆಂಬರ್ 24ರಂದು ನಡೆದಿದ್ದ ಘಟನೆಯು ಇದೀಗ ಬೆಳಕಿಗೆ ಬಂದಿದೆ. ಕುಡಿಯೋಕೆ ನೀರು ಕೇಳಿದ ಪತಿಗೆ ಕೊಡದೇ ಇದ್ದಾಗ ಪತ್ನಿಯ ತಲೆಗೆ ಹೊಡೆದಿದ್ದಾನೆ. ಪತಿಯ ಏಟಿಗೆ ಕೋಮಾಗೆ ಹೋಗಿದ್ದ ಪತ್ನಿ ಸದ್ಯ ಚಿಕಿತ್ಸೆ ಫಲಿಸದೇ ಸಾವನಪ್ಪಿದ್ದಾರೆ.

ಮಧ್ಯಪ್ರದೇಶ ಮೂಲದ ಪ್ರೀತಿ ಸಿಂಗ್ (26) ಪತಿಯಿಂದಲೇ ಕೊಲೆಯಾದ ಪತ್ನಿ. ಛೋಟೆಲಾಲ್ ಸಿಂಗ್ ಹಾಗೂ ಪ್ರೀತಿ ಸಿಂಗ್ ಗಂಡ-ಹೆಂಡತಿ. ಇಬ್ಬರೂ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಸೆಪ್ಟೆಂಬರ್ 24 ರಂದು ಮನೆಗೆ ಬಂದ ಛೋಟೆಲಾಲ್ ಹೆಂಡ್ತಿ ಬಳಿ ನೀರನ್ನ ಕೇಳ್ತಾನೆ. ನಾನು ಕೆಲ್ಸಕ್ಕೆ ಹೋಗ್ಬೇಕು ನೀರು ನೀನೇ ತಗೊಂಡು ಕುಡಿ‌ ಎಂದ್ಲಂತೆ. ಅಷ್ಟೊತ್ತಿಗಾಗಲೇ ಮದ್ಯಸೇವಿಸಿ ಬಂದಿದ್ದ ಛೋಟೆಲಾಲ್ ಲಟ್ಟಣಿಗೆಯಲ್ಲಿ ಪತ್ನಿಯ ತಲೆಗೆ ಬೀಸಿದ್ದ.

ಗಂಭೀರವಾಗಿ ಗಾಯಗೊಂಡ ಪತ್ನಿ ಪ್ರೀತಿ ಅಲ್ಲೇ ಕೋಮಾಗೆ ಜಾರಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗ್ತಿತ್ತು. ಆದ್ರೆ, ಚಿಕಿತ್ಸೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಪ್ರೀತಿ ಕೊನೆಯುಸಿರೆಳೆದಿದ್ದಾಳೆ. ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಛೋಟೆಸಿಂಗ್‌ನನ್ನ ಬಂಧಿಸಲಾಗಿದ್ದು, ಪೀಣ್ಯ ಪೊಲೀಸರಿಂದ ತನಿಖೆ‌ ಮುಂದುವರಿದಿದೆ.

ಇನ್ಶುರೆನ್ಸ್‌ ಹಣಕ್ಕಾಗಿ ವ್ಯಕ್ತಿ ಕೊಲೆ

5.25 ಕೋಟಿ ಮೊತ್ತದ ಇನ್ಶುರೆನ್ಸ್‌ ಹಣಕ್ಕಾಗಿ ನಕಲಿ ಮದುವೆ ಮಾಡಿಸಿ, ಸ್ಟ್ರೋಕ್‌ನಿಂದ ಬಳಲುತ್ತಿದ್ದ ವ್ಯಕ್ತಿ ಬೈಕ್‌ ಹೊಡೆಯಲು ಹೋಗಿ ಅಪಘಾತವಾಗಿದೆ ಎಂದು ಕಥೆ ಕಟ್ಟಿ ಕೊಲೆ ಮಾಡಿದ್ದ ಆರು ಮಂದಿಯನ್ನು ಇಲ್ಲಿನ ಪಟ್ಟಣ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಳ್ಳಾರಿ ಜಿಲ್ಲೆ ಕಂಪ್ಲಿ ಜಿರಿಗನೂರು ಗ್ರಾಮದ ನಿವಾಸಿ ಕೆ.ಗಂಗಾಧರ (35) ಕೊಲೆಯಾದ ವ್ಯಕ್ತಿ. ಹಿಟ್ ಆ್ಯಂಡ್ ರನ್ ಎಂದು ನಂಬಿಸಿ ಅಮಾಯಕನ ಕೊಲೆ ಮಾಡಲಾಗಿದೆ. ನಗರದ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ತನಿಖೆ ಜಾಡು ಹಿಡಿದ ಪೊಲೀಸರು,

ಕೊಪ್ಪಳದ ಹೊಸ ಲಿಂಗಾಪುರದ ರವಿ, ಭಗತ್‌ ಸಿಂಗ್‌ ನಗರದ ಅಜಯ್, ರಿಯಾಜ್, ಹೊಸಪೇಟೆ ಆಕ್ಸಿಸ್ ಬ್ಯಾಂಕ್ ನೌಕರ ಯೋಗರಾಜ್ ಸಿಂಗ್, ಕೊಪ್ಪಳ ಗಂಗಾವತಿ ಬಾಲಕಿಯರ ಪಿಯು ಕಾಲೇಜು ಉಪ ಪ್ರಾಂಶುಪಾಲ ಕೃಷ್ಣಪ್ಪ ಮತ್ತು ನಕಲಿ ಮದುವೆಯಾದ ಭಗತ್‌ ಸಿಂಗ್‌ ನಗರದ ಹುಲಿಗೆಮ್ಮ ಎಂಬ ಮಹಿಳೆ ಸೇರಿ ಆರು ಜನರನ್ನು ಬಂಧಿಸಿದ್ದಾರೆ. ಆಕ್ಸಿಸ್ ಬ್ಯಾಂಕ್ ನೌಕರ ಯೋಗರಾಜ್ ಸಿಂಗ್ ಈ ಕುಕೃತ್ಯಕ್ಕೆ ಯೋಜನೆ ರೂಪಿಸಿದ್ದು, ಗಂಗಾವತಿ ಬಾಲಕಿಯರ ಪಿಯು ಕಾಲೇಜು ಉಪ ಪ್ರಾಂಶುಪಾಲ ಕೃಷ್ಣಪ್ಪ ಈ ಕೊಲೆ ಮಾಸ್ಟರ್‌ ಮೈಂಡ್‌ ಆಗಿದ್ದ. ಈಗ ಆರು ಜನರನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಎಸ್‌. ಜಾಹ್ನವಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.